ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೇಕಾರಿಕೆ ಉದ್ಯಮಿಗಳಿಗೆ ಶೇ 50ರಷ್ಟು ಸಹಾಯಧನ: ಸಿಎಂ ಬೊಮ್ಮಾಯಿ

Last Updated 17 ಡಿಸೆಂಬರ್ 2022, 11:10 IST
ಅಕ್ಷರ ಗಾತ್ರ

ಬೆಂಗಳೂರು: ನೇಕಾರ ಸಮುದಾಯದವರು ನೇಕಾರಿಕೆಗೆ ಸಂಬಂಧಿಸಿದ ಉದ್ಯಮಗಳನ್ನು ಆರಂಭಿಸಲು ನೀಡುವ ಸಹಾಯಧನದ ಮೊತ್ತವನ್ನು ಶೇಕಡ 30ರಿಂದ ಶೇ 50ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನೇಕಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನೇಕಾರರ ಹಲವು ಬೇಡಿಕೆಗಳನ್ನು ಈಡೇರಿಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಂಡಿದ್ದೇವೆ. ವೃತ್ತಿಪರ ನೇಕಾರರಿಗೆ ಸರ್ಕಾರದಿಂದ ಹೆಚ್ಚಿನ ನೆರವು ಒದಗಿಸಲಾಗುವುದು’ ಎಂದರು.

ವಿದ್ಯುತ್‌ ಮಗ್ಗಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೂ ನೇಕಾರ್‌ ಸಮ್ಮಾನ್‌ ಯೋಜನೆ ವಿಸ್ತರಿಸಲಾಗುವುದು. ಜನವಸತಿ ಪ್ರದೇಶದಲ್ಲಿರುವ ನೇಕಾರರಿಗೆ ವಾಸ್ತವ್ಯ ಪ್ರಮಾಣಪತ್ರ ವಿತರಿಸಲಾಗುವುದು. ಮಗ್ಗದ ಮೂಲಕ ನೇಕಾರಿಕೆ ನಡೆಸುವುದನ್ನು ಗುಡಿ ಕೈಗಾರಿಕೆ ಎಂದು ಪರಿಗಣಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯುವುದರಿಂದ ವಿನಾಯ್ತಿ ನೀಡಲು ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

ವಿದ್ಯಾ ವಿಕಾಸ ಯೋಜನೆಯಡಿ ಸಮವಸ್ತ್ರ ಪೂರೈಕೆಗೆ ಕೈಮಗ್ಗ ಮತ್ತು ವಿದ್ಯುತ್‌ ಮಗ್ಗಗಳಿಂದ ಬಟ್ಟೆ ಖರೀದಿಗೆ ಆದ್ಯತೆ ನೀಡಲಾಗುವುದು. ಮಗ್ಗಗಳಿಂದ ಲಭ್ಯವಾಗುವ ಬಟ್ಟೆಯ ಪ್ರಮಾಣವನ್ನು ನಿಗದಿಪಡಿಸಿ, ಉಳಿದ ಪ್ರಮಾಣದ ಬಟ್ಟೆ ಖರೀದಿಗೆ ಟೆಂಡರ್‌ ಕರೆಯಲಾಗುವುದು. ಮಗ್ಗಗಳಿಂದ ಬಟ್ಟೆ ಖರೀದಿಗೆ ಡಿಸೆಂಬರ್‌ ತಿಂಗಳಿನಲ್ಲೇ ಕಾರ್ಯಾದೇಶ ನೀಡಲಾಗುವುದು. ವಿವಿಧ ಇಲಾಖೆಗಳಲ್ಲಿ ಸಮವಸ್ತ್ರಕ್ಕೆ ಅಗತ್ಯವಿರುವ ಬಟ್ಟೆಯ ಶೇ 25ರಷ್ಟನ್ನು ಕೈಮಗ್ಗ ನಿಗದಮ ಮೂಲಕ ಖರೀದಿಗೆ ನಿರ್ಧರಿಸಲಾಗಿದೆ ಎಂದರು.

ನೇಕಾರರಿಗೆ ₹ 2 ಲಕ್ಷದವರೆಗೆ ಬಡ್ಡಿರಹಿತ ಸಾಲ ವಿತರಿಸುವುದು, ಐದು ಅಶ್ವಶಕ್ತಿ (ಎಚ್.ಪಿ) ಸಾಮರ್ಥ್ಯದವರೆಗಿನ ವಿದ್ಯುತ್‌ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಿಗೆ ತಮಿಳುನಾಡು ಮಾದರಿಯಲ್ಲಿ ಉಚಿತ ವಿದ್ಯುತ್‌ ಪೂರೈಕೆ, ವಿದ್ಯುತ್‌ ಬಿಲ್‌ನ ನಿಶ್ಚಿತ ಶುಲ್ಕದಲ್ಲಿ ಶೇ 50ರಷ್ಟು ರಿಯಾಯ್ತಿ, ನೇಕಾರರನ್ನು ಅಸಂಘಟಿತ ವಲಯದ ಕಾರ್ಮಿಕರ ವ್ಯಾಪ್ತಿಗೆ ಸೇರಿಸಿ ಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ಅಭಯ ಪಾಟೀಲ, ಮಹದೇವಪ್ಪ ಯಾದವಾಡ, ಬಿಜೆಪಿ ಮುಖಂಡ ಎಂ.ಡಿ. ಲಕ್ಷ್ಮೀನಾರಾಯಣ, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್. ಎನ್. ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಸಣ್ಣ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT