ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾರುವೇಷದಲ್ಲಿ ದೆಹಲಿ ಪ್ರಯಾಣ | ಸಾಬೀತಾದರೆ ರಾಜಕೀಯ ನಿವೃತ್ತಿ: ಅಜಿತ್‌ ಪವಾರ್‌

Published : 2 ಆಗಸ್ಟ್ 2024, 16:00 IST
Last Updated : 2 ಆಗಸ್ಟ್ 2024, 16:00 IST
ಫಾಲೋ ಮಾಡಿ
Comments

ಮುಂಬೈ: ಬಿಜೆಪಿ ನೇತೃತ್ವದ ‘ಮಹಾಯುತಿ’ ಸರ್ಕಾರದ ಜತೆ ಕೈಜೋಡಿಸುವುದಕ್ಕೂ ಮುನ್ನ ಮಾರುವೇಷದಲ್ಲಿ ನವದೆಹಲಿಗೆ ಹೋಗಿ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದರು ಎಂಬ ಆರೋಪವನ್ನು ಅಲ್ಲಗಳೆದಿರುವ ಉಪ ಮುಖ್ಯಮಂತ್ರಿ, ಎನ್‌ಸಿಪಿ ಅಧ್ಯಕ್ಷ ಅಜಿತ್‌ ಪವಾರ್‌ ಅವರು, ‘ಈ ಆರೋಪವನ್ನು ಸಾಬೀತುಪಡಿಸಿದರೆ ರಾಜಕೀಯ ತ್ಯಜಿಸುವುದಾಗಿ’ ಘೋಷಿಸಿದರು. 

‘ಇದೆಲ್ಲ ಆಧಾರರಹಿತ ಆರೋಪಗಳಾಗಿವೆ. ನನಗೆ ಏನನ್ನೂ ಬಚ್ಚಿಟ್ಟು ರಾಜಕೀಯ ಮಾಡುವ ಅಭ್ಯಾಸ ಇಲ್ಲ’ ಎಂದು ಅವರು ಹೇಳಿದರು. 

ಎನ್‌ಸಿಪಿ (ಎಸ್‌ಪಿ) ಕಾರ್ಯಕಾರಿ ಅಧ್ಯಕ್ಷರೂ ಆಗಿರುವ ಸಂಸದೆ ಸುಪ್ರಿಯಾ ಸುಳೆ ಮತ್ತು ಶಿವಸೇನಾ (ಯುಬಿಟಿ) ನಾಯಕ, ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌ ಅವರು, ‘ಅಜಿತ್‌ ಪವಾರ್‌ ಮತ್ತು ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಕ್ರಮವಾಗಿ ಎನ್‌ಸಿಪಿ ಮತ್ತು ಶಿವಸೇನಾ ವಿಭಜಿಸುವುದಕ್ಕೂ ಮುನ್ನ ನವದೆಹಲಿಗೆ ಮಾರುವೇಷದಲ್ಲಿ ಹೋಗಿ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಗೋಪ್ಯ ಸಭೆ ನಡೆಸಿದ್ದರು’ ಎಂದು ಆರೋಪಿಸಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ ಪವಾರ್‌, ‘ಕೆಲವರು ನಾನು ಮಾಸ್ಕ್‌ ಮತ್ತು ಟೋಪಿಯನ್ನು ಧರಿಸಿ ವಿಮಾನದಲ್ಲಿ ದೆಹಲಿಗೆ ಹೋಗಿದ್ದೆ ಮತ್ತು ವಿಮಾನದಲ್ಲಿ ಸಂಚರಿಸುವಾಗ ಹೆಸರನ್ನೂ ಬದಲಿಸಿಕೊಂಡಿದ್ದೆ ಎಂದು ಆರೋಪಿಸಿದ್ದಾರೆ. ಈ ಸುಳ್ಳು ನಿರೂಪಣೆಯನ್ನು ನಮ್ಮ ವಿರೋಧಿಗಳು ಹಬ್ಬಿಸುತ್ತಿದ್ದಾರೆ. ಒಂದು ವೇಳೆ ಇದು ಸತ್ಯವೆಂದು ಸಾಬೀತಾದರೆ ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ’ ಎಂದು ಹೇಳಿದರು. 

‘ನಾನು ನಾಲ್ಕು ದಶಕಗಳಿಂದ ರಾಜಕೀಯದಲ್ಲಿದ್ದೇನೆ. ಎಲ್ಲರಿಗೂ ನನ್ನ ಬಗ್ಗೆ ಗೊತ್ತಿದೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿಯೂ ಕೆಲಸ ಮಾಡಿದ್ದೇನೆ. ನನಗೆ ಎಲ್ಲಿಗಾದರೂ ಹೋಗಬೇಕಿದ್ದರೆ ಮುಕ್ತವಾಗಿ ತೆರಳುತ್ತೇನೆ. ಯಾರಿಗೂ ಅಂಜುವ ಪ್ರಶ್ನೆಯೇ ಇಲ್ಲ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT