ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2004ರ ಫಲಿತಾಂಶ ಪುನರಾವರ್ತನೆ ಆಗಲಿದೆ: ಜೈರಾಮ್ ರಮೇಶ್

Published 22 ಏಪ್ರಿಲ್ 2024, 15:39 IST
Last Updated 22 ಏಪ್ರಿಲ್ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ‘2014ರಲ್ಲಿ ನರೇಂದ್ರ ಮೋದಿ ಪರ ಅಲೆ ಇತ್ತು. 2019ರಲ್ಲಿ ಪುಲ್ವಾಮಾ ಸ್ಫೋಟದಿಂದ ಬಿಜೆಪಿಗೆ ಲಾಭವಾಯಿತು. ಈ ಬಾರಿ ಮೋದಿ ಅಲೆ ಇಲ್ಲ. 2004ರ ಚುನಾವಣಾ ಫಲಿತಾಂಶ ಈ ಬಾರಿ ಪುನರಾವರ್ತನೆ ಆಗಲಿದೆ’ ಎಂದು ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಜೈರಾಂ ರಮೇಶ್ ಹೇಳಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ನಾನು ಈವರೆಗೆ ಎಂಟು ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದೇನೆ. ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಬಿಜೆಪಿ ಗರಿಷ್ಠ ಸ್ಥಾನ ಗಳಿಸಿತ್ತು. ಅಲ್ಲಿ ಬಿಜೆಪಿಯ ಗಳಿಕೆ ಕುಸಿಯಲಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯ ಗಳಿಕೆ ತೀರಾ ಕೆಳಕ್ಕೆ ಇಳಿಯಲಿದೆ. ಹೀಗಾಗಿ ‘ಇಂಡಿಯಾ’ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಲಿದೆ. 2004ರಂತೆ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ’ ಎಂದರು.

ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್‌ ಎಲ್ಲಿಯೂ ಅಧಿಕಾರದಲ್ಲಿಲ್ಲ. ಆದರೂ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಲು ಅಲ್ಲಿನ ಜನರು ನಿರ್ಧರಿಸಿದ್ದಾರೆ. ರಾಜಸ್ಥಾನದಲ್ಲೂ ಹೆಚ್ಚಿನ ಸ್ಥಾನಗಳು ದೊರಕಲಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಮುನ್ನಡೆ ಸಾಧಿಸಲಿದೆ ಎಂದು ಹೇಳಿದರು.

ನರೇಂದ್ರ ಮೋದಿ ಈಗ ಚುನಾವಣಾ ಪ್ರಚಾರದ ಕಾರ್ಯಸೂಚಿ ಬದಲಿಸಿಕೊಂಡಿದ್ದಾರೆ. ಹತ್ತು ವರ್ಷಗಳ ಅವರದ್ದೇ ಆಡಳಿತದ ಕುರಿತು ಮಾತನಾಡುತ್ತಿಲ್ಲ. ಐದಾರು ದಿನಗಳಿಂದ ಅವರು ಮತೀಯ ವಿಚಾರಗಳನ್ನು ಪ್ರಸ್ತಾಪಿಸಿ ಮತಗಳ ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಎನ್‌ಡಿಎ ಮೈತ್ರಿಕೂಟ ಸೋಲು ಕಾಣಲಿದೆ ಎಂಬ ಸುಳಿವು ಪ್ರಧಾನಿಯವರಿಗೆ ಸಿಕ್ಕಿರುವುದಕ್ಕೆ ಇದು ಸಾಕ್ಷಿ ಎಂದರು.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಮತ್ತು ಕೇರಳದಲ್ಲಿ ಎಡ ಪಕ್ಷಗಳು ಕಾಂಗ್ರೆಸ್‌ ವಿರುದ್ಧವೇ ಹೋರಾಟ ನಡೆಸುತ್ತಿವೆ. ಆದರೆ, ತೃಣಮೂಲ ಕಾಂಗ್ರೆಸ್‌ ಮತ್ತು ಎಡ ಪಕ್ಷಗಳು ಇಂಡಿಯಾ ಮೈತ್ರಿಕೂಟದಲ್ಲೇ ಇವೆ. ಕಾಂಗ್ರೆಸ್‌ ಪಕ್ಷ 350 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಶೇಕಡ 50ಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕನಿಷ್ಠ 17ರಲ್ಲಿ ಗೆಲುವು

‘ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವ ಕಾಂಗ್ರೆಸ್‌ ಸರ್ಕಾರವನ್ನು ಜನರು ಬೆಂಬಲಿಸಲಿದ್ದಾರೆ. ಇಲ್ಲಿ ಕಾಂಗ್ರೆಸ್‌ ಕನಿಷ್ಠ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ’ ಎಂದು ಜೈರಾಂ ರಮೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT