ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಕರಣ ಭೇದಿಸುವಲ್ಲಿ ಪೊಲೀಸರು ವಿಫಲವಾದರೆ ವೈದ್ಯೆ ಹತ್ಯೆ ತನಿಖೆ ಸಿಬಿಐಗೆ: ಮಮತಾ

ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣ | ದೇಶದ ವಿವಿಧೆಡೆ ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ
Published : 12 ಆಗಸ್ಟ್ 2024, 10:19 IST
Last Updated : 12 ಆಗಸ್ಟ್ 2024, 10:19 IST
ಫಾಲೋ ಮಾಡಿ
Comments

ಕೋಲ್ಕತ್ತ: ಇಲ್ಲಿನ ಸರ್ಕಾರಿ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ನಡೆದಿದ್ದ ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಪೊಲೀಸರು ಭಾನುವಾರದೊಳಗೆ ಬೇಧಿಸದಿದ್ದರೆ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತಿಳಿಸಿದರು.

ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಿ, ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಅವರು, ‘ಈ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಯಬೇಕು ಮತ್ತು ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆಯಾಗಬೇಕು‘ ಎಂದು ಹೇಳಿದರು.

‘ವಿದ್ಯಾರ್ಥಿನಿಯ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಶೀಘ್ರ ಬಂಧಿಸಬೇಕು. ಈ ಕಾರ್ಯವನ್ನು ಅವರು ಭಾನುವಾರದೊಳಗೆ ಮಾಡದಿದ್ದರೆ, ಪ್ರಕರಣವನ್ನು ಸಿಬಿಐಗೆ ವಹಿಸುತ್ತೇನೆ. ಸಿಬಿಐನ ಯಶಸ್ಸಿನ ಪ್ರಮಾಣವೂ ಕಡಿಮೆ ಇದೆ ಎಂಬುದು ಗೊತ್ತಿದೆ. ಅದು ಪ್ರತಿಷ್ಠಿತ ವ್ಯಕ್ತಿಗಳ ಪ್ರಕರಣಗಳನ್ನೇ ಬೇಧಿಸಿಲ್ಲ. ಹೀಗಿದ್ದರೂ, ಈ ಪ್ರಕರಣವನ್ನು ಸಿಬಿಐಗೆ ವಹಿಸಲು ನನಗೆ ಯಾವುದೇ ಅಭ್ಯಂತರವಿಲ್ಲ’ ಎಂದು ಅವರು ಉತ್ತರಿಸಿದರು.

‘ಆಸ್ಪತ್ರೆಯ ಒಳಗಿನವರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಸಂತ್ರಸ್ತೆಯ ಪೋಷಕರು ಶಂಕಿಸಿದ್ದಾರೆ. ಹೀಗಾಗಿ ಈ ಕುರಿತೂ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಸಂತ್ರಸ್ತೆಯ ಸ್ನೇಹಿತರು ಮತ್ತು ಇತರರನ್ನು ಪ್ರಶ್ನಿಸುವಂತೆಯೂ ತಿಳಿಸಿದ್ದೇನೆ’ ಎಂದು ಬ್ಯಾನರ್ಜಿ ಹೇಳಿದರು.  

ದೇಶದ ವಿವಿಧೆಡೆ ಪ್ರತಿಭಟನೆ: ವೈದ್ಯಕೀಯ ಸೇವೆ ಸ್ಥಗಿತ

ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಿ ಸ್ಥಾನಿಕ ವೈದ್ಯರ ಸಂಘಗಳ ಒಕ್ಕೂಟವು (ಫೋರ್ಡಾ) ಸೋಮವಾರ ದೇಶವ್ಯಾಪಿ ಒಪಿಡಿಗಳು ಮತ್ತು ತುರ್ತು ಅಲ್ಲದ ಸೇವೆಗಳನ್ನು ಸ್ಥಗಿತಗೊಳಿಸಲು ಕರೆ ನೀಡಿತ್ತು.

ಫೋರ್ಡಾ ಕರೆಯಂತೆ  ದೆಹಲಿಯ ‘ಏಮ್ಸ್‌’ ಸ್ಥಾನಿಕ ವೈದ್ಯರ ಸಂಘ ಸೇರಿದಂತೆ ದೆಹಲಿಯ 10 ಆಸ್ಪತ್ರೆಗಳು ಒಪಿಡಿ ತುರ್ತು ಅಲ್ಲದ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದವು.

ಆರ್‌.ಜಿ. ಕರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಾಲ್ಕನೇ ದಿನವೂ ಪ್ರತಿಭಟನೆ ಮುಂದುವರಿಸಿದರು. ಸಂತ್ರಸ್ತೆಯ ಮರಣೋತ್ತರ ಪರೀಕ್ಷಾ ವರದಿ ಮತ್ತು ಸಭಾಂಗಣದಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಲಖನೌ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು

ನವದೆಹಲಿಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸುವ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಂಶುಪಾಲ ರಾಜೀನಾಮೆ

ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅವರು ಪ್ರಾಂಶುಪಾಲ ಹುದ್ದೆ ಮತ್ತು ಸರ್ಕಾರಿ ಸೇವೆಗೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ವೈದ್ಯಕೀಯ ಸೂಪರಿಂಟೆಂಡೆಂಟ್‌ ಮತ್ತು ಉಪ ಪ್ರಾಂಶುಪಾಲ (ಎಂಎಸ್‌ವಿಪಿ) ಸಂಜಯ್‌ ವಶಿಷ್ಠ ಅವರನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಸ್ಥಾನದಿಂದ ತೆರವುಗೊಳಿಸಲಾಗಿದೆ. ಎದೆರೋಗ ವೈದ್ಯಕೀಯ ವಿಭಾಗದ ಮುಖ್ಯಸ್ಥರು ಮತ್ತು ಆಸ್ಪತ್ರೆಯ ಭದ್ರತಾ ವ್ಯವಸ್ಥೆಯ ಉಸ್ತುವಾರಿಯಾದ ಎಸಿಪಿಯನ್ನು ಆ ಸ್ಥಾನಗಳಿಂದ ತೆಗೆಯಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT