ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಕ ಚಲಾಯಿಸುತ್ತಿದ್ದ ಎಸ್‌ಯುವಿ ಡಿಕ್ಕಿ: ಮಹಿಳೆ ಸಾವು

Published : 3 ಆಗಸ್ಟ್ 2024, 16:05 IST
Last Updated : 3 ಆಗಸ್ಟ್ 2024, 16:05 IST
ಫಾಲೋ ಮಾಡಿ
Comments

ಕಾನ್ಪುರ: 17 ವರ್ಷದ ಬಾಲಕನೊಬ್ಬ ಅತಿ ವೇಗವಾಗಿ ಎಸ್‌ಯುವಿ ಚಾಲನೆ ಮಾಡಿ, ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ 42 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಮಹಿಳೆಯ 13 ವರ್ಷದ ಪುತ್ರಿಗೆ ತೀವ್ರಗಾಯಗಳಾಗಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. 

ಈ ಕುರಿತು ಶುಕ್ರವಾರ ಪ್ರಕರಣ ದಾಖಲಾಗಿದೆ. ಕಾರು ಚಲಾಯಿಸುತ್ತಿದ್ದ ಬಾಲಕ 12ನೇ ತರಗತಿ ವಿದ್ಯಾರ್ಥಿಯಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಕಾರಿನಲ್ಲಿ ಆತನ ಮೂವರು ಸಹಪಾಠಿಗಳು ಇದ್ದರು. ಅಪಘಾತದದ ಬಳಿಕ ಆತನ ಸಹಪಾಠಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ–2023ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆತನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಬಾಲಕನ ಬಳಿ ವಾಹನ ಚಾಲನಾ ಪರವಾನಗಿ ಇರಲಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕನು ತನ್ನ ಸ್ನೇಹಿತರ ಜತೆ ಕಾರಿನಲ್ಲಿ ಸಾಹಸ ಮಾಡಲು ಯತ್ನಿಸುತ್ತಿದ್ದ’ ಎಂದು ಡಿಸಿಪಿ (ದಕ್ಷಿಣ) ರವೀಂದ್ರ ಕುಮಾರ್‌ ಮಾಹಿತಿ ನೀಡಿದ್ದಾರೆ.

‘ತನ್ನ ಗಮನಕ್ಕೆ ತಾರದೆ ಮಗ ಕಾರನ್ನು ಚಲಾಯಿಸಲು ತೆಗೆದುಕೊಂಡು ಹೋಗಿದ್ದ’ ಎಂದು ಬಾಲಕನ ತಂದೆ ಹೇಳಿಕೆ ನೀಡಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಮಗಳನ್ನು ಹಿಂಬದಿ ಕೂರಿಸಿಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳೆ, ವಾಹನವನ್ನು ಬಲಕ್ಕೆ ತಿರುಗಿಸಲು ಯತ್ನಿಸಿದಾಗ, ಎದುರುಗಡೆಯಿಂದ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮೃತ ಮಹಿಳೆಯನ್ನು ಭಾವನಾ ಮಿಶ್ರಾ (42) ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡಿರುವ ಬಾಲಕಿ ಮೇಘವಿ ಮಿಶ್ರಾ (13) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT