ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಯಾಣ: ಬಿಜೆಪಿ ಸೇರಿದ ಕಾಂಗ್ರೆಸ್‌ ಶಾಸಕಿ ಕಿರಣ್‌

ಹರಿಯಾಣ: ಮೂರು ಪ್ರಮುಖ ‘ಲಾಲ್‌’ಗಳ ಕುಟುಂಬದ ಹಲವರು ಬಿಜೆಪಿ ತೆಕ್ಕೆಯಲ್ಲಿ
Published 19 ಜೂನ್ 2024, 12:55 IST
Last Updated 19 ಜೂನ್ 2024, 12:55 IST
ಅಕ್ಷರ ಗಾತ್ರ

ಚಂಡೀಗಢ: ಹರಿಯಾಣದ ಕಾಂಗ್ರೆಸ್‌ ಶಾಸಕಿ ಕಿರಣ್‌ ಚೌಧರಿ ಮತ್ತು ಅವರ ಮಗಳು ಶ್ರುತಿ ಚೌಧರಿ ಬುಧವಾರ ಬಿಜೆಪಿ ಸೇರಿದರು. ಈ ಮೂಲಕ ಹರಿಯಾಣದ ಮೂವರು ಪ್ರಸಿದ್ಧ ‘ಲಾಲ್‌’ ಕುಟುಂಬಗಳ ಹಲವು ಬಂಧುಗಳು ಬಿಜೆಪಿ ತೆಕ್ಕೆಗೆ ಸೇರಿಕೊಂಡಂತಾಗಿದೆ.

ಭಿವಾನಿ ಜಿಲ್ಲೆಯ ತೋಷಮ್‌ನ ಶಾಸಕಿ ಆಗಿರುವ ಕಿರಣ್‌ ಅವರು ಹರಿಯಾಣದ ಮಾಜಿ ಮುಖ್ಯಮಂತ್ರಿ ಬನ್ಸಿ ಲಾಲ್‌ ಅವರ ಸೊಸೆ. ಅವರ ಪುತ್ರಿ ಶ್ರುತಿ ಚೌಧರಿ ಅವರು ಮಾಜಿ ಸಂಸದೆ ಹಾಗೂ ಹರಿಯಾಣದ ಕಾಂಗ್ರೆಸ್‌ ಘಟಕದ ಕಾರ್ಯಾಧ್ಯಕ್ಷರಾಗಿದ್ದರು.

ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ಮಂಗಳವಾರವಷ್ಟೇ ರಾಜೀನಾಮೆ ನೀಡಿದ್ದ ಇಬ್ಬರು ನಾಯಕರು ಬುಧವಾರ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾದರು.

ಮೂವರು ‘ಲಾಲ್‌’ಗಳ ಸುತ್ತ ಗಿರಕಿ:

1966ರಲ್ಲಿ ಹರಿಯಾಣ ಪ್ರತ್ಯೇಕ ರಾಜ್ಯವಾಗಿ ರಚನೆಯಾದ ಬಳಿಕ, ಅದರ ರಾಜಕೀಯವು ಮೂರು ದಶಕಗಳ ಕಾಲ ದೇವಿ ಲಾಲ್‌, ಭಜನ್‌ ಲಾಲ್‌ ಮತ್ತು ಬನ್ಸಿ ಲಾಲ್‌ ಅವರ ಸುತ್ತಲೂ ಗಿರಕಿ ಹೊಡೆದಿದೆ.

ಮಾಜಿ ಉಪಪ್ರಧಾನಿ ದೇವಿ ಲಾಲ್‌ ಅವರ ಮಗ ರಂಜಿತ್‌ ಸಿಂಗ್‌ ಚೌಟಾಲಾ ಅವರು ಮೂರು ತಿಂಗಳ ಹಿಂದೆಯಷ್ಟೇ ಬಿಜೆಪಿ ಸೇರಿದ್ದರು. ಅವರು ಐಎನ್‌ಎಲ್‌ಡಿ ಮುಖ್ಯಸ್ಥ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್‌ ಚೌಟಾಲಾ ಅವರ ಸಹೋದರರೂ ಆಗಿದ್ದಾರೆ.

ಪಕ್ಷೇತರ ಶಾಸಕರಾಗಿದ್ದ ರಂಜಿತ್‌ ಸಿಂಗ್‌ ಚೌಟಾಲಾ (78) ಅವರು ಕಳೆದ ಮಾರ್ಚ್‌ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಹಿಸಾರ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, ಕಾಂಗ್ರೆಸ್‌ ಅಭ್ಯರ್ಥಿ ಎದುರು ಪರಾಭವಗೊಂಡಿದ್ದರು.

ಮಾಜಿ ಮುಖ್ಯಮಂತ್ರಿ ಭಜನ್‌ ಲಾಲ್‌ ಅವರ ಕಿರಿಯ ಪುತ್ರ ಕುಲದೀಪ್‌ ಬಿಷ್ಣೋಯ್‌ ಅವರು ಎರಡು ವರ್ಷಗಳ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಅವರ ಮಗ ಭವ್ಯ ಸಹ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಅವರು ಪ್ರಸ್ತುತ ಹಿಸಾರ್‌ ಜಿಲ್ಲೆಯ ಆದಂಪುರ ಕ್ಷೇತ್ರದ ಶಾಸಕರಾಗಿದ್ದಾರೆ.

ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಸೈನಿ:

ಕಿರಣ್‌ ಚೌಧರಿ ಮತ್ತು ಶ್ರುತಿ ಚೌಧರಿ ಅವರು ಬಿಜೆಪಿ ಸೇರುವ ಕೆಲವೇ ಗಂಟೆಗಳ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್ ಸೈನಿ, ‘ಮಾಜಿ ಮುಖ್ಯಮಂತ್ರಿ ಬನ್ಸಿ ಲಾಲ್‌ ಅವರು ಹರಿಯಾಣವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದರು. ಅಂತಹ ನಾಯಕರ ಕುಟುಂಬವನ್ನು ಕಾಂಗ್ರೆಸ್‌ ಬದಿಗೊತ್ತಿರುವುದು ದುರದೃಷ್ಟಕರ. ಕಾಂಗ್ರೆಸ್‌ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಒಂದು ಕುಟುಂಬ ಮುಖ್ಯವೋ ಹಾಗೆಯೇ ಹರಿಯಾಣದಲ್ಲಿಯೂ ಅವರಿಗೆ ಒಂದೇ ಕುಟುಂಬ ಮುಖ್ಯವಾಗಿದೆ’ ಎಂದು ಹರಿಹಾಯ್ದರು.

‘ಕಾಂಗ್ರೆಸ್‌ ನಾಯಕ ಭೂಪಿಂದರ್‌ ಸಿಂಗ್‌ ಹೂಡಾ ಅವರು ಇತರ ನಾಯಕರನ್ನು ಬಲಿಕೊಡುವ ಮೂಲಕ ತನ್ನ ಮಗನನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ದೂರಿದರು. 

ಬನ್ಸಿ ಲಾಲ್‌ ಅವರನ್ನು ಹೊಗಳಿದ್ದ ಮೋದಿ:

ಲೋಕಸಭಾ ಚುನಾವಣೆ ವೇಳೆಯಲ್ಲಿ ಮಹೇಂದ್ರಗಢ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬನ್ಸಿ ಲಾಲ್‌ ಅವರನ್ನು ಹೊಗಳಿದ್ದರು. ‘ಲಾಲ್‌ ಅವರು ಭಿವಾನಿ–ಮಹೇಂದ್ರಗಢದ ಅಭಿವೃದ್ಧಿಗೆ ಬದ್ಧರಾಗಿದ್ದರು. ಅಲ್ಲದೆ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು’ ಎಂದು ಸ್ಮರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT