ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್ನೆರಡು ದಿನದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ: ಅರವಿಂದ ಕೇಜ್ರಿವಾಲ್

‘ಪ್ರಾಮಾಣಿಕತೆಯ ಪ್ರಮಾಣಪತ್ರ ಸಿಗುವವರೆಗೆ ಸಿ.ಎಂ ಆಗಲಾರೆ’
Published : 15 ಸೆಪ್ಟೆಂಬರ್ 2024, 7:13 IST
Last Updated : 15 ಸೆಪ್ಟೆಂಬರ್ 2024, 7:13 IST
ಫಾಲೋ ಮಾಡಿ
Comments

ನವದೆಹಲಿ: ಜನರು ತಮಗೆ ‘ಪ್ರಾಮಾಣಿಕತೆಯ ಪ್ರಮಾಣಪತ್ರ’ ನೀಡುವವರೆಗೂ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಅರವಿಂದ ಕೇಜ್ರಿವಾಲ್ ಶಪಥ ಮಾಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಎರಡು ದಿನಗಳ ನಂತರ ರಾಜೀನಾಮೆ ಸಲ್ಲಿಸುವುದಾಗಿ ಭಾನುವಾರ ಘೋಷಿಸಿದರು.

ದೆಹಲಿ ವಿಧಾನಸಭೆಗೆ ಅವಧಿಗೆ ಮೊದಲೇ ಚುನಾವಣೆ ನಡೆಸಲು ಆಗ್ರಹಿಸುವುದಾಗಿ ತಿಳಿಸಿದರು. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರು ಜಾಮೀನು ಪಡೆದು ಶುಕ್ರವಾರ ಜೈಲಿನಿಂದ ಬಿಡುಗಡೆ ಆಗಿದ್ದಾರೆ.

ಎಎಪಿ ಶಾಸಕರ ಸಭೆಯನ್ನು ಇನ್ನು ಎರಡು ದಿನಗಳಲ್ಲಿ ನಡೆಸಲಾಗುತ್ತದೆ. ಪಕ್ಷದ ನಾಯಕರೊಬ್ಬರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ ಎಂದು ಕೇಜ್ರಿವಾಲ್ ಪ್ರಕಟಿಸಿದರು.

‘ಫೆಬ್ರುವರಿಯಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಆದರೆ, ನವೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಜೊತೆಯಲ್ಲೇ ರಾಷ್ಟ್ರ ರಾಜಧಾನಿಯಲ್ಲೂ ಚುನಾವಣೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದೇನೆ’ ಎಂದು ಕೇಜ್ರಿವಾಲ್ ಅವರು ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಹೇಳಿದರು.

‘ನೀವು ಪ್ರಾಮಾಣಿಕರು ಎಂದು ಜನರು ಹೇಳಿದ ನಂತರವೇ ನಾನು ಮುಖ್ಯಮಂತ್ರಿ ಆಗುತ್ತೇನೆ, ಮನೀಶ್ ಸಿಸೋಡಿಯಾ ಅವರು ಉಪ ಮುಖ್ಯಮಂತ್ರಿ ಆಗುತ್ತಾರೆ’ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಕೂಡ ಆಗಿರುವ ಕೇಜ್ರಿವಾಲ್ ಹೇಳಿದರು.

‘ನಾನು ಭ್ರಷ್ಟ ಎಂದು ಸಾಬೀತು ಮಾಡಲು ಬಿಜೆಪಿ ಯತ್ನಿಸಿತು’ ಎಂದು ಆರೋಪಿಸಿದ ಕೇಜ್ರಿವಾಲ್, ‘ಜನರಿಗೆ ಒಳ್ಳೆಯ ಶಾಲೆ ಹಾಗೂ ಉಚಿತ ವಿದ್ಯುತ್ ನೀಡಲು ಬಿಜೆಪಿಗೆ ಸಾಧ್ಯವಿಲ್ಲ. ಏಕೆಂದರೆ ಬಿಜೆಪಿಯವರೇ ಭ್ರಷ್ಟರು’ ಎಂದರು. ‘ನಾವು ಪ್ರಾಮಾಣಿಕರು’ ಎಂದು ಪ್ರತಿಪಾದಿಸಿದರು.

‘ಬಿಜೆಪಿಯವರಲ್ಲದ ಮುಖ್ಯಮಂತ್ರಿಗಳ ವಿರುದ್ಧ ಆ ಪಕ್ಷದವರು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಾರೆ; ಬಂಧನ ಆದರೆ ರಾಜೀನಾಮೆ ಕೊಡಬಾರದು, ಅದರ ಬದಲಿಗೆ ಜೈಲಿನಿಂದಲೇ ಸರ್ಕಾರವನ್ನು ಮುನ್ನಡೆಸಬೇಕು ಎಂದು ನಾನು ಒತ್ತಾಯಿಸುತ್ತೇನೆ’ ಎಂದರು.

‘ನಾನು ರಾಜೀನಾಮೆ ನೀಡಲಿಲ್ಲ (ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನದ ನಂತರ). ಏಕೆಂದರೆ ನನಗೆ ಪ್ರಜಾಪ್ರಭುತ್ವದಲ್ಲಿ ಗೌರವವಿದೆ. ನನಗೆ ಸಂವಿಧಾನವೇ ಎಲ್ಲಕ್ಕಿಂತ ಮಿಗಿಲು’ ಎಂದು ಕೇಜ್ರಿವಾಲ್ ಹೇಳಿದರು. ಬಿಜೆಪಿಯ ‘ಪಿತೂರಿಗಳನ್ನು’ ಎದುರಿಸಿ ನಿಲ್ಲುವ ಶಕ್ತಿ ಇರುವುದು ಎಎಪಿಗೆ ಮಾತ್ರ ಎಂದರು.

ಜನ ಲೋಕಪಾಲ ಮಸೂದೆ ವಿಚಾರವಾಗಿ 2014ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ತಾವು ರಾಜೀನಾಮೆ ನೀಡಿದ್ದನ್ನು ಉಲ್ಲೇಖಿಸಿದ ಕೇಜ್ರಿವಾಲ್, ‘ಆಗ ನನ್ನ ಆದರ್ಶಗಳಿಗಾಗಿ ರಾಜೀನಾಮೆ ನೀಡಿದ್ದೆ. ನನಗೆ ಅಧಿಕಾರದ ಮೇಲೆ ಮೋಹ ಇಲ್ಲ’ ಎಂದು ಹೇಳಿದರು. ಆಗ ಅವರು ಅಧಿಕಾರ ಸ್ವೀಕರಿಸಿದ 49ನೇ ದಿನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಭಾವನಾತ್ಮಕ ಆಟವಾಡುತ್ತಿರುವ ಕೇಜ್ರಿವಾಲ್: ಬಿಜೆಪಿ

ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಅನಿವಾರ್ಯವಾಗಿತ್ತು ಆದರೆ ಅದನ್ನೇ ತಮ್ಮ ದೊಡ್ಡ ಗುಣವೆಂದು ತೋರಿಸುವ ಉದ್ದೇಶದಿಂದ ಎರಡು ದಿನಗಳ ನಂತರ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ನ್ಯಾಯಾಲಯವು ಅವರನ್ನು ನಿರ್ದೋಷಿ (ಅಬಕಾರಿ ನೀತಿ ಹಗರಣದಲ್ಲಿ) ಎಂದು ಹೇಳಿಲ್ಲ; ಷರತ್ತುಬದ್ಧ ಜಾಮೀನು ನೀಡಿದೆ ಅಷ್ಟೇ. ಅದರ ಪರಿಣಾಮವಾಗಿ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯ ಬದಲು ಉತ್ಸವ ಮಂತ್ರಿ ಆಗಿದ್ದಾರೆ. ಹೀಗಾಗಿ ಅವರು ರಾಜೀನಾಮೆಯ ನಾಟಕ ಆಡಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಆರೋಪಿಸಿದರು.

‘ಅನಿವಾರ್ಯವಾಗಿ ಮಾಡಲೇಬೇಕಾದ ಕೆಲಸವನ್ನು ತಮ್ಮ ದೊಡ್ಡ ಗುಣ ಎಂದು ತೋರಿಸಿಕೊಳ್ಳುವುದರಲ್ಲಿ ಕೇಜ್ರಿವಾಲ್‌ ಪಿಎಚ್‌.ಡಿ. ಪಡೆದಿದ್ದಾರೆ’ ಎಂದು ಪೂನಾವಾಲಾ ಹೇಳಿದರು. ಕೇಜ್ರಿವಾಲ್ ಅವರ ಇಡೀ ಆಲೋಚನೆ ತಮ್ಮ ಪತ್ನಿ ಸುನೀತಾ ಅವರನ್ನು ಮುಖ್ಯಮಂತ್ರಿ ಆಗಿಸುವುದು ಎಂದರು.

‘ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಸೋನಿಯಾ ಗಾಂಧಿ ಅವರು ಸೃಷ್ಟಿಸಿದ್ದಂತಹ ಪರಿಸ್ಥಿತಿಯನ್ನೇ ದೆಹಲಿಯಲ್ಲಿ ತರುವುದು ಕೇಜ್ರಿವಾಲ್ ಗುರಿ. ಅದಕ್ಕೇ ಅವರು ಸಾರ್ವಜನಿಕರಲ್ಲಿ ಸದಭಿಪ್ರಾಯ ಮೂಡಿಸುವ ನಾಟಕವಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಜನರು ನನಗೆ ಪ್ರಾಮಾಣಿಕತೆಯ ಪ್ರಮಾಣಪತ್ರವನ್ನು ನೀಡಿದ ನಂತರವಷ್ಟೇ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವೆ. ಜೈಲಿನಿಂದ ಬಂದ ನಂತರದಲ್ಲಿ ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳುತ್ತಿದ್ದೇನೆ.
–ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ
ಕೇಜ್ರಿವಾಲ್ ಮೇಲಿರುವ ಆರೋಪಗಳಿಗೆ ಸಾಕ್ಷ್ಯಗಳಿಲ್ಲ. ಹೀಗಾಗಿ ಅವರು ಜನರತ್ತ ಹೋಗಲು ನಿರ್ಧರಿಸಿದ್ದಾರೆ. ಅವರಿಗೆ ಅಧಿಕಾರದ ಹಸಿವಿಲ್ಲ.
–ಫಾರೂಕ್ ಅಬ್ದುಲ್ಲಾ, ಅಧ್ಯಕ್ಷರು ನ್ಯಾಷನಲ್‌ ಕಾನ್ಫರೆನ್ಸ್‌
ಇದು ಅನುಕಂಪ ಗಿಟ್ಟಿಸಿಕೊಳ್ಳಲು ಕೇಜ್ರಿವಾಲ್ ಹೂಡಿರುವ ನಾಟಕ. ಕಡತಗಳಿಗೆ ಸಹಿ ಹಾಕುವ ಅಧಿಕಾರವೇ ಇಲ್ಲದ ಅವರು ರಾಜೀನಾಮೆ ಯಾಕೆ ಕೊಡಬೇಕು?
–ಶಾಜಿಯಾ ಇಲ್ಮಿ, ಬಿಜೆಪಿ ವಕ್ತಾರೆ
ರಾಜೀನಾಮೆ ನೀಡುವ ಕೇಜ್ರಿವಾಲ್ ನಿರ್ಧಾರ ಕ್ರಾಂತಿಕಾರಿಯಷ್ಟೇ ಅಲ್ಲದೆ ಅವರ ಪ್ರಾಮಾಣಿಕತೆ ಜನಮುಖಿ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.
–ಭಗವಂತ್ ಮಾನ್, ಪಂಜಾಬ್ ಮುಖ್ಯಮಂತ್ರಿ
ಬಿಜೆಪಿ ಸೃಷ್ಟಿಸಿದ ವಾತಾವರಣದಲ್ಲಿ ಕೇಜ್ರಿವಾಲ್ ಅವರಿಗೆ ಕೆಲಸ ಮಾಡಲು ಆಗಲೇ ಇಲ್ಲ. ಹೀಗಾಗಿ ಅವರು ಸಿ.ಎಂ ಕುರ್ಚಿಯಿಂದ ಇಳಿದು ಜನರತ್ತ ಹೊರಟಿರುವುದು ಸರಿಯಾಗಿದೆ.
–ವಿವೇಕ್ ತಂಖಾ, ಕಾಂಗ್ರೆಸ್ ಪಕ್ಷದ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT