ಶ್ರೀನಗರ: ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಮುಕ್ತವಾಗಿ ಸಂಚರಿಸಲು ಸಾಧ್ಯವಾಗಿದೆ ಎಂದು ಬಾರಾಮುಲ್ಲಾ ಯುವತಿ ನುಸ್ರತ್ ಫಾತಿಮಾ ಎಂಬುವವರು ಟ್ವೀಟ್ ಮಾಡಿದ್ದಾರೆ. ಶ್ರೀನಗರದಲ್ಲಿ ಒಂಟಿಯಾಗಿ ಬೈಕ್‌ನಲ್ಲಿ ಸಂಚರಿಸುತ್ತಿರುವ 21 ಸೆಕೆಂಡ್‌ಗಳ ವಿಡಿಯೊವನ್ನೂ ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
'ಹುಡುಗರಿಗಷ್ಟೇ ಅಲ್ಲ. ನಮ್ಮ (ಹುಡುಗಿಯರ) ಪಾಲಿಗೂ ನನ್ನ ಕಾಶ್ಮೀರ ಸಾಕಷ್ಟು ಬದಲಾಗಿದೆ ಎಂದು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ. ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡುವುದಕ್ಕೂ ಮುನ್ನ ಇದು ಸಾಧ್ಯವಾಗುತ್ತಿರಲಿಲ್ಲ. ಭಾರತ ಸರ್ಕಾರಕ್ಕೆ ಧನ್ಯವಾದಗಳು' ಎಂದು ಅವರು ಬರೆದುಕೊಂಡಿದ್ದಾರೆ.
ಫಾತಿಮಾ ಆಗಸ್ಟ್ 4ರಂದು (ಶುಕ್ರವಾರ) ಮಾಡಿರುವ ಟ್ವೀಟ್‌ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಈ ಟ್ವೀಟ್ ಅನ್ನು 34 ಸಾವಿರಕ್ಕೂ ಅಧಿಕ ಮಂದಿ ಮೆಚ್ಚಿಕೊಂಡಿದ್ದು, 7.5 ಸಾವಿರಕ್ಕೂ ಹೆಚ್ಚು ಜನರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ನುಸ್ರತ್ ಹೇಳಿಕೆ ಬೆಂಬಲಿಸಿರುವ ಸಾಕಷ್ಟು ಜನರು, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಫಾತಿಮಾ ಅವರು, ವಾಹನಗಳು ಸಂಚರಿಸುತ್ತಿರುವ ರಸ್ತೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಹೆಲ್ಮೆಟ್ ಇಲ್ಲದೆ ಹಾಗೂ ಎರಡೂ ಕೈಬಿಟ್ಟು ಚಾಲನೆ ಮಾಡುತ್ತಿರುವುದು ವಿಡಿಯೊದಲ್ಲಿದೆ. ಹೀಗಾಗಿ ಕೆಲವರು ಹೆಲ್ಮೆಟ್ ಇಲ್ಲದೆ ಸಂಚರಿಸುವುದು ಅಪಾಯಕಾರಿ ಎಂಬ ಸಲಹೆಗಳನ್ನು ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು 2019ರ ಆಗಸ್ಟ್ 5ರಂದು ಹಿಂಪಡೆದಿತ್ತು.
ಫಾತಿಮಾ ವಿರುದ್ಧ ಕ್ರಮ
ಫಾತಿಮಾ ಅವರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಸಂಚಾರ ಪೊಲೀಸರು ಯುವತಿ ವಿರುದ್ಧ ಮೋಟಾರು ವಾಹನ ಕಾಯ್ದೆಗೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಂಡಿದ್ದಾರೆ. ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.