ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–3: ಉಡಾವಣೆಗೆ ಕ್ಷಣಗಣನೆ; ‘ಸಾಫ್ಟ್‌ ಲ್ಯಾಂಡಿಂಗ್’ ಕರಗತ - ಇಸ್ರೊ ಗುರಿ

*ಶ್ರೀಹರಿಕೋಟಾದತ್ತ ದೇಶದ ಚಿತ್ತ
Published 13 ಜುಲೈ 2023, 23:58 IST
Last Updated 13 ಜುಲೈ 2023, 23:58 IST
ಅಕ್ಷರ ಗಾತ್ರ

ಶ್ರೀಹರಿಕೋಟಾ: ಚಂದ್ರನ ಮೇಲ್ಮೈ ಮೇಲೆ ಗಗನನೌಕೆ ಇಳಿಸಿ, ಅಧ್ಯಯನ ಕೈಗೊಳ್ಳುವ ಉದ್ದೇಶದ ‘ಚಂದ್ರಯಾನ–3’ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ಇಲ್ಲಿನ ಸತೀಶ್‌ ಧವನ್ ಉಡ್ಡಯನ ಕೇಂದ್ರದಿಂದ ಲ್ಯಾಂಡರ್‌ (ವಿಕ್ರಮ್) ಹಾಗೂ ರೋವರ್ (ಪ್ರಜ್ಞಾನ) ಹೊತ್ತ ರಾಕೆಟ್ ಶುಕ್ರವಾರ ಮಧ್ಯಾಹ್ನ ನಭಕ್ಕೆ ಚಿಮ್ಮಲಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗಳು, ತಂತ್ರಜ್ಞರ ತಂಡ ಸಿದ್ಧತೆಯನ್ನು ಪೂರ್ಣಗೊಳಿಸಿದೆ.

2019ರಲ್ಲಿ ಕೈಗೊಂಡಿದ್ದ ‘ಚಂದ್ರಯಾನ–2’ ಕಾರ್ಯಕ್ರಮ ಕೊನೆ ಗಳಿಗೆಯಲ್ಲಿ ವಿಫಲವಾಗಿತ್ತು. ಹಾಗಾಗಿ, ಈ ಬಾರಿ ವಿಜ್ಞಾನಿಗಳು ‘ಸಾಫ್ಟ್‌ ಲ್ಯಾಂಡಿಂಗ್‌’ ಬಗ್ಗೆ ಗಮನ ಕೇಂದ್ರೀಕರಿಸಲಿದ್ದಾರೆ.  ಲ್ಯಾಂಡರ್‌ಗೆ ಯಾವುದೇ ರೀತಿಯ ಹಾನಿ ಆಗದಂತೆ, ಅದನ್ನು ಚಂದ್ರನ ಮೇಲೆ ಇಳಿಸುವುದನ್ನು ‘ಸಾಫ್ಟ್‌ ಲ್ಯಾಂಡಿಂಗ್’ ಎಂದು ಕರೆಯುತ್ತಾರೆ. ವಿಜ್ಞಾನಿಗಳು ಇಂಥ ಕೌಶಲವನ್ನು ಕರಗತ ಮಾಡಿಕೊಳ್ಳುವ ಗುರಿ ಹೊಂದಿದ್ದಾರೆ.

ಚಂದ್ರನಲ್ಲಿ ಭೂಮಿಗಿಂತ ಕಡಿಮೆ ಗುರುತ್ವಾಕರ್ಷಣ ಶಕ್ತಿ ಇರುವುದರಿಂದ ಲ್ಯಾಂಡರ್ ನಿಧಾನವಾಗಿ ಇಳಿಯುವಂತೆ ಮಾಡುವುದು ಸವಾಲಿನ ಕಾರ್ಯ.

‘ಚಂದ್ರಯಾನ–2’ ಕಾರ್ಯಕ್ರಮದ ವೇಳೆ, ಆರ್ಬಿಟರ್‌ನಿಂದ ಲ್ಯಾಂಡರ್‌ ಯಶಸ್ವಿಯಾಗಿ ಬೇರ್ಪಟ್ಟಿತ್ತು. ಚಂದ್ರನಿಂದ 100 ಕಿ.ಮೀ. ಅಂತರದಲ್ಲಿ ಲ್ಯಾಂಡರ್‌ ಯಶಸ್ವಿಯಾಗಿ ಪರಿಭ್ರಮಿಸಿತ್ತು. ಪೂರ್ವನಿಗದಿಯಂತೆ ಚಂದ್ರನ ಮೇಲ್ಮೈಯಿಂದ 2.1 ಕಿ.ಮೀ. ಅಂತರದ ವರೆಗೆ ಇಳಿದಿದ್ದ ಲ್ಯಾಂಡರ್‌ ನಂತರ ಅಪ್ಪಳಿಸಿತ್ತು. ವಿಜ್ಞಾನಿಗಳಿಗೆ ಅದರ ಸಂಪರ್ಕವೂ ಕಡಿದು ಹೋಗಿತ್ತು.

‘ಸಾಫ್ಟ್‌ ಲ್ಯಾಂಡಿಂಗ್’ನಲ್ಲಿ ಯಶಸ್ಸು ಸಿಕ್ಕಲ್ಲಿ, ಭಾರತವು ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಲಿದೆ. ಅಮೆರಿಕ, ಚೀನಾ ಹಾಗೂ ಈ ಹಿಂದಿನ ಸೋವಿಯತ್‌ ಒಕ್ಕೂಟ ಈ ಸಾಧನೆ ಮಾಡಿರುವ ದೇಶಗಳಾಗಿವೆ.

‘ಚಂದ್ರಯಾನ–3’ ಕಾರ್ಯಕ್ರಮದ ಗಗನನೌಕೆಯನ್ನು ಹೊತ್ತ ರಾಕೆಟ್‌ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್ ಉಡಾವಣಾ ಕೇಂದ್ರದಲ್ಲಿ ನಭದತ್ತ ಚಿಮ್ಮಲು ಸನ್ನದ್ಧವಾಗಿದೆ –ಪಿಟಿಐ ಚಿತ್ರ
‘ಚಂದ್ರಯಾನ–3’ ಕಾರ್ಯಕ್ರಮದ ಗಗನನೌಕೆಯನ್ನು ಹೊತ್ತ ರಾಕೆಟ್‌ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್ ಉಡಾವಣಾ ಕೇಂದ್ರದಲ್ಲಿ ನಭದತ್ತ ಚಿಮ್ಮಲು ಸನ್ನದ್ಧವಾಗಿದೆ –ಪಿಟಿಐ ಚಿತ್ರ
ಚಂದ್ರಯಾನ–3
ಚಂದ್ರಯಾನ–3

ಚಂದ್ರಾನ್ವೇಷಣೆಗೆ ಎರಡು ದಶಕ

ಭಾರತದ ‘ಚಂದ್ರಯಾನ’ ಕಾರ್ಯಕ್ರಮಕ್ಕೆ ಎರಡು ದಶಕಗಳು ಸಂದಿವೆ. ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮ ಹಿಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪರಿಕಲ್ಪನೆ. ಈ ಕಾರ್ಯಕ್ರಮವನ್ನು 2003ರ ಆಗಸ್ಟ್‌ 15ರಂದು ಅವರು ಘೋಷಿಸಿದರು. ವಿಜ್ಞಾನಿಗಳ ನಿರಂತರ ಶ್ರಮದ ಫಲವಾಗಿ 2008ರ ಅಕ್ಟೋಬರ್ 22ರಂದು ಇಸ್ರೊದ ‘ಪಿಎಸ್‌ಎಲ್‌ವಿ–ಸಿ11’ ರಾಕೆಟ್‌ ವ್ಯೋಮದತ್ತ ಹಾರಿತ್ತು. ಖ್ಯಾತ ವಿಜ್ಞಾನಿ ಎಂ.ದೊರೈಸ್ವಾಮಿ ಈ ಕಾರ್ಯಕ್ರಮದ ನಿರ್ದೇಶಕರಾಗಿದ್ದರು. ತಿರುವನಂತಪುರದಲ್ಲಿರುವ ವಿಕ್ರಮ ಸಾರಾಭಾಯಿ ಬಾಹ್ಯಾಕಾಶ ಕೇಂದ್ರವು ‘ಪಿಎಸ್‌ಎಲ್‌ವಿ=ಸಿ11’ ರಾಕೆಟ್‌ಅನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿತ್ತು.

ಗಗನನೌಕೆಯೂ ಸೇರಿದಂತೆ ಈ ಉಡಾವಣಾ ವಾಹಕದ ತೂಕ 320 ಟನ್‌ಗಳಷ್ಟಿತ್ತು. ಅಮೆರಿಕ ಬ್ರಿಟನ್ ಜರ್ಮನಿ ಸ್ವೀಡನ್‌ ಹಾಗೂ ಬಲ್ಲೇರಿಯಾದಲ್ಲಿ ತಯಾರಿಸಲಾಗಿದ್ದ ಒಟ್ಟು 11 ವೈಜ್ಞಾನಿಕ ಸಾಧನಗಳನ್ನು ಈ ಗಗನನೌಕೆಯಲ್ಲಿ ಅಳವಡಿಸಲಾಗಿತ್ತು. ಚಂದ್ರನಿಂದ 100 ಕಿ.ಮೀ. ಅಂತರದಲ್ಲಿ ಪರಿಭ್ರಮಣೆ ಮಾಡಿತ್ತು. ಚಂದ್ರನ ಮೇಲ್ಮೈಯ ರಾಸಾಯನಿಕ ಸಂಯೋಜನೆ ಅಲ್ಲಿರಬಹುದಾದ ಖನಿಜಗಳ ಕುರಿತ ಅಧ್ಯಯನ ನಡೆಸುವುದು ಮೊದಲ ಚಂದ್ರಯಾನದ ಉದ್ದೇಶವಾಗಿತ್ತು. ‘ಚಂದ್ರಯಾನ–2’ ಕಾರ್ಯಕ್ರಮದ ಭಾಗವಾಗಿ 2019ರ ಜುಲೈ 22ರಂದು ಉಡಾವಣೆ ಮಾಡಲಾಗಿದ್ದ ಗಗನನೌಕೆ. ಆಗಸ್ಟ್‌ 20ರಂದು ಚಂದ್ರನ ಕಕ್ಷೆ ಸೇರಿತ್ತು. ಇಸ್ರೊದ ಆಗಿನ ಅಧ್ಯಕ್ಷ ಕೆ.ಶಿವನ್ ಅವರು ಈ ಬಾಹ್ಯಾಕಾಶ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT