ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಹಿತ್ಯೋತ್ಸವ: ಕನ್ನಡದ ಬೇರಿಗೆ ಅಮೆರಿಕದ ಹೂವು

ಫಾಲೋ ಮಾಡಿ
Comments

ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಚಿಂತನೆಯನ್ನೇ ಜೀವದ್ರವ್ಯವಾಗಿಸಿಕೊಂಡು ಮುನ್ನಡೆಯುತ್ತಿರುವ ಕನ್ನಡ ಸಾಹಿತ್ಯ ರಂಗದ ಹತ್ತನೆಯ ಸಾಹಿತ್ಯೋತ್ಸವ ಟೆಕ್ಸಸ್‌ನ ಮಲ್ಲಿಗೆ ಕನ್ನಡ ಕೂಟದ ಆಶ್ರಯದಲ್ಲಿ, ಡಾಲಸ್ ನಗರದ ಗ್ರೇಪ್‌ವೈನ್ ಪ್ರಾಂತ್ಯದಲ್ಲಿ ನಡೆಯಿತು.

‘ಅದೆಲ್ಲೋ ಅಮೆರಿಕಕ್ಕೆ ಹೋಗೋದಿದೆ ಅಂತಿದ್ದರಲ್ಲ, ಯಾವಾಗ ಅಲ್ಲಿಗೆ ಹೋಗೋದು?’ ಎಂದು ನಗೆ ಚಟಾಕಿ ಹಾರಿಸಿದರು ಜಾನಪದ ತಜ್ಞ ಕೃಷ್ಣಮೂರ್ತಿ ಹನೂರು.

ಅವರು ಆ ಮಾತುಗಳನ್ನಾಡಿದ್ದು ಕನ್ನಡ ಸಾಹಿತ್ಯ ರಂಗದ ವೇದಿಕೆಯ ಮೇಲೆ, ಅಮೆರಿಕದ ಟೆಕ್ಸಸ್ ರಾಜ್ಯದ ಡಾಲಸ್ ನಗರದಲ್ಲಿ. ಸುತ್ತಲೂ ಕನ್ನಡ ಕಲರವ, ಕನ್ನಡದ್ದೇ ಪುಸ್ತಕಗಳು, ಉಡುಗೆ- ದಿರಿಸು, ಊರಿನದ್ದೇ ಅಡುಗೆಯ ಪರಿಮಳ, ಕಿವಿಯಲ್ಲಿ ರಿಂಗಣಿಸುತ್ತಿದ್ದ ಜಾನಪದ ಗೀತೆಗಳ ಧ್ವನಿ ಸುರುಳಿ, ಕುಮಾರವ್ಯಾಸ- ಮಂಟೇಸ್ವಾಮಿ- ಮಲೆ ಮಾದೇಶ್ವರ- ಸಿರಿಯಜ್ಜಿಯರ ಕಾವ್ಯಗಳ ಕುರಿತ ಗಂಭೀರ ಚಿಂತನೆ... ಇವೆಲ್ಲವೂ ಹನೂರರಿಗೆ ಮೇಲಿನ ಮಾತನ್ನಾಡಲು ಪ್ರೇರಣೆಯನ್ನು ನೀಡಿರಬಹುದು. ಜನವಾಣಿ ಬೇರು, ಕವಿವಾಣಿ ಹೂವು ಎಂಬ ಬಿಎಂಶ್ರೀಯವರ ಕವಿಸಾಲನ್ನು ನೆನಪಿಸಿಕೊಂಡು ಕನ್ನಡದ ಬೇರಿಗೆ ಅಮೆರಿಕದ ಹೂವುಗಳು ಅರಳುತ್ತಿರುವುದನ್ನು ಕಂಡು ಅವರು ಹಸನ್ಮುಖಿಯಾಗಿದ್ದರು.

ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಚಿಂತನೆಯನ್ನೇ ಜೀವದ್ರವ್ಯವಾಗಿಸಿಕೊಂಡು ಮುನ್ನಡೆಯುತ್ತಿರುವ ಕನ್ನಡ ಸಾಹಿತ್ಯ ರಂಗದ ಹತ್ತನೆಯ ಸಾಹಿತ್ಯೋತ್ಸವ ಟೆಕ್ಸಸ್‌ನ ಮಲ್ಲಿಗೆ ಕನ್ನಡ ಕೂಟದ ಆಶ್ರಯದಲ್ಲಿ, ಡಾಲಸ್ ನಗರದ ಗ್ರೇಪ್‌ವೈನ್ ಪ್ರಾಂತ್ಯದಲ್ಲಿ ನಡೆಯಿತು. ಅಮೆರಿಕನ್ನಡಿಗರೇ ಬರೆದ ಮೂವತ್ತಕ್ಕೂ ಹೆಚ್ಚಿನ ಲೇಖನಗಳನ್ನು ಒಳಗೊಂಡ ‘ಅಮೆರಿಕನ್ ಜಾನಪದ- ಕನ್ನಡ ಕಂಗಳಿಗೆ ಕಂಡಂತೆ’ ಕೃತಿ ಸಾಹಿತ್ಯೋತ್ಸವದಲ್ಲಿ ಬಿಡುಗಡೆಯಾಯಿತು. ಈ ಬಾರಿಯ ಸಮ್ಮೇಳನದ ಆಶಯ ಅಮೆರಿಕನ್ ಜಾನಪದ. ಮುಖ್ಯ ಅತಿಥಿಯಾಗಿ ಮೈಸೂರಿನಿಂದ ಪ್ರೊ ಕೃಷ್ಣಮೂರ್ತಿ ಹನೂರು ಆಗಮಿಸಿದ್ದರು.

‘ಎಲ್ಲ ಕಾಲದಲ್ಲೂ ಜಾನಪದರು ಶಿಷ್ಟ ಪರಂಪರೆಯಿಂದ ನಾವು ರೂಢಿಸಿಕೊಂಡ ತಿಳಿವಳಿಕೆಗೆ ವಿರುದ್ಧವಾಗಿಯೇ ಮಾತನಾಡಿದವರು. ಅವರು ಯಾವತ್ತೂ ಯಾರನ್ನೂ ಓಲೈಸಲಿಲ್ಲ’ ಎನ್ನುತ್ತಿದ್ದರು ಹನೂರರು ತಮ್ಮ ಮುಖ್ಯ ಉಪನ್ಯಾಸದಲ್ಲಿ. ‘ರಾಜಮಹಾರಾಜರ ವೈಭವವನ್ನು ಅಲಕ್ಷಿಸಿ ಇವರು ಸಂತರ ಮೇಲೆ ಕಥನ ಕಾವ್ಯಗಳನ್ನು ಕಟ್ಟಿಕೊಂಡಿದ್ದೇ ಹೆಚ್ಚು. ಇಲ್ಲದಿದ್ದರೆ ಮಾದೇಶ್ವರ, ಮಂಟೇಸ್ವಾಮಿ, ಸಿರಿ ಪಾಡ್ದನ, ಹಾಲುಮತ ಕಾವ್ಯ, ಜುಂಜಪ್ಪನ ಕತೆ ಹುಟ್ಟುತ್ತಿರಲಿಲ್ಲ’ ಎಂದು ಅಭಿಮಾನದಿಂದ ನುಡಿದರು.

‘ಪುರಂದರದಾಸರು, ಕನಕದಾಸರೂ ಜಾನಪದರೇ. ಅವರು ಊರಿಂದ ಊರಿಗೆ ಪದ ಹೇಳುತ್ತ, ತಿಳಿವಳಿಕೆ ಬಿತ್ತುತ್ತ ನಡೆದವರು. ಮಂಟೇಸ್ವಾಮಿ, ಮಲೆ ಮಾದೇಶ್ವರ, ಬಿಳಿಗಿರಿರಂಗನ ಕಾವ್ಯಗಳ ಆಶಯವೂ ಅದೇ. ಸಿರಿಯಜ್ಜಿ ತನಗೇನೂ ಗೊತ್ತಿಲ್ಲ ಎನ್ನುತ್ತಲೇ ಒಮ್ಮೆ ಹತ್ತು ಸಾವಿರ ತ್ರಿಪದಿಗಳನ್ನು ಹಾಡಿದ್ದರು. ಎಲ್ಲಕ್ಕಿಂಥ ಮೊದಲು ಸ್ತ್ರೀಯರ ಮಾನಸಿಕ ಸ್ವಾತಂತ್ರ್ಯ ತಂದು ಕೊಟ್ಟಿದ್ದೇ, ಹಳ್ಳಿಗಳ ದೇಶದಲ್ಲಿ ಚರಿತ್ರೆಯನ್ನು ಕಟ್ಟಿದ್ದೇ ಜಾನಪದ ಸಾಹಿತ್ಯ. ಇತಿಹಾಸ ಪೂರ್ಣವಾಗೋದೇ ನಾವು ಜಾನಪದರನ್ನೂ ಒಳಗೊಂಡಾಗ. ಇವರು ಅಕ್ಷರಕ್ಕೆ ಅಕ್ಷರ ಕೂಡಿಸಿದರು ಸರಿ, ಜೊತೆಗೆ ಬದುಕಿಗೆ ಬದುಕನ್ನೂ ಸೇರಿಸಿದವರು’ ಎನ್ನುತ್ತಿದ್ದರು ಅವರು ನಂತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ.
ನಾನು ಪ್ರತೀ ಎರಡು ವರ್ಷಕ್ಕೊಮ್ಮೆ ಕನ್ನಡ ಸಾಹಿತ್ಯ ರಂಗದ ವಸಂತೋತ್ಸವವನ್ನು ಇದಿರು ನೋಡುವುದೇ ಈ ಕಾರಣಕ್ಕಾಗಿ. ಅಮೆರಿಕದಲ್ಲಿ ಮೂವತ್ತಕ್ಕೂ ಹೆಚ್ಚು ಕನ್ನಡ ಸಂಘಗಳಿದ್ದರೂ ಅವು ಸಾಂಸ್ಕೃತಿಕ ಉತ್ಸವಗಳನ್ನು ನಡೆಸಲಷ್ಟೇ ಮೀಸಲಾಗಿವೆ. ಹೀಗಾಗಿ ಸಾಹಿತ್ಯಿಕ ಚರ್ಚೆಗಾಗಿ ಹಸಿದು ಕುಳಿತವರಿಗೆ ಈ ಸಮ್ಮೇಳನಗಳು ಕೊಂಚ ನಿರಾಸೆಯನ್ನೇ ಮೂಡಿಸುತ್ತವೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಅಮೆರಿಕದಲ್ಲಿ ಸಾಹಿತ್ಯಾಸಕ್ತ ಸಮಾನ ಮನಸ್ಕರಿಗೆ ಒಂದು ವೇದಿಕೆಯನ್ನು ಕಲ್ಪಿಸಬೇಕು ಎಂಬ ಆಶಯವಿಟ್ಟುಕೊಂಡು ಎಚ್.ವಿ. ರಂಗಾಚಾರ್, ಎಚ್.ವೈ. ರಾಜಗೋಪಾಲ್ ಮುಂತಾದ ಧೀಮಂತರು 2003ರಲ್ಲಿ ಕನ್ನಡ ಸಾಹಿತ್ಯ ರಂಗವನ್ನು ಹುಟ್ಟುಹಾಕಿದರು.

ಹೆಚ್ಚಿನ ಆಡಂಬರವಿಲ್ಲದೇ ಕನ್ನಡ ಸಾಹಿತ್ಯಾಸಕ್ತರೆಲ್ಲ ಒಂದೆಡೆ ಸೇರಿ ವಿದ್ವಾಂಸರ ಉಪನ್ಯಾಸ ಕೇಳುವುದು, ಪುಸ್ತಕ ಸಂತೆಯಲ್ಲಿ ಇಷ್ಟದ ಪುಸ್ತಕ ಕೊಳ್ಳುವುದು, ಸಾಹಿತ್ಯ ಗೋಷ್ಠಿಯಲ್ಲಿ ಇತ್ತೀಚಿನ ಕೃತಿಗಳನ್ನು ಓದುವುದು, ಹೊತ್ತಿಗೆ ಹೊತ್ತು ಎಂಬ ವಿನೂತನ ಶೀರ್ಷಿಕೆಯಡಿಯಲ್ಲಿ ಅಮೆರಿಕನ್ನಡಿಗರ ಹೊಸ ಸಾಹಿತ್ಯ ಕೃತಿಗಳ ಕುರಿತು ಲೇಖಕರ ಜೊತೆಗೇ ಚರ್ಚಿಸುವುದು... ಮುಂತಾದ ಕಾರ್ಯಕ್ರಮಗಳೆಲ್ಲ ಊರಿನದ್ದೇ ಸಾಹಿತ್ಯದ ಕಂಪನ್ನು ನೆನಪಿಗೆ ತರುತ್ತವೆ, ಸಾಹಿತ್ಯದ ಕವಳವನ್ನು ಮನಸಾರೆ ಸೇವಿಸಿದ ಸಂತೃಪ್ತಿಯಾಗುತ್ತದೆ.

ಈ ಬಾರಿಯ ಸಮ್ಮೇಳನದ ಮುಖ್ಯ ಆಕರ್ಷಣೆಯೆಂದರೆ ಅಮೆರಿಕನ್ನಡಿಗರ ಮಕ್ಕಳು ಭಾಗವಹಿಸಿದ ಹೊಸ ನೋಟ ಹೊಸ ಮಾತು ಎಂಬ ಕಾರ್ಯಕ್ರಮ. ಇವರೆಲ್ಲ ಅಮೆರಿಕದಲ್ಲೇ ಹುಟ್ಟಿ ಇಲ್ಲಿನ ನಾಡು, ನುಡಿ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡವರು. ಕನ್ನಡ ಪುಸ್ತಕಗಳನ್ನು ನಿರರ್ಗಳವಾಗಿ ಓದಲು ಬಾರದಿದ್ದರೂ ಇವರಿಗೆ ಕನ್ನಡದ ಅಕ್ಷರ ಜ್ಞಾನವಿದೆ, ಮಾತನಾಡಲೂ ಬರುತ್ತದೆ. ಕನ್ನಡ ಪುಸ್ತಕಗಳನ್ನು ಇಂಗ್ಲೀಷ್ ಅನುವಾದದಲ್ಲಿ ಇವರು ಓದಿಕೊಂಡಿದ್ದಾರೆ. ಹದಿಹರೆಯದ ಈ ಯುವಕ- ಯುವತಿಯರು ಯು.ಆರ್. ಅನಂತಮೂರ್ತಿಯವರ ಅವಸ್ಥೆ, ಗುರುಪ್ರಸಾದ ಕಾಗಿನೆಲೆಯವರ ಹಿಜಾಬ್ ಮತ್ತು ವಸುಧೇಂದ್ರರು ಬರೆದು, ಮೈ ಶ್ರೀ ನಟರಾಜರು ಅನುವಾದಿಸಿದ ಕಥಾಗುಚ್ಛ ದಿ ಅನ್‌ಫರ್ಗಿವಿಂಗ್ ಸಿಟಿ ಕೃತಿಗಳ ಕುರಿತು ಮಾತನಾಡಿದರು. ಕಥಾ ಹಂದರದ ಬಗೆಗಿನ ಇವರ ತೀಕ್ಷ್ಣ ಒಳನೋಟಗಳು ಬೆರಗು ಮೂಡಿಸುವಂತಿದ್ದವು.

ಸಮ್ಮೇಳನದಲ್ಲಿ ಟೆಕ್ಸಸ್ ಜಾನಪದ ಸಂಸ್ಥೆಯ ನಿರ್ದೇಶಕಿಯಾದ ಡಾ.ಕ್ರಿಸ್ಟಿನಾ ಡೌನ್ಸ್ ಅವರಿಂದ ವಿಶೇಷ ಉಪನ್ಯಾಸವಿತ್ತು. ‘ಟೆಕ್ಸಸ್ ಅಮೆರಿಕದ ಎರಡನೆಯ ಅತಿದೊಡ್ಡ ರಾಜ್ಯ. ಹಿಂದೆಲ್ಲ ಬೇರೆ ರಾಜ್ಯಗಳನ್ನು ಬಿಟ್ಟು ನಾನಾಕಾರಣಗಳಿಂದ ಓಡಿಬಂದವರು, ಬಹಿಷ್ಕೃತರಾದವರು ಇಲ್ಲಿಗೆ ಬಂದು ನೆಲೆನಿಂತ ಕತೆಗಳಿವೆ. ಹೀಗಾಗಿ ಈ ನೆಲದಲ್ಲಿ ಹಲವಾರು ದಂತಕತೆಗಳು ಚಾಲ್ತಿಯಲ್ಲಿವೆ. ಒಂದು ಬಗೆಯ ಕತೆಗಳು ರಾಬಿನ್‌ಹುಡ್ ಅಥವಾ ಬಡವರ ಬಂಧು ಮಾದರಿಯ ಸ್ಟೋರಿಯನ್ನು ಹೇಳಿದರೆ, ಇನ್ನೊಂದು ಬಗೆಯವು ಅಕಾರಣ ಕ್ರೌರ್ಯವನ್ನು ವಿಜೃಂಭಿಸುವ ದುರುಳರ ಗಾಥೆಯನ್ನು ವರ್ಣಿಸುತ್ತವೆ’ ಎಂದು ಮಂಡಿಸಿದರು. ಹಾಗೆಯೇ ಮುಂದುವರೆದು, ‘ಈಗಲೂ ಟೆಕ್ಸಸ್‌ನ ಕೆಲವು ಕುಟುಂಬಗಳು ತಮ್ಮ ಚರಿತ್ರೆಯನ್ನು ತಿಳಿಸುವಾಗ ಈ ದಂತಕತೆಗಳನ್ನು ಉದ್ಧರಿಸುವುದುಂಟು’ ಎಂದು ತಿಳಿಸಿದರು.
ಸಂಜೆಯ ಹೊತ್ತು ಮಲ್ಲಿಗೆ ಕನ್ನಡ ಕೂಟದ ಸದಸ್ಯರು ನಡೆಸಿಕೊಟ್ಟ ಚಿತ್ರಕಾವ್ಯ ಪ್ರದರ್ಶನ, ಗಮಕ ವಾಚನ, ಯಕ್ಷಗಾನದ ಕಂಸವಧೆ ಪ್ರಸಂಗ ಮನೋಹರವಾಗಿತ್ತು. ತೇಜಸ್ವಿಯವರ ಕರ್ವಾಲೊ ಕಾದಂಬರಿಯ ರಂಗರೂಪ ಹಾರುವ ಓತಿ ನಾಟಕ ಪ್ರೇಕ್ಷಕರಿಗೆ ಕಾದಂಬರಿಯ ಓದನ್ನು ಮತ್ತೊಮ್ಮೆ ನೆನಪಿಸಿತು. ಅಮೆರಿಕನ್ನಡ ಮಕ್ಕಳು ವಿವಿಧ ಜಾನಪದ ಗೀತೆಗಳಿಗೆ ಕಂಠ ನೀಡಿ, ಹೆಜ್ಜೆ ಹಾಕಿದ್ದು ಮುದ ನೀಡಿತು.

ಕುಮಾರವ್ಯಾಸನ ಕುರಿತ ಗೋಷ್ಠಿಯಲ್ಲಿ ಮಾತನಾಡುತ್ತ ಹನೂರರು, ‘ಪಾಂಡಿತ್ಯಕ್ಕೆ ಪಂಪ, ಅಧ್ಯಾತ್ಮಕ್ಕೆ ಅಲ್ಲಮ, ಜನಪ್ರಿಯ ಭಾರತ ಕಥನಕ್ಕೆ ಕುಮಾರವ್ಯಾಸ- ಈ ಮೂವರೂ ಕನ್ನಡಕ್ಕೊದಗಿದ ಘನ ವ್ಯಕ್ತಿತ್ವಗಳು’ ಎಂದರು.

ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದ ಎಸ್.ಎನ್. ಶ್ರೀಧರ್ ಆ ಮಾತನ್ನು ಅನುಮೋದಿಸುತ್ತ, ‘ಅಮೆರಿಕದ ವಿದ್ಯಾರ್ಥಿಗಳಿಗೆ ಕುಮಾರವ್ಯಾಸನ ಕಾವ್ಯವನ್ನು ವಿವರಿಸುವಾಗ ಶೇಕ್‌ಸ್ಪಿಯರ್‌ ಮಹಾಕಾವ್ಯವನ್ನು ಬರೆದಿದ್ದರೆ ಹೇಗಿರುತ್ತಿತ್ತೋ ಹಾಗಿದೆ ಈ ಕೃತಿ ಎನ್ನುತ್ತೇನೆ’ ಎಂದು ಸೇರಿಸಿದರು.

ಈ ವೇದಿಕೆಯಲ್ಲಿ ಸಾಹಿತ್ಯದ ಪ್ರೇರಣೆಯ ಕುರಿತೂ ಚರ್ಚೆಯಾಯಿತು. ಈ ಗೋಷ್ಠಿಯಲ್ಲಿ ಇತಿಹಾಸ, ಪುರಾಣಗಳನ್ನು ಊರುಗೋಲಾಗಿ ಇಟ್ಟುಕೊಂಡು ಸಮರ್ಥ ಸೃಜನಶೀಲ ಶಕ್ತಿಯಿಂದ ಸೃಷ್ಟಿಸಿದ ಕೃತಿಗಳು ಓದುಗರ ಮನಸ್ಸಿನಲ್ಲಿ ಬಹುಕಾಲ ಉಳಿಯುತ್ತವೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು. ‘ಕೊನೆಗೂ ಬರವಣಿಗೆ ಅಂದರೆ ಸ್ವತಃ ಲೇಖಕನಿಗೂ ಅರಿವಾಗದ ಅನೂಹ್ಯ ಸಂಗತಿ. ಗರ್ಭದಲ್ಲಿರುವ ಮಗುವಿನ ಚಹರೆ ಸ್ವತಃ ತಾಯಿಗೂ ಗೊತ್ತಾಗದ ಹಾಗೆ’ ಎನ್ನುತ್ತ ಹನೂರರು ಒಮ್ಮೆ ದಿವ್ಯವಾಗಿ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT