ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಭಾಗ್ಯಲಕ್ಷ್ಮಿ’ಯಲ್ಲಿ ₹23 ಕೋಟಿ ಅಕ್ರಮ; ಎಸ್‌ಐಟಿ ರಚಿಸಿ: ರಮೇಶ್ ಬಾಬು

2010–11ರಲ್ಲಿ ಅವ್ಯವಹಾರ ನಡೆದಿರುವುದಾಗಿ ಮುಖ್ಯಮಂತ್ರಿಗೆ ಕಾಂಗ್ರೆಸ್ ಪತ್ರ
Published 5 ಸೆಪ್ಟೆಂಬರ್ 2024, 16:01 IST
Last Updated 5 ಸೆಪ್ಟೆಂಬರ್ 2024, 16:01 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾಗ್ಯಲಕ್ಷ್ಮಿ ಯೋಜನೆಯಡಿ 2010–2011ನೇ ಸಾಲಿನಲ್ಲಿ ಉಚಿತ ಸೀರೆ ಹಂಚಿಕೆಯಲ್ಲಿ ಸುಮಾರು ₹23 ಕೋಟಿಯ ಅವ್ಯವಹಾರ ನಡೆದಿದೆ. ಈ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಪತ್ರ ಬರೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ವಿಷಯ ತಿಳಿಸಿದ ರಮೇಶ್‌ ಬಾಬು, ‘ಸೂರತ್‌ನಿಂದ ಮಾರುಕಟ್ಟೆ ದರಕ್ಕಿಂತ ಹೆಚ್ಚು ದರ ನೀಡಿ ಸುಮಾರು 10.68 ಲಕ್ಷ ಸೀರೆ ಖರೀದಿಸಿ ಹಂಚಿಕೆ ಮಾಡಲಾಗಿತ್ತು. ಅಂದು ವಿಧಾನಪರಿಷತ್‌ ಬಿಜೆಪಿ ಸದಸ್ಯರಾಗಿದ್ದ ಲಹರ್‌ ಸಿಂಗ್‌ ಸೀರೋಯಾ ಈ ವಹಿವಾಟಿನಲ್ಲಿ ಭಾಗಿಯಾಗಿರುವ ಆರೋಪವಿದೆ’ ಎಂದರು.

‘ಮೋಟಮ್ಮ ಅವರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದಾಗ ಈ ವಿಚಾರ ಚರ್ಚೆಯಾಗಿತ್ತು. ಆಗ ಸದಸ್ಯರಾಗಿದ್ದ ಯು.ಬಿ. ವೆಂಕಟೇಶ್, ದಯಾನಂದ ಮುಂತಾದವರೂ ಚರ್ಚೆ ನಡೆಸಿದ್ದರು’ ಎಂದರು.

‘ರಾಜಸ್ಥಾನದಿಂದ ಬಂದು ಕರ್ನಾಟಕದಲ್ಲಿ ರಾಜಕೀಯ ನೆಲೆ ಕಂಡುಕೊಂಡಿರುವ ಲಹರ್‌ ಸಿಂಗ್‌ ಕರ್ನಾಟಕದ ಹಿತ ಕಾಪಾಡುತ್ತಾರೋ, ರಾಜಸ್ಥಾನದ ಹಿತ ಕಾಪಾಡುತ್ತಾರೋ ನೋಡಬೇಕು. ಅಕ್ರಮಗಳ ಬಗ್ಗೆ ಮಾತನಾಡುವ ಅವರು ಈ ಸೀರೆ ಹಗರಣದ ಬಗ್ಗೆ ಧ್ವನಿ ಎತ್ತಬೇಕು. ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆಯಬೇಕು’ ಎಂದು ಆಗ್ರಹಿಸಿದರು.

‘ಶಾಲೆಗೆಂದು ಪಡೆದ ಸಿಎ ನಿವೇಶನದಲ್ಲಿ ಬಿರಿಯಾನಿ ಹೋಟೆಲ್ ನಡೆಸುತ್ತಿರುವ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಾಂಗ್ರೆಸ್ ಪಕ್ಷದ ಎರಡನೇ ಸಾಲಿನ ನಾಯಕರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಗೇಲಿ ಮಾಡಿದ್ದಾರೆ. ವಿಜಯೇಂದ್ರ, ಆರ್. ಅಶೋಕ, ಸಂಸದ ಡಾ.ಕೆ. ಸುಧಾಕರ್, ಅಶ್ವತ್ಥನಾರಾಯಣ ಅವರು ಜಗನ್ನಾಥ ಭವನದ ನಾಯಕರಲ್ಲ, ಬಾಲಭವನದ ನಾಯಕರು ಎಂದು ಜಗನ್ನಾಥ ಭವನದ ನಾಯಕರಾದ ಬಿ.ಎಲ್. ಸಂತೋಷ, ಸಿ.ಟಿ. ರವಿ, ಯತ್ನಾಳ್, ರವಿಕುಮಾರ್ ಹೇಳುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಇದ್ದರು.

‘ಭೂ ಹಗರಣ ಸೃಷ್ಟಿಸಿ ಕಿರುಕುಳ ನೀಡುವ ವ್ಯಕ್ತಿ’

‘ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೋರ್ಟ್‌ ಮೆಟ್ಟಿಲೇರಿರುವ ಸ್ನೇಹಮಯಿ ಕೃಷ್ಣ ಭೂ ಹಗರಣ ಸೃಷ್ಟಿಸಿ ಕಿರುಕುಳ ನೀಡುವ ವ್ಯಕ್ತಿ’ ಎಂದು ಕೆ‍ಪಿಸಿಸಿ ವಕ್ತಾರ ಲಕ್ಷ್ಮಣ್‌ ಆರೋಪಿಸಿದರು. ‘ಮೈಸೂರು ನಗರದಲ್ಲಿ ಮಾತ್ರ ಆತನ ಮೇಲೆ 22 ಎಫ್ಐಆರ್‌ ದಾಖಲಾಗಿವೆ. ಅಮಾಯಕ ಭೂಮಾಲೀಕರನ್ನು ಹೆದರಿಸಿ ಸಣ್ಣಪುಟ್ಟ ಜಗಳಗಳನ್ನು ಸೃಷ್ಟಿಸಿ ಕಾನೂನು ದುರುಪಯೋಗ ಮಾಡಿಕೊಂಡಿರುವ ವ್ಯಕ್ತಿ’ ಎಂದರು. ‘ಆರ್‌ಟಿಐಯಲ್ಲಿ ದಾಖಲೆ ಪಡೆಯುವುದು ಅದಕ್ಕೆ ವೈಟ್ನರ್ ಹಾಕುವುದು ನಕಲಿ ಸೀಲು ಹಾಕಿ ದಾಖಲೆ ಸೃಷ್ಟಿಸುವ ಈತ ನಕಲಿಗಳ ಸರದಾರ. ಮುಡಾ ಪ್ರಕರಣದಲ್ಲಿ ಒಂದಷ್ಟು ನಕಲಿ ದಾಖಲೆ ಸೃಷ್ಟಿಸಿದ್ದಾನೆ ಎಂದು ಪೊಲೀಸ್ ಕಮಿಷನರ್‌ಗೆ ಈಗಾಗಲೇ ದೂರು ನೀಡಲಾಗಿದೆ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ದಾಖಲೆಗಳನ್ನು ನೀಡಿದ್ದೂ ಇದೇ ಸ್ನೇಹಮಯಿ ಕೃಷ್ಣ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT