ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆಸರೆ ಕಸಿದ ಕೊರೊನಾ: ಅಮ್ಮ ಇಲ್ಲದ ಮಗುವಿಗೆ ಈಗ ಅಪ್ಪನೂ ಇಲ್ಲ

ಕೊರೊನಾ ಸೋಂಕಿನಿಂದ ತಂದೆಯ ಸಾವು * ಅಜ್ಜಿಯೇ ಈಗ ಆಸರೆ
Last Updated 15 ಜೂನ್ 2021, 22:51 IST
ಅಕ್ಷರ ಗಾತ್ರ

ದಾವಣಗೆರೆ: ‘ಮೊಮ್ಮಗಳು ಹತ್ತು ತಿಂಗಳ ಕೂಸು ಆಗಿರುವಾಗ ತಾಯಿಯನ್ನು ಕಳೆದುಕೊಂಡಿದ್ದಳು. ಇದೀಗ ಕೊರೊನಾದಿಂದ ತಂದೆಯನ್ನೂ ಕಳೆದುಕೊಂಡಿದ್ದಾಳೆ. ಈಗ ನನಗೆ ಅವಳು, ಅವಳಿಗೆ ನಾನು ಆಸರೆ...’

ಹೊನ್ನಾಳಿ ತಾಲ್ಲೂಕು ದೊಡ್ಡೇರಿಹಳ್ಳಿಯ ಅಜ್ಜಿ ವೀರಮ್ಮ ಹೇಳಿದ ಮಾತಿದು.

ವೀರಮ್ಮ ಅವರ ಒಬ್ಬನೇ ಮಗ ನಿತ್ಯಾನಂದ ಬೆಂಗಳೂರಿನಲ್ಲಿ ಕಾರು ಚಾಲಕನಾಗಿದ್ದರು. 12 ವರ್ಷಗಳ ಹಿಂದೆ ರಾಧಾ ಎಂಬಾಕೆಯನ್ನು ಮದುವೆಯಾಗಿದ್ದರು. ಯುಕ್ತಿ ಎಂಬ ಹೆಣ್ಣು ಮಗಳು ಜನಿಸಿದ್ದಳು. ಬಳಿಕ ಕೆಲವೇ ತಿಂಗಳಲ್ಲಿ ರಾಧಾ ಮೃತಪಟ್ಟಿದ್ದರು.

ಅಜ್ಜಿ ವೀರಮ್ಮ ಮತ್ತು ತಂದೆ ನಿತ್ಯಾನಂದ ಅವರೇ 10 ತಿಂಗಳ ಮಗುವನ್ನು 11 ವರ್ಷ ಬೆಳೆಸಿದ್ದರು. ಮಗುವಿಗೆ ತಂದೆಯಾದರೂ ಇದ್ದಾರಲ್ಲ ಎಂಬ ನೆಮ್ಮದಿಯನ್ನು ಕೊರೊನಾ ಉಳಿಸಲಿಲ್ಲ. ಒಂದು ತಿಂಗಳ ಹಿಂದೆ ಕೊರೊನಾ ಸೋಂಕಿನಿಂದ ನಿತ್ಯಾನಂದ ಮೃತಪಟ್ಟಿದ್ದಾರೆ.

ದಿಕ್ಕು ತೋಚದ ಅಜ್ಜಿ ವೀರಮ್ಮ ಮೊಮ್ಮಗಳನ್ನು ಕರೆದುಕೊಂಡು ಹೊನ್ನಾಳಿ ತಾಲ್ಲೂಕು ದೊಡ್ಡೇರಿಯಲ್ಲಿ ಇರುವ ತಮ್ಮನ ಮನೆಗೆ ಬಂದಿದ್ದಾರೆ. ಇದೀಗ ಮೊಮ್ಮಗಳಿಗೆ ಅಜ್ಜಿ ಆಸರೆಯಾದರೆ, ಅಜ್ಜಿ ಮತ್ತು ಮೊಮ್ಮಗಳಿಬ್ಬರಿಗೂ ಅಜ್ಜಿಯ ತಮ್ಮ ಪ್ರಭು ದಂಪತಿ ಆಸರೆಯಾಗಿದ್ದಾರೆ.

‘ನನಗೆ ಇಬ್ಬರು ಹೆಣ್ಣುಮಕ್ಕಳು. ಅವರಿಬ್ಬರೂ ಮದುವೆಯಾಗಿದೆ. ಇಲ್ಲಿ ನಾವಿಬ್ಬರೇ ಗಂಡ–ಹೆಂಡತಿ ಇದ್ದೆವು. ಈಗ ಅಕ್ಕ ಮತ್ತು ಮೊಮ್ಮಗಳೂ ಜತೆಗೂಡಿದ್ದಾರೆ’ ಎಂದು ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಯಿಯ ಮುಖದ ನೆನಪು ಉಳಿಯುವ ಮೊದಲೇ ಆಕೆಯನ್ನು ಕಳೆದುಕೊಂಡಿದ್ದಾಳೆ. ಈಗ ತಂದೆಯನ್ನೂ ಕಳೆದುಕೊಂಡಿದ್ದಾಳೆ. ಇನ್ನೂ ಆ ನೋವನ್ನು ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವಳಾಗಿಲ್ಲ. ತಂದೆ–ತಾಯಿಯ ಪ್ರೀತಿಯನ್ನು ನಾವೇ ನೀಡಿ ಬೆಳೆಸುತ್ತಿದ್ದೇವೆ. ಯುಕ್ತಿಯ ವಿದ್ಯಾಭ್ಯಾಸಕ್ಕೆ ನವೋದಯ ಅಥವಾ ಒಳ್ಳೆಯ ವ್ಯವಸ್ಥೆಯನ್ನು ಸರ್ಕಾರ ಮಾಡಿದರೆ ಚೆನ್ನಾಗಿತ್ತು’ ಎಂದು ಪ್ರಭು ಹೇಳಿದರು.

‘ನಾನು ಬೆಂಗಳೂರಿನಲ್ಲಿದ್ದೆ. ಅಲ್ಲಿ ಐದನೇ ತರಗತಿವರೆಗೆ ಓದಿದ್ದೇನೆ. ಈಗ ಊರಿಗೆ ಬಂದಿದ್ದೇನೆ. ಯಾವ ಶಾಲೆಗೆ ಕಳುಹಿಸುತ್ತಾರೋ ಅಲ್ಲಿ ಹೋಗುತ್ತೇನೆ’ ಎಂದು ಯುಕ್ತಿ ಮುಗ್ಧವಾಗಿ ಹೇಳುತ್ತಾಳೆ.

ಅಜ್ಜಿ, ಮೊಮ್ಮಗಳ ಸಂಪರ್ಕಕ್ಕೆ: 7259714674

ಮಗುವಿನ ಪೋಷಣೆಗೆ ಎಲ್ಲ ಕ್ರಮ’

10ನೇ ತರಗತಿವರೆಗೆ ಉಚಿತ ಶಿಕ್ಷಣ ಇದೆ. ಮಕ್ಕಳ ಕಲ್ಯಾಣ ಸಮಿತಿಯು ಪರಿಶೀಲಿಸಿ ಅಜ್ಜಿ ವೀರಮ್ಮ ಅವರನ್ನೇ ಅರ್ಹ ವ್ಯಕ್ತಿ ಎಂದು ಗುರುತಿಸಿ ಅವರ ಸುಪರ್ದಿಯಲ್ಲೇ ಮಗುವನ್ನು ಬಿಡಲಾಗಿದೆ. ಇಲಾಖೆಯಿಂದ ಪ್ರಾಯೋಜಕತ್ವ ಯೋಜನೆಯಡಿ ಮೂರು ವರ್ಷ ಪ್ರತಿ ತಿಂಗಳು ₹ 1 ಸಾವಿರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಬಾಲ ಸೇವಾ ಬಾಲ ಸ್ವರಾಜ್‌ ಯೋಜನೆ ಅಳವಡಿಸಲಾಗಿದೆ. ಮುಂದಿನ ಆದೇಶ ಬಂದ ಮೇಲೆ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಅಜ್ಜಿಗೆ ನೋಡಿಕೊಳ್ಳಲು ಸಾಧ್ಯವಿಲ್ಲ ಎಂಬ ಸನ್ನಿವೇಶದಲ್ಲಿ ಬಾಲಕಿಗೆ ಸೂಕ್ತ ರಕ್ಷಣೆ ಮತ್ತು ಪೋಷಣೆ ನೀಡಲು ಇಲಾಖೆ ಬದ್ಧವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ತಿಳಿಸಿದ್ದಾರೆ.

ಮಗು, ಅಜ್ಜಿ ಜತೆ ಮಾತನಾಡಿದ ಸಚಿವೆ

ಕೊರೊನಾದಿಂದ ಹೆತ್ತವರನ್ನು ಕಳೆದುಕೊಂಡ ಮಗುವಿನ ಜತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರೇ ಕರೆ ಮಾಡಿ ಮಾತನಾಡಿದ್ದಾರೆ. ಮಗು ಮತ್ತು ಅಜ್ಜಿಗೆ ಸಾಂತ್ವನ ಹೇಳಿದ್ದಾರೆ. ಮಗುವಿನ ಭವಿಷ್ಯಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಇಲಾಖೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT