ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ ಮಹಾ ಉತ್ಸವಕ್ಕೆ ಭರದ ಸಿದ್ಧತೆ

ರಾಜ್ಯವಾರ್ತೆ
Last Updated 15 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ ಜಗದ್ವಿಖ್ಯಾತ ಪುರಿ ಜಗನ್ನಾಥನ ವಾರ್ಷಿಕ ರಥೋತ್ಸವ ಈ ಸಲ ಎಂದಿಗಿಂತ ಭಿನ್ನವಾಗಿರುತ್ತದೆ. ವಿಶೇಷವೇನೆಂದರೆ, ಈ ಸಲ ಪುರಿ ದೇಗುಲದ ದೇವತೆಗಳಾದ ಜಗನ್ನಾಥ, ಬಲಭದ್ರ ಮತ್ತು ಆತನ ಸಹೋದರೆ ಸುಭದ್ರೆಯರ ಮರದ ವಿಗ್ರಹಗಳನ್ನು ಈ ಸಲ ಬದಲಾಯಿಸಲಾಗುತ್ತಿದೆ. ‘ನಬಕಳೇಬರ’ ಎಂದು ಕರೆಯಲಾಗುವ ಮರದ ಮೂರ್ತಿಗಳನ್ನು ಬದಲಾಯಿಸುವ ಕ್ರಿಯೆ ಹಲವು ವರ್ಷಗಳಿಗೊಮ್ಮೆ ನಡೆಯುತ್ತಿದೆ. ಈ ಹಿಂದೆ ಇದು ನಡೆದಿದ್ದು 19 ವರ್ಷಗಳ ಹಿಂದೆ, 1996ರಲ್ಲಿ.

ಒಡಿಶಾ ಸರ್ಕಾರವು ಈ ಮಹಾನ್‌ ಧಾರ್ಮಿಕ ವಿಧಿಗಾಗಿ ಈಗಾಗಲೇ ಬಿರುಸಿನ ಸಿದ್ಧತೆಗಳನ್ನು ಆರಂಭಿಸಿದೆ. ಸರ್ಕಾರದ ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಸುರೇಶ್‌ ಮಹಾಪಾತ್ರ ಅವರನ್ನು ಈ ಸಲದ ರಥೋತ್ಸವಕ್ಕಾಗಿ ವಿಶೇಷಾಧಿಕಾರಿಯಾಗಿ ನೇಮಿಸಿದೆ. ದೇಗುಲಗಳ ಪಟ್ಟಣವಾದ ಪುರಿಯಲ್ಲಿ ಈ ಹಿಂದೆ ‘ನಬಕಳೇಬರ’ ಧಾರ್ಮಿಕ ವಿಧಿ ನಡೆದ ಸಂದರ್ಭದಲ್ಲಿ ಇದೇ ಮಹಾಪಾತ್ರ ಅವರು ಪುರಿ ಜಿಲ್ಲಾಧಿಕಾರಿಯಾಗಿದ್ದರು ಎಂಬುದು ಗಮನಾರ್ಹ.  ಈ ಭವ್ಯ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಸರ್ಕಾರ 1,400 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ.

ಪುರಿ ದೇಗುಲದ ಮೂವರು ವಿಶೇಷ ಪರಿಚಾರಕರು ಈ ಮೂರು ವಿಗ್ರಹಗಳ ನಿರ್ಮಾಣಕ್ಕಾಗಿ ಬೇಕಾಗುವ ‘ದಾರು’ ಅಥವಾ ಮರಕ್ಕೆ ಮಾರ್ಚ್‌ ಕೊನೆಯ ವಾರದಲ್ಲಿ ಹುಡುಕಾಟ ಆರಂಭಿಸುವುದರೊಂದಿಗೆ ಈ ವಿಧಿ ಅಧಿಕೃತವಾಗಿ ಚಾಲನೆ ಪಡೆಯುತ್ತದೆ. ಮರಕ್ಕಾಗಿ ಹೀಗೆ ನಡೆಯುವ ಹುಡುಕಾಟಕ್ಕೆ ‘ಬನಯೋಗ ಯಾತ್ರಾ’ ಎಂದು ಕರೆಯಲಾಗುತ್ತದೆ. ಈ ಮರ ಹುಡುಕಾಟದ ಪ್ರಕ್ರಿಯೆ ಕೂಡ ತುಂಬಾ ಆಸಕ್ತಿದಾಯಕವಾಗಿದೆ. ನಿಯೋಜಿತ ಪರಿಚಾರಕರು ಪುರಿಯಿಂದ ಕೆಲವೇ ಕಿ.ಮೀ.ಗಳಷ್ಟು ದೂರದಲ್ಲಿರುವ ಕಾಕತ್‌ಪುರದ ಮಾ ಮಂಗಳಾ ದೇವಸ್ಥಾನಕ್ಕೆ ತೆರಳುತ್ತಾರೆ. ಇದಾದ ನಾಲ್ಕು ಅಥವಾ ಐದು ದಿನಗಳೊಳಗೆ ಈ ಪರಿಚಾರಕರಿಗೆ ಮಂಗಳಾ ದೇವಿ ಕನಸಿನಲ್ಲಿ ಕಾಣಿಸಿಕೊಂಡು, ಸೂಕ್ತ ಮರಕ್ಕಾಗಿ ಎಲ್ಲಿ ಹುಡುಕಾಟ ನಡೆಸಬೇಕೆಂದು ನಿರ್ದೇಶನ ನೀಡುತ್ತಾಳೆ ಎನ್ನಲಾಗಿದೆ.

ಕನಸಿನ ದೇವತೆಯ ಆಜ್ಞೆಯಂತೆ ಮರಗಳನ್ನು ಸಂಗ್ರಹಿಸಿದ ಮೇಲೆ ಅದನ್ನು ಪುರಿಗೆ ಸಾಗಿಸಿ ಮೂರ್ತಿಗಳನ್ನು ಮಾಡುವುದಕ್ಕೇ ವಿಶೇಷವಾಗಿ ನಿಯೋಜನೆಗೊಂಡ ವಿಶೇಷ ಬಡಗಿಗಳಿಗೆ ಕೊಡಲಾಗುತ್ತದೆ. ಒಟ್ಟಾರೆ, ಮರಗಳ ಹುಡುಕಾಟದಿಂದ ಹಿಡಿದು ವಿಗ್ರಹಗಳ ಕೆತ್ತನೆ ಆಗುವ ತನಕ ಏನಿಲ್ಲವೆಂದರೂ ಎರಡು ತಿಂಗಳು ಹಿಡಿಯುತ್ತದೆ. ಇದಾದ ನಂತರ ಪುರಿ ದೇವಾಲಯದಲ್ಲಿ  ರಹಸ್ಯ ಧಾರ್ಮಿಕ ವಿಧಿಗಳು ಸೇರಿದಂತೆ ಹಲವಾರು ವಿಧಿಗಳು ನಡೆಯುತ್ತವೆ. ಹಳೆಯ ಮೂರು ವಿಗ್ರಹಗಳಿಂದ ಹೊಸ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವ ‘ಬ್ರಹ್ಮ ಪರಿಬರ್ತನ್‌’ ಸಂದರ್ಭದಲ್ಲಿ ದೇಗುಲದ ಗರ್ಭಗುಡಿಯೊಳಗೆ ದೇವಾಲಯದ ಕೆಲವೇ ಕೆಲವು ನಿಯೋಜಿತ ಪರಿಚಾರಕರು ಮಾತ್ರ ಇರುತ್ತಾರೆ.

ಅಂತಿಮವಾಗಿ ಜುಲೈ 18ರಂದು ನಡೆಯುವ ರಥಯಾತ್ರೆ ದಿನದ ವೇಳೆಗೆ ಹೊಸ ವಿಗ್ರಹಗಳು ಭಕ್ತಾದಿಗಳ ದರ್ಶನಕ್ಕೆ ಸಿದ್ಧವಾಗುತ್ತವೆ.
ಈ ಬೃಹತ್‌ ಉತ್ಸವದ ವೇಳೆ ಸೇರುವ ಭಾರಿ ಜನಸ್ತೋಮವನ್ನು ನಿರ್ವಹಿಸುವುದು ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ ನೋಡಿಕೊಳ್ಳುವುದು ಆಡಳಿತಕ್ಕೆ ದೊಡ್ಡ ಸವಾಲಾಗಿರುತ್ತದೆ. ಸಾಮಾನ್ಯವಾಗಿ ಪ್ರತಿವರ್ಷ ಪುರಿ ರಥಯಾತ್ರೆಗೆ ಸೇರುವ ಭಕ್ತಾದಿಗಳ ಸಂಖ್ಯೆ 10  ಲಕ್ಷದ ಆಸುಪಾಸಿನಲ್ಲಿರುತ್ತದೆ. ಆದರೆ ಈ ಸಲ ‘ನಬಕಳೇಬರ’ ನಡೆಯುತ್ತಿರುವುದರಿಂದ ನೆರೆಯುವ ಭಕ್ತರ ಸಂಖ್ಯೆ 50 ಲಕ್ಷದಷ್ಟಿರುವ ಅಂದಾಜಿದೆ. 1996ರಲ್ಲಿ ಇದೇ ‘ನಬಕಳೇಬರ’ ಧಾರ್ಮಿಕ ವಿಧಿಯ ಸಂದರ್ಭಕ್ಕೆ 22 ಲಕ್ಷ ಜನ ಸಾಕ್ಷಿಯಾಗಿದ್ದರು.

ಭಕ್ತರಿಗೆ ಹಾಗೂ ಪುರಿ ದೇಗುಲಕ್ಕೆ ಮೂರು ಹಂತದಲ್ಲಿ ಭದ್ರತೆ ಒದಗಿಸುವ ಸಲುವಾಗಿ 10,000 ಸಶಸ್ತ್ರ ಪೊಲೀಸರನ್ನು ನಿಯೋಜಿಸುವ ಬಗ್ಗೆ ಸರ್ಕಾರ ಪರಿಶೀಲಿಸುತ್ತದೆ. ಜತೆಗೆ ದೇಗುಲ ಸಂಕೀರ್ಣದಲ್ಲಿ  32 ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಈ ಕರಾವಳಿ ಪಟ್ಟಣದಲ್ಲಿ 150 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಈ ಕ್ಯಾಮೆರಾಗಳ ಮೇಲ್ವಿಚಾರಣೆಗಾಗಿ ವಿಶೇಷ ನಿಯಂತ್ರಣ ಕೊಠಡಿಗಳನ್ನು ಕೂಡ ಸ್ಥಾಪಿಸಲಾಗುತ್ತದೆ.‌

ನೆರೆಯುವ ಭಾರಿ ಭಕ್ತಗಣಕ್ಕಾಗಿ ಆರೋಗ್ಯ ಸವಲತ್ತು ವ್ಯವಸ್ಥೆ ಕಲ್ಪಿಸುವುದು ರಾಜ್ಯ ಸರ್ಕಾರದ ಪಾಲಿಗೆ ಅಗ್ನಿಪರೀಕ್ಷೆಯೇ ಆಗಲಿದೆ. ಇದಕ್ಕಾಗಿ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 123 ಕೋಟಿ ರೂಪಾಯಿಗಳ ಬಜೆಟ್‌ ಸಿದ್ಧಪಡಿಸಿದೆ.
ಇನ್ನು ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಪಟ್ಟಣದಲ್ಲಿರುವ ಹೋಟೆಲ್‌ಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸವೂ ನಡೆದಿದೆ. ಜತೆಗೆ ಇದೇ ವೇಳೆ, ಕೆಲವು ಹೊಸ ಹೋಟೆಲ್‌ಗಳೂ ಆರಂಭವಾಗಿವೆ. ಲಾಜ್‌ಗಳಲ್ಲಿ, ಧರ್ಮಶಾಲಾಗಳಲ್ಲಿ ಕೂಡಾ ತಂಗಲು ಅನುಕೂಲ ಮಾಡಿಕೊಡಲಾಗುವುದು. ಸರ್ಕಾರವು ಒಂದು ಲಕ್ಷ ಜನ ಉಳಿದುಕೊಳ್ಳಲು ಸಾಧ್ಯವಾಗುವಂತೆ ‘ನಬಕಳೇಬರ ಗ್ರಾಮ’ ಎಂಬ ತಾತ್ಕಾಲಿಕ ಗ್ರಾಮವನ್ನು ಕೂಡಾ ನಿರ್ಮಿಸಲಿದೆ.

ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳಿಂದ ಪಟ್ನಾಯಕ್‌ ಆಡಳಿತದ ಬಗ್ಗೆ ಟೀಕೆಗಳು ಕೇಳಿಬರುತ್ತಿದೆ. ‘ನಬಕಳೇಬರ’ ಧಾರ್ಮಿಕ ವಿಧಿಗಾಗಿ ಸರ್ಕಾರ ಮಾಡಿಕೊಳ್ಳುತ್ತಿರುವ ಸಿದ್ಧತೆ ಆಮೆವೇಗದಲ್ಲಿದೆ; ಇದು ಹೀಗೆಯೇ ಮುಂದುವರಿದರೆ ಉತ್ಸವದ ವೇಳೆಗೆ ಮೂಲಸೌಕರ್ಯ ನಿರ್ಮಾಣ ಸಾಧ್ಯವಾಗದು ಎಂಬುದು ಅವುಗಳ ಆರೋಪ. ಆದರೆ ಸರ್ಕಾರ ಈ ಆಪಾದನೆಗಳನ್ನು ಅಲ್ಲಗಳೆಯುತ್ತಿದೆ.

ಮುಖ್ಯಾಂಶಗಳು
* ಉತ್ಸವದ ಬಜೆಟ್‌ 1400 ಕೋಟಿ ರೂಪಾಯಿ
* ಐವರು ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಬೇರೆ ಬೇರೆ ಜವಾಬ್ದಾರಿ
* 50 ಲಕ್ಷ ಭಕ್ತರು ಸೇರುವ ನಿರೀಕ್ಷೆ
* ಸುಮಾರು 10,000 ಸಶಸ್ತ್ರ ಪೊಲೀಸರ ನಿಯೋಜನೆ
* ಪುರಿ ಪಟ್ಟಣದಲ್ಲಿ 150 ಸಿಸಿಟಿವಿ ಕ್ಯಾಮೆರಾ ಅಳವಡಿಕೆ
* ಆರೋಗ್ಯ ಸೇವೆಗಾಗಿ 650 ಕಾರ್ಯಕರ್ತರ ನಿಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT