ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪಿಎಆರ್ ಸೇರಿ ವಿವಿಧ ಇಲಾಖೆಗಳಲ್ಲಿ 1.37 ಲಕ್ಷ ಕಡತ ವಿಲೇವಾರಿಗೆ ಬಾಕಿ!

ಸಚಿವ ಸಂಪುಟ ಸಭೆಗೆ ಮಾಹಿತಿ ನೀಡಿದ್ದ ಸಿಎಸ್‌; ತಿಂಗಳ ಕೊನೆಗೆ ಶೇ 10ರಷ್ಟು ವಿಲೇವಾರಿಗೆ ಸೂಚನೆ
Published 4 ಫೆಬ್ರುವರಿ 2024, 23:37 IST
Last Updated 5 ಫೆಬ್ರುವರಿ 2024, 2:55 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿಯವರ ನೇರ ಉಸ್ತುವಾರಿಯಲ್ಲಿರುವ ಆರ್ಥಿಕ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಸೇರಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 1.37 ಲಕ್ಷಕ್ಕೂ ಹೆಚ್ಚು ಕಡತಗಳು ವಿಲೇವಾರಿಗೆ ಬಾಕಿ ಇವೆ.

ಹೆಚ್ಚಿನ ಸಂಖ್ಯೆಯಲ್ಲಿ ಕಡತಗಳು ಬಾಕಿ ಇರುವುದು ಗೊತ್ತಾಗುತ್ತಿದ್ದಂತೆಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಕ್ಷಣ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಸಚಿವಾಲಯದಲ್ಲಿಯೇ ಕಡತಗಳು ವಿಲೇವಾರಿ ಆಗುತ್ತಿಲ್ಲ ಎಂದು ಕೆಲವು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರ ಬೆನ್ನಲ್ಲೆ, 39 ಇಲಾಖೆಗಳಲ್ಲಿ ಸಾವಿರಾರು ಕಡತಗಳು ವಿಲೇವಾರಿಯಾಗದೆ ಉಳಿದಿರುವ ಮಾಹಿತಿ ಬಹಿರಂಗವಾಗಿದೆ.

2023ರ ನವೆಂಬರ್‌ 30ರ ಅಂತ್ಯಕ್ಕೆ ಒಟ್ಟು 1,55,795 ಕಡತಗಳು ಬಾಕಿ ಇದ್ದವು. ಡಿಸೆಂಬರ್‌ ಮತ್ತು ಜನವರಿ ಈ ಎರಡು ತಿಂಗಳಲ್ಲಿ ಹೊಸದಾಗಿ 35,036 ಕಡತಗಳನ್ನು ತೆರೆಯಲಾಗಿದೆ. ಈ ಅವಧಿಯಲ್ಲಿ 52,935 ಕಡತಗಳನ್ನು ಮುಕ್ತಾಯಗೊಳಿಸಲಾಗಿದೆ.

ನಗರಾಭಿವೃದ್ಧಿ ಇಲಾಖೆಯೊಂದರಲ್ಲೇ 16 ಸಾವಿರಕ್ಕೂ ಹೆಚ್ಚು ಕಡತಗಳು ಬಾಕಿ ಇವೆ. ಕಂದಾಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಡಿಪಿಎಆರ್‌, ಗೃಹ, ವಾಣಿಜ್ಯ ಮತ್ತು ಕೈಗಾರಿಕೆ, ಲೋಕೋಪಯೋಗಿ, ಅರಣ್ಯ, ಆರ್ಥಿಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಲ್ಲಿ ತಲಾ 5 ಸಾವಿರಕ್ಕೂ ಹೆಚ್ಚು ಕಡತಗಳು ವಿಲೇವಾರಿಗಾಗಿ ಕಾದಿವೆ.

ಸಚಿವಾಲಯದ ಇಲಾಖೆಗಳಲ್ಲಿ ಇ– ಕಚೇರಿ, ಸಚಿವಾಲಯ ವಾಹಿನಿಯಲ್ಲಿ ಬಾಕಿ ಇರುವ ಕಡತಗಳ ತ್ವರಿತ ವಿಲೇವಾರಿಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರು ಫೆಬ್ರುವರಿ 1ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿದ್ದರು. ಕೆಲವು ಇಲಾಖೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಡತಗಳು ವಿಲೇವಾರಿ ಆಗದೆ ಉಳಿದಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಅಂತಹ ಇಲಾಖೆಗಳ ಕಾರ್ಯವೈಖರಿ ಬಗ್ಗೆ ಮುಖ್ಯಮಂತ್ರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿರುವ ವಿಷಯದ ಕುರಿತು ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಮರುದಿನವೇ (ಫೆ. 2) ಟಿಪ್ಪಣಿ ಕಳುಹಿಸಿರುವ ಮುಖ್ಯ ಕಾರ್ಯದರ್ಶಿ, ಕಡತಗಳ ವಿಲೇವಾರಿ ಆಗದಿರುವ ವಿಚಾರದಲ್ಲಿ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿರುವುದನ್ನೂ ಉಲ್ಲೇಖಿಸಿದ್ದಾರೆ. ಖುದ್ದು ಗಮನಹರಿಸಿ, ಫೆಬ್ರುವರಿ ಅಂತ್ಯಕ್ಕೆ ಕನಿಷ್ಠ ಶೇಕಡ 10ರಷ್ಟು ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ಗುರಿ ನಿಗದಿಪಡಿಸಿದ್ದಾರೆ.

ಅಲ್ಲದೆ, ಎಲ್ಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳೊಂದಿಗೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸಿ, ಕಡತ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬಕ್ಕೆ ಕಾರಣ ಮತ್ತು ವಿಲೇವಾರಿ ಪ್ರಕ್ರಿಯೆಯಲ್ಲಿ ಏನಾದರೂ ತೊಡಕುಗಳಿವೆಯೇ ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು. ತ್ವರಿತವಾಗಿ ವಿಲೇವಾರಿ ಮಾಡಿ ಪ್ರಗತಿ ಸಾಧಿಸಿದ ವರದಿಯನ್ನು ಸಲ್ಲಿಸಬೇಕು ಎಂದೂ ಅವರು ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT