ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ 8.06 ಲಕ್ಷ ಉದ್ಯೋಗಗಳಲ್ಲಿ ಶೇ 86ರಷ್ಟು ಸ್ಥಳೀಯರು!

Published 12 ಆಗಸ್ಟ್ 2024, 0:00 IST
Last Updated 12 ಆಗಸ್ಟ್ 2024, 0:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಬಹುತೇಕ ಕೈಗಾರಿಕಾ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳಲ್ಲಿ ಕನ್ನಡಿಗರು ಇದ್ದಾರೆ ಎನ್ನುತ್ತವೆ ಸರ್ಕಾರದ ಅಂಕಿಅಂಶಗಳು.

ಖಾಸಗಿ ಕಂಪನಿಗಳಲ್ಲಿನ ಆಡಳಿತಾತ್ಮಕ ಮತ್ತು ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಕಾಯ್ದೆ ರೂಪಿಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಈ ಅಂಕಿಅಂಶಗಳು ಬಹಿರಂಗ ಆಗಿವೆ.

‘ರಾಜ್ಯದಲ್ಲಿರುವ ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳ ಒಟ್ಟು ಸಂಖ್ಯೆ 1,659. ಉತ್ಪಾದನಾ ವಲಯದಲ್ಲಿ 87 ಬಹುರಾಷ್ಟ್ರೀಯ ಕಂಪನಿಗಳು ಮತ್ತು 46 ಸಾರ್ವಜನಿಕ ಉದ್ಯಮಗಳಿವೆ. ಈ ಕಂಪನಿಗಳಲ್ಲಿ ಒಟ್ಟು 8.06 ಲಕ್ಷ ಉದ್ಯೋಗಿಗಳಿದ್ದು, ಆ ಪೈಕಿ, ಶೇ 86ರಷ್ಟು (6.96 ಲಕ್ಷ) ಸ್ಥಳೀಯರು. ಹಿರಿಯ ಆಡಳಿತಾತ್ಮಕ (ಗ್ರೂಪ್‌ ‘ಎ’) ಉದ್ಯೋಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಗ್ರೂಪ್‌ ‘ಬಿ’ (ಮೇಲ್ವಿಚಾರಕ)‌, ‘ಸಿ’ (ಗುಮಾಸ್ತ) ಮತ್ತು ‘ಡಿ’ (ಕೆಳಹಂತದ ಹುದ್ದೆಗಳು) ವೃಂದಗಳಲ್ಲಿ ಕ್ರಮವಾಗಿ ಸ್ಥಳೀಯರ ಶೇಕಡಾವಾರು ಪ್ರಮಾಣ ಹೆಚ್ಚು ಇದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮಾಹಿತಿ ನೀಡಿದೆ.

ರಾಜ್ಯ ಸರ್ಕಾರದಿಂದ ಈಗಾಗಲೇ ಜಾರಿಯಲ್ಲಿರುವ ನೀತಿಯ ಪ್ರಕಾರ, ಸರ್ಕಾರದಿಂದ ನೆರವು ಪಡೆಯುವ ಯಾವುದೇ ಖಾಸಗಿ ಕಂಪನಿ ಗ್ರೂಪ್‌ ‘‍ಸಿ’ ಮತ್ತು ‘ಡಿ’ ವೃಂದದ ಉದ್ಯೋಗಗಳಲ್ಲಿ ಸ್ಥಳೀಯರನ್ನು ನೇಮಿಸಬೇಕು, ಆ ಮೂಲಕ, ಶೇ 70ರಷ್ಟು ಕನ್ನಡಿಗರಿಗೆ ಅವಕಾಶ ನೀಡಬೇಕು.

‘ಸರ್ಕಾರದಿಂದ ಭೂಮಿ, ನೀರು, ಸಬ್ಸಿಡಿ ಸೇರಿದಂತೆ ಯಾವುದೇ ನೆರವು ಪಡೆದುಕೊಳ್ಳದ ಕಂಪನಿಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರನ್ನು ನೇಮಿಸಿಕೊಳ್ಳುವಂತೆ ಕೈಗಾರಿಕೆಗಳಿಗೆ ನಾವು ಮನವಿ ಮಾಡುತ್ತೇವೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

‘ಕೌಶಲ ಹೊಂದಿದವರಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಅವಕಾಶ ಹೆಚ್ಚಿದೆ. ಫಾಕ್ಸ್‌ಕಾನ್‌ನಂಥ ಕಂಪನಿಗೆ ಯಾವ ಕೌಶಲ ಬೇಕು ಎಂದು ನಮಗೆ ತಿಳಿದಿದೆ. ನಾವು ನಮ್ಮ ಜನರನ್ನು ಕೌಶಲ ಹೊಂದಿದವರನ್ನಾಗಿ ಮಾಡಬೇಕಿದೆ’ ಎಂದೂ ಹೇಳಿದರು.

ಇತ್ತೀಚೆಗೆ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ, ಖಾಸಗಿ ಕೈಗಾರಿಕೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತ್ಮಾತಕ ಹುದ್ದೆಗಳಿಗೆ ಶೇ 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ 75ರಷ್ಟು ಮೀಸಲಾತಿ ನಿಗದಿಪಡಿಸಿದ್ದ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಈ ಮಸೂದೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಕೂಡಾ ನೀಡಲಾಗಿತ್ತು. ಆದರೆ, ಈ ಮಸೂದೆಗೆ ಖಾಸಗಿ ಕಂಪನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ಒತ್ತಡಕ್ಕೆ ಮಣಿದ ಸರ್ಕಾರವು ಈ ಮಸೂದೆಯನ್ನು ತಡೆಹಿಡಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT