ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೀ ಹೆಚ್ಚು ಶ್ರೀಮಂತ ಶಾಸಕರಿರುವುದು ಕರ್ನಾಟಕದಲ್ಲಿ!

Last Updated 18 ಸೆಪ್ಟೆಂಬರ್ 2018, 11:10 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ 224 ಶಾಸಕರ ಪೈಕಿ 203 ಶಾಸಕರು ಶ್ರೀಮಂತರಾಗಿದ್ದು ಇವರ ವಾರ್ಷಿಕ ಆದಾಯ ₹111.4 ಲಕ್ಷ ಇದೆ. ಅದೇ ವೇಳೆ ಮಹಾರಾಷ್ಟ್ರದ 256 ಶಾಸಕರ ವಾರ್ಷಿಕ ಆದಾಯ ₹43.4 ಲಕ್ಷ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) 3,145 ಶಾಸಕರು ಸಲ್ಲಿಸಿದ ಪ್ರಮಾಣ ಪತ್ರವನ್ನು ವಿಶ್ಲೇಷಣೆ ನಡೆಸಿ ವರದಿ ಪ್ರಕಟಿಸಿದೆ.
941 ಶಾಸಕರು ಪ್ರಮಾಣಪತ್ರದಲ್ಲಿ ತಮ್ಮ ಆದಾಯ ಪ್ರಟಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಆದಾಗ್ಯೂ. ಹಾಲಿ ಶಾಸಕರ ವಾರ್ಷಿಕ ಆದಾಯದ ಬಗ್ಗೆ ಮಾತ್ರ ಇಲ್ಲಿ ವಿಶ್ಲೇಷಣೆ ಮಾಡಲಾಗಿದೆ.

ಹಾಲಿ ಶಾಸಕರ ಸರಾಸರಿ ವಾರ್ಷಿಕ ಆದಾಯ ₹24.59 ಲಕ್ಷ ಆಗಿದೆ.

ಅತಿ ಹೆಚ್ಚು ಸರಾಸರಿ ವಾರ್ಷಿಕ ಆದಾಯ ಹೊಂದಿರುವವರು ಭಾರತದ ಉತ್ತರ ರಾಜ್ಯಗಳ ಶಾಸಕರಾಗಿದ್ದಾರೆ. ಇವರ ಸರಾಸರಿ ವಾರ್ಷಿಕ ಆದಾಯ ₹51.99 ಲಕ್ಷ. ಅದೇ ವೇಳೆ ಪೂರ್ವ ರಾಜ್ಯಗಳ 614 ಶಾಸಕರ ಸರಾಸರಿ ವಾರ್ಷಿಕ ಆದಾಯವು ₹8.53 ಲಕ್ಷ ಆಗಿದೆ.
ಚತ್ತೀಸಗಡದ 63 ಶಾಸಕರು ಅತೀ ಕಡಿಮೆ ಅಂದರೆ ₹5.4ಲಕ್ಷ ಸರಾಸರಿ ವಾರ್ಷಿಕ ಆದಾಯ ಹೊಂದಿದ್ದಾರೆ. ಜಾರ್ಖಂಡ್‍ನ 72 ಶಾಸಕರ ಸರಾಸರಿ ವಾರ್ಷಿಕ ಆದಾಯ ₹7.4 ಲಕ್ಷ ಆಗಿದೆ.
3,145 ಶಾಸಕರ ಪ್ರಮಾಣ ಪತ್ರ ವಿಶ್ಲೇಷಣೆ ಮಾಡಿದಾಗ 55(ಶೇ.2)ಮಂದಿ ಪ್ರಮಾಣ ಪತ್ರದಲ್ಲಿ ತಮ್ಮ ವೃತ್ತಿಯ ಮಾಹಿತಿ ನೀಡಿಲ್ಲ. 771 (ಶೇ.25) ಮಂದಿ ವ್ಯಾಪಾರವನ್ನೇ ವೃತ್ತಿ ಎಂದು ನಮೂದಿಸಿದ್ದಾರೆ. 758 (ಶೇ. 24) ಮಂದಿ ಕೃಷಿಕರು ಅಥವಾ ರೈತರು ಎಂದು ನಮೂದಿಸಿದ್ದಾರೆ.
397 (ಶೇ.13 ) ಶಾಸಕರು ತಮ್ಮ ವೃತ್ತಿಯನ್ನು ಕೃಷಿ ಮತ್ತು ವ್ಯಾಪಾರ ಎಂದು ನಮೂದಿಸಿದ್ದು. ಅವರ ಸರಾಸರಿ ವಾರ್ಷಿಕ ಆದಾಯ ₹57.81 ಲಕ್ಷ ಆಗಿದೆ.

ರಿಯಲ್ ಎಸ್ಟೇಟ್ ವ್ಯಾಪಾರ,ನಟನೆ ಮತ್ತು ಸಿನಿಮಾ ನಿರ್ಮಾಣವೃತ್ತಿಯಲ್ಲಿರುವವರು ಶೇ.1ರಷ್ಟು ಇದ್ದಾರೆ. ಇವರು ಅತೀ ಹೆಚ್ಚು ಆದಾಯ ಪಡೆಯುವ ವೃತ್ತಿಗಳ ಪೈಕಿ ಅಗ್ರ ನಾಲ್ಕನೇ ಸ್ಥಾನದಲ್ಲಿದ್ದು ಸರಾಸರಿ ವಾರ್ಷಿಕ ಆದಾಯ ಕ್ರಮವಾಗಿ ₹39.69 ಲಕ್ಷ ಮತ್ತು ₹28.48 ಲಕ್ಷ ಆಗಿದೆ.

ಗೃಹಿಣಿ, ಶಿಕ್ಷಕ,ಪಿಂಚಣಿದಾರ ಮತ್ತು ವಕೀಲ ವೃತ್ತಿಗಳು ಕಡಿಮೆ ಆದಾಯದ ವೃತ್ತಿಗಳ ಪಟ್ಟಿಯಲ್ಲಿದೆ.
1,052 (ಶೇ. 33) ಶಾಸಕರು ತಮ್ಮ ವಿದ್ಯಾರ್ಹತೆ 5 ರಿಂದ 12 ನೇ ತರಗತಿ ತೇರ್ಗಡೆ ಎಂದು ನಮೂದಿಸಿದ್ದಾರೆ. ಇವರ ಸರಾಸರಿ ವಾರ್ಷಿಕ ಆದಾಯ ₹31.01 ಲಕ್ಷ ಆಗಿದೆ.1,997 (ಶೇ. 63 ) ಶಾಸಕರು ಪದವೀಧರರು ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಪಡೆದಿದ್ದು. ಸರಾಸರಿ ವಾರ್ಷಿಕ ಆದಾಯ ₹20.87 ಹೊಂದಿದ್ದಾರೆ.

139 ಶಾಸಕರು 8ನೇ ತರಗತಿ ತೇರ್ಗಡೆ ಆಗಿದ್ದು ಸರಾಸರಿ ವಾರ್ಷಿಕ ಆದಾಯ ₹89.88 ಲಕ್ಷ ಹೊಂದಿದ್ದಾರೆ. ಅದೇ ವೇಳೆ ಅನಕ್ಷರಸ್ಥರು ಎಂದು ಎಂದು ಹೇಳಿರುವ ಶಾಸಕರ ಸರಾಸರಿ ವಾರ್ಷಿಕ ಆದಾಯ ₹9.31 ಲಕ್ಷ.
1,402 ಶಾಸಕರು 25- 50 ವರ್ಷದವರಾಗಿದ್ದು ಅವರ ಸರಾಸರಿ ವಾರ್ಷಿಕ ಆದಾಯ ₹18.25 ಲಕ್ಷ ಮತ್ತು 51-80 ವಯಸ್ಸಿನ ಶಾಸಕರ ಸಂಖ್ಯೆ 1,727 ಇದೆ. ಇವರ ಸರಾಸರಿ ವಾರ್ಷಿಕ ಆದಾಯ ₹29.32 ಲಕ್ಷ ಇದೆ.

81-90 ವಯಸ್ಸಿನ 11 ಶಾಸಕರು ಇದ್ದಾರೆ. ಇವರ ಸರಾಸರಿ ವಾರ್ಷಿಕ ಆದಾಯ ₹87.71 ಲಕ್ಷ ಆಗಿದ್ದು 90 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಇಬ್ಬರು ಶಾಸಕರು ಇದ್ದಾರೆ. ಇವರ ಸರಾಸರಿ ವಾರ್ಷಿಕ ಆದಾಯ ₹60.91 ಲಕ್ಷ.
258 (ಶೇ. 8) ಶಾಸಕಿಯರು ಇದ್ದಾರೆ. ಶಾಸಕರ ಸರಾಸರಿ ವಾರ್ಷಿಕ ಆದಾಯ 25.85 ಲಕ್ಷ ಆಗಿದ್ದರೆ, ಶಾಸಕಿಯರ ಸರಾಸರಿ ವಾರ್ಷಿಕ ಆದಾಯ 10.53 ಲಕ್ಷ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT