ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2024ರಲ್ಲೇ 87ನೇ ಕನ್ನಡ ಸಾಹಿತ್ಯ ಸಮ್ಮೇಳನ: ಮಹೇಶ ಜೋಶಿ

Published : 4 ಡಿಸೆಂಬರ್ 2023, 19:47 IST
Last Updated : 4 ಡಿಸೆಂಬರ್ 2023, 19:47 IST
ಫಾಲೋ ಮಾಡಿ
Comments

ಬೆಂಗಳೂರು: ಬರದ ಕಾರಣ ಮುಂದೂಡಲ್ಪಟ್ಟಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2024ರಲ್ಲಿಯೇ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಿರ್ಧರಿಸಿದೆ. 

ರಾಜ್ಯದ ವಿವಿಧೆಡೆ ಉತ್ಸವ ಹಾಗೂ ಸಮಾರಂಭಗಳು ನಡೆಯುತ್ತಿರುವುದರಿಂದ ಮುಂದಿನ ವರ್ಷದ ಆರಂಭದಿಂದಲೇ ಅಗತ್ಯ ಸಿದ್ಧತೆಗೆ ಪರಿಷತ್ತು ಮುಂದಾಗಿದೆ. ಈ ಮೊದಲು ಮಂಡ್ಯದಲ್ಲಿ ಇದೇ ವರ್ಷ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಿದ್ದ ಪರಿಷತ್ತು, ₹ 25 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಮಳೆ ಕೊರತೆ ಕಾರಣ ರಾಜ್ಯ ಸರ್ಕಾರ ವಿವಿಧ ತಾಲ್ಲೂಕುಗಳನ್ನು ‘ಬರಪೀಡಿತ’ ಎಂದು ಘೋಷಿಸಿದ ಬಳಿಕ ಸಮ್ಮೇಳನವನ್ನು ಮುಂದೂಡುವ ನಿರ್ಧಾರವನ್ನು ಪರಿಷತ್ತು ಕೈಗೊಂಡಿತ್ತು. 

‘ಮಂಡ್ಯ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಬರವಿದೆ. ರೈತರು ಸಂಕಟದಲ್ಲಿರುವಾಗ ಸಂತಸ ಆಚರಿಸುವ ಸಮ್ಮೇಳನಕ್ಕೆ ಅರ್ಥವೇ ಇಲ್ಲ ಎಂದು ತಾತ್ಕಾಲಿಕವಾಗಿ ಸಮ್ಮೇಳನ ಮುಂದೂಡಿದ್ದೇವು. ರಾಜ್ಯ ಸರ್ಕಾರವು ದಸರಾ ಸೇರಿ ವಿವಿಧ ಕಾರ್ಯಕ್ರಮಗಳನ್ನು ಅದ್ದೂರಿಯಾಗಿಯೇ ನಡೆಸಿದೆ. ಆದ್ದರಿಂದ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಮಾತುಕತೆ ನಡೆಸಲಾಗಿದೆ. ಮುಖ್ಯಮಂತ್ರಿ ಅವರನ್ನೂ ಭೇಟಿ ಮಾಡಲಾಗುವುದು. ಈ ಸಮ್ಮೇಳನ 2024ರಲ್ಲಿ ನಡೆಯಲೇ ಬೇಕು’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಪರಿಷತ್ತಿಗೆ ಸರ್ಕಾರ ನೀಡುವ ವಾರ್ಷಿಕ ₹ 5 ಕೋಟಿಯಲ್ಲಿ ಪ್ರತಿ ವರ್ಷ ಡಿಸೆಂಬರ್ ಅಂತ್ಯಕ್ಕೆ ಎರಡರಿಂದ ಮೂರು ಕಂತು ಹಣ ಬರುತ್ತಿತ್ತು. ಈ ವರ್ಷ ಒಂದು ಕಂತಿನಲ್ಲಿ ₹ 1.66 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಿಂದ ಸಹಜವಾಗಿ ಕಾರ್ಯಚಟುವಟಿಕೆಗೆ ಹಿನ್ನಡೆಯಾಗಿದೆ. ಬಾಕಿ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಎರಡು ಹಾಗೂ ಮೂರನೇ ಕಂತಿನಲ್ಲಿ ಹಣ ಬಂದ ಬಳಿಕ ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನ ನಡೆಸಲು ಸೂಚಿಸಲಾಗಿದೆ. ಸ್ಥಳೀಯವಾಗಿ ಸಂಪನ್ಮೂಲ ಕ್ರೋಡೀಕರಿಸಿಯೂ ತಾಲ್ಲೂಕು ಸಮ್ಮೇಳನ ನಡೆಸಬಹುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT