ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಹಿಂಸಾಚಾರ | ನಾಯಕನ ಅಂಧಾನುಕರಣೆಯಿಂದ ಸಮಾಜ ಹಾಳು: ನಟ ಪ್ರಕಾಶ್ ರಾಜ್

ಕೋಮುಗಲಭೆಯಿಂದ ಮಹಿಳೆ, ಮಕ್ಕಳಿಗೆ ತೊಂದರೆ– ನಟ ಅಭಿಮತ
Published 10 ಸೆಪ್ಟೆಂಬರ್ 2023, 16:17 IST
Last Updated 10 ಸೆಪ್ಟೆಂಬರ್ 2023, 16:17 IST
ಅಕ್ಷರ ಗಾತ್ರ

ಕೊಟ್ಟಾಯಂ (ಪಿಟಿಐ): ಮಣಿಪುರದಲ್ಲಿನ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನಟ ಪ್ರಕಾಶ್ ರಾಜ್ ಅವರು, ‘ಕೋಮು ಹಿಂಸಾಚಾರದಲ್ಲಿ ಬಹುತೇಕವಾಗಿ ಮಹಿಳೆಯರು ಮತ್ತು ಮಕ್ಕಳು ತೊಂದರೆಗಳಾಗುತ್ತಾರೆ’ ಎಂದು ಹೇಳಿದ್ದಾರೆ. 

ಡಿಸಿ ಬುಕ್ಸ್‌ನ ಸುವರ್ಣ ಮಹೋತ್ಸವ ಸಮಾರಂಭದ ಅಂಗವಾಗಿ ನಡೆದ ಡಿ.ಸಿ. ಕಿಳಕ್ಕೆಮುರಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಜೆಗಳು ತಮ್ಮ ನಾಯಕನನ್ನು ಅಂಧಾನುಕರಣೆ ಮಾಡಿದಾಗ ಸಮಾಜವು ಹಾಳಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರಜೆಗಳು ತಮ್ಮ ನಾಯಕ ಇಲ್ಲವೇ ಯಾವುದೇ ಒಂದು ಸಿದ್ಧಾಂತವನ್ನು ಕುರುಡಾಗಿ ಅನುಸರಿಸಿದರೆ ಆ ಸಮಾಜವು ಹಾಳಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ರಾಷ್ಟ್ರೀಯತೆಯ ಹೆಸರಿನಲ್ಲಿ ಈಗ ದೇಶದಲ್ಲಿ ಅದೇ ಆಗುತ್ತಿದೆ. ಅನ್ಯಾಯದ ಸಂದರ್ಭದಲ್ಲಿ ತಟಸ್ಥರಾಗಿದ್ದರೆ ನೀವು ದಬ್ಬಾಳಿಕೆಯ ಭಾಗವಾಗಿರುವುದನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದರ್ಥ’ ಎಂದರು. 

‘ಮಣಿಪುರದ ಹಿಂಸಾಚಾರವು ಸಮಾಜದ ಮೇಲೆ ಕೋಮುಗಲಭೆಯ ಪರಿಣಾಮ ಏನಾಗಬಹುದು ಎಂಬುದನ್ನು ತೋರಿಸಿದೆ. ಇಂದು  ಮಣಿಪುರ ನೋಡಿದಾಗ, ಅಲ್ಲಿನ ಗಾಯಗಳು ನಮಗೇನು ತಂದುಕೊಟ್ಟಿವೆ ಎಂಬುದನ್ನು ತೋರಿಸುತ್ತವೆ. ನೋವುಣ್ಣುವವರು ಯಾರು? ಬಹುತೇಕ ಮಹಿಳೆಯರು ಮತ್ತು ಮಕ್ಕಳು ತೊಂದರೆಗೀಡಾಗುತ್ತಿದ್ದಾರೆ. ಭವಿಷ್ಯವೂ ಮಸುಕಾಗುತ್ತದೆ. ಈ ಗಾಯಗಳು ಮಾಂಸಕ್ಕಿಂತಲೂ ಹೆಚ್ಚು ಆಳವಾಗಿರುವಂಥವು. ಇದರಿಂದ ನಾವು ಪಾಠ ಕಲಿಯಲಾಗದೇ’ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು. 

'16 ಅಥವಾ 17 ವರ್ಷದ ಯುವಕರು ಮೆರವಣಿಗೆಯಲ್ಲಿ ಖಡ್ಗಗಳು ಮತ್ತು ಪಿಸ್ತೂಲುಗಳನ್ನು ಝಳಪಿಸುತ್ತಾರೆ ಎಂದರೆ, ಇದು ಡಾ. ಅಂಬೇಡ್ಕರ್ ಅಥವಾ ಸಮಾಜ ಸುಧಾರಕ ಬಸವಣ್ಣ ಅವರು ಕಾಣಬಯಸಿದ್ದ ದೇಶವಲ್ಲ. ಖಡ್ಗ, ಪಿಸ್ತೂಲುಗಳನ್ನು ಝಳಪಿಸುವುದನ್ನು ಕಂಡು ನನ್ನ ಮನಸ್ಸು ದುಃಖಿತವಾಗುತ್ತದೆ. ಆ ಯುವಕರಿಗೆ ಯಾವುದೇ ಕನಸುಗಳಿಲ್ಲ. ಯಾವ ರೀತಿಯ ಭವಿಷ್ಯ ಅವರಿಗಿರುತ್ತದೆ ಎಂಬ ಅರಿವೂ ಅವರಿಗಿಲ್ಲ. ಅವರನ್ನು ಪ್ರಚೋದಿಸಿರುವವರು ಯಾರು? ನಾವೇಕೆ ಈ ಬಗ್ಗೆ ಮೌನವಾಗಿದ್ದೇವೆ’ ಎಂದೂ ಅವರು ಕೇಳಿದರು. 

ಶಿಕ್ಷಕಿಯೊಬ್ಬರು ನಿರ್ದಿಷ್ಟ ಸಮುದಾಯವೊಂದರ ವಿದ್ಯಾರ್ಥಿಯನ್ನು ಥಳಿಸುವಂತೆ ತಮ್ಮ ವಿದ್ಯಾರ್ಥಿಗಳಿಗೆ ಆದೇಶಿಸಿದ್ದ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ‘ಎಂಟು ವರ್ಷದ ಬಾಲಕನ ಕೆನ್ನೆಗೆ ಹೊಡೆಯುವಂತೆ ಇತರ ಸಮುದಾಯದ ಬಾಲಕರಿಗೆ ಸೂಚಿಸುವಂತೆ ಆ ಶಿಕ್ಷಕಿಗೆ ಹೇಗೆ ಧೈರ್ಯ ಬರುತ್ತದೆ? ಇದು ನಮ್ಮ ದೇಶವೇ? ಇದು ಭವಿಷ್ಯದ ಭಾರತವೇ? ಅಂಬೇಡ್ಕರ್ ಅಥವಾ ಬಸವಣ್ಣ ಅಥವಾ ಬೇರೆ ಯಾರಾದರೂ ಇದನ್ನು ಕಲ್ಪಿಸಿಕೊಂಡಿದ್ದರೆ’ ಎಂದೂ ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT