ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸದ ನವೀನ್‌ ಪಟ್ನಾಯಕ್‌ ವರ್ಚಸ್ಸು

ಒಡಿಶಾ: ಸವಾಲಿನ ಮಧ್ಯೆಯೇ ಬಿಜೆಡಿ ಸರ್ಕಾರ ವರ್ಷಾಚರಣೆ
Last Updated 7 ಜೂನ್ 2015, 19:30 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾದಳ (ಬಿಜೆಡಿ) ಸರ್ಕಾರವು ಇತ್ತೀಚೆಗಷ್ಟೆ ಒಂದು ವರ್ಷ ಪೂರೈಸಿದೆ.
ಪಕ್ಷ ಹಾಗೂ ಆಡಳಿತಕ್ಕೆ  ಭ್ರಷ್ಟಾಚಾರ ಮತ್ತು  ಅನೇಕ ಹಗರಣಗಳ ಕಳಂಕ ಮೆತ್ತಿಕೊಂಡ ಕಾರಣ ಈ ಒಂದು ವರ್ಷವು ಪಟ್ನಾಯಕ್‌ ಪಾಲಿಗೆ ದೊಡ್ಡ ಸವಾಲೇ ಆಗಿತ್ತು.

ಸಿಬಿಐ ತನಿಖೆ ನಡೆಸುತ್ತಿರುವ ಬಹುಕೋಟಿ ಚಿಟ್‌ ಫಂಡ್‌ ಹಗರಣವು ಪಟ್ನಾಯಕ್‌ ಆಡಳಿತ ಹಾಗೂ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ. ರಾಜ್ಯದ ಎರಡು ಕಳಂಕಿತ ಚಿಟ್‌ ಫಂಡ್‌ ಕಂಪೆನಿಗಳ ಜತೆ ಸಂಪರ್ಕ ಇಟ್ಟುಕೊಂಡ ಆರೋಪದ ಮೇಲೆ  ಬಿಜೆಡಿ  ಹಿರಿಯ ಮುಖಂಡರಾದ ರಾಮಚಂದ್ರ ಹಂಡ್ಸಾ (ಸಂಸದ) ಹಾಗೂ ಪ್ರಭಾತ್‌ ತ್ರಿಪಾಠಿ (ಶಾಸಕ)ಅವರನ್ನು ಸಿಬಿಐ ಬಂಧಿಸಿದಾಗ ಪಟ್ನಾಯಕ್‌ ಆಡಳಿತ ತೀವ್ರ ಮುಜುಗರ ಅನುಭವಿಸಿತ್ತು.

ಈ ಬೆಳವಣಿಗೆಯು ಪಟ್ನಾಯಕ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ  ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಅದ್ಭುತ ಅವಕಾಶ ನೀಡಿತ್ತು.
ವಿವೇಚನಾ ಕೋಟಾ  (ಡಿಕ್ಯೂ)ನೀತಿ ದುರ್ಬಳಕೆಯ ಆರೋಪ ಹಾಗೂ ಭೂ ಹಗರಣ ಕೂಡ ಸರ್ಕಾರಕ್ಕೆ ಮುಳ್ಳಾಯಿತು. ರಾಜ್ಯ ಸಚಿವರು, ಶಾಸಕರು ಹಾಗೂ ಇತರರು ಅಕ್ರಮ ಮಾರ್ಗದ ಮೂಲಕ ಭುವನೇಶ್ವರ ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ರಾಜ್ಯ ಗೃಹ ಮಂಡಳಿಯಿಂದ  ಸರ್ಕಾರಿ ಭೂಮಿ, ಮನೆಗಳನ್ನು ಪಡೆದುಕೊಂಡಿದ್ದು ಸಾಬೀತಾದಾಗ ಪಟ್ನಾಯಕ್‌ ಸರ್ಕಾರ ಪೇಚಿಗೆ ಸಿಲುಕಿತು. ಕಾನೂನು ಮತ್ತು ಸುವ್ಯವಸ್ಥೆ, ರಾಜ್ಯದಾದ್ಯಂತ ಅನೇಕ ಪಟ್ಟಣಗಳಲ್ಲಿ ಕಾಮಾಲೆ ನಿಯಂತ್ರಣ ಹಾಗೂ  ವಿದ್ಯುತ್‌ ಬಿಕ್ಕಟ್ಟು ನಿರ್ವಹಣೆಯಲ್ಲಿ ವೈಫಲ್ಯ... ಇತ್ಯಾದಿ ವಿಷಯಗಳು ಸರ್ಕಾರಕ್ಕೆ ಹಿನ್ನಡೆಯಾದವು.


ಮಸುಕಾಗದ ಜನಪ್ರಿಯತೆ: ಇಷ್ಟೆಲ್ಲ ಅಡೆತಡೆಗಳ ಮಧ್ಯೆಯೂ ಪಟ್ನಾಯಕ್‌ ಜನಪ್ರಿಯತೆ ಕಿಂಚಿತ್ತೂ  ಕುಂದಿಲ್ಲ. ಪ್ರತಿಷ್ಠಿತ ಕಂಧಮಾಲ್‌ ಲೋಕಸಭಾ ಕ್ಷೇತ್ರಕ್ಕೆ ನಡೆದ ಮಹತ್ವದ ಉಪಚುನಾವಣೆ ಸೇರಿದಂತೆ 2014ರಲ್ಲಿ ನಡೆದ ಚುನಾವಣೆಗಳಲ್ಲಿ ಮತದಾರರು ಅವರನ್ನು ಬೆಂಬಲಿಸಿದ್ದು ಇದಕ್ಕೆ ಸಾಕ್ಷಿ.

ಪಟ್ನಾಯಕ್‌ ನಿಷ್ಕಳಂಕ ವ್ಯಕ್ತಿತ್ವ: ಉಪಚುನಾವಣೆ ಸಂದರ್ಭದಲ್ಲಿ ಪಟ್ನಾಯಕ್‌ ಸರ್ಕಾರಕ್ಕೆ ಚಿಟ್‌ ಫಂಡ್‌ ಹಗರಣದ ಉರುಳು ಸುತ್ತಿಕೊಂಡಿತ್ತು. ಅದೇ ರೀತಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಭೂಹಗರಣ ದೊಡ್ಡ ಸುದ್ದಿ ಮಾಡಿತ್ತು. 

‘ಚುನಾವಣೆಗಳಲ್ಲಿ ಮೇಲಿಂದ ಮೇಲೆ  ಬಿಜೆಡಿ ಗೆಲ್ಲುವುದಕ್ಕೆ  ಪಟ್ನಾಯಕ್‌ ಅವರ ನಿಷ್ಕಳಂಕ ವ್ಯಕ್ತಿತ್ವವೇ ಕಾರಣ’ ಎಂದು ರಾಜಕೀಯ ಪಂಡಿತರು ಹೇಳುತ್ತಾರೆ.
ವಿರೋಧ ಪಕ್ಷಗಳು ಎಷ್ಟೇ ಪ್ರಯತ್ನಪಟ್ಟರೂ ಈವರೆಗೆ ಹಗರಣಗಳಲ್ಲಿ ಪಟ್ನಾಯಕ್‌ ಹೆಸರು ಎಳೆಯುವುದಕ್ಕೆ  ಸಾಧ್ಯವಾಗಲಿಲ್ಲ.

‍ಪಟ್ನಾಯಕ್‌, ತಮ್ಮ ವ್ಯಕ್ತಿತ್ವಕ್ಕೆ ಕಳಂಕ ಬರದಂತೆ ಎಚ್ಚರಿಕೆ ವಹಿಸುತ್ತಾರೆ. ಅದೇ ರೀತಿ ಸಕಾಲದಲ್ಲಿ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಪಕ್ಷಕ್ಕೆ ಅಂಟಿಕೊಂಡ ಕಳಂಕವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ ಹೇಳುವುದಾದರೆ, ಚಿಟ್‌ ಫಂಡ್‌ ಹಗರಣದಲ್ಲಿ ಬಂಧಿತರಾದ ಪಕ್ಷದ ಇಬ್ಬರು ಮುಖಂಡರನ್ನು ವಜಾ ಮಾಡುವುದಕ್ಕೂ ಅವರು ಹಿಂಜರಿಯಲಿಲ್ಲ.

*
ಜನಪ್ರಿಯ ಯೋಜನೆಗಳು
ಒಂದು ವರ್ಷದಲ್ಲಿ ಪಟ್ನಾಯಕ್‌ ಆಡಳಿತವು ‘ಆಹಾರ ಯೋಜನೆ’ ಯಂತಹ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದೆ. ‘ಆಹಾರ ಯೋಜನೆ’ಯಲ್ಲಿ ಬಡವರಿಗೆ ₹ 5ಕ್ಕೆ ಒಂದು ಪ್ಲೇಟ್‌ ಅನ್ನ ಸಾಂಬಾರು ನೀಡಲಾಗುತ್ತದೆ.  ಅದೇ ರೀತಿ ‘ನಿರ್ಮಯ’ ಯೋಜನೆಯಡಿ ಬಡವರಿಗೆ ಕ್ಯಾನ್ಸರ್‌ನಂತಹ ದೊಡ್ಡ ರೋಗಕ್ಕೂ ಉಚಿತ ಔಷಧ ನೀಡಲಾಗುತ್ತದೆ. ‍ಎಲ್ಲಕ್ಕಿಂತ ಮಿಗಿಲಾಗಿ ಪಟ್ನಾಯಕ್‌ ಅವರ  ವರ್ಚಸ್ಸು ಬಿಜೆಡಿಯ ಜನಪ್ರಿಯತೆಯನ್ನು ಕಾಪಾಡುತ್ತಿದೆ ಎನ್ನುತ್ತಾರೆ ವಿಶ್ಲೇಷಕರು. ಈ ಮಾತನ್ನು ವಿರೋಧ ಪಕ್ಷದವರು ಕೂಡ ಒಪ್ಪಿಕೊಳ್ಳುತ್ತಾರೆ.  ಆದರೆ, ರಾಜಕೀಯ ಪಕ್ಷವೊಂದು ಯಾವಾಗಲೂ ಒಬ್ಬ ವ್ಯಕ್ತಿಯ ವರ್ಚಸ್ಸಿನ ಮೇಲೆ ಚುನಾವಣೆಗಳನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದೂ ಅವರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT