ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸ ಪ್ರಸಾದ್ ನುಡಿನಮನ:ಎಳ್ಳಷ್ಟೂ ಹೊಂದಾಣಿಕೆ ಮಾಡಿಕೊಳ್ಳದ ಜನಾನುರಾಗಿ ನಾಯಕ

ಪಿ.ಜಿ.ಆರ್‌. ಸಿಂಧ್ಯ
Published 30 ಏಪ್ರಿಲ್ 2024, 0:48 IST
Last Updated 30 ಏಪ್ರಿಲ್ 2024, 0:48 IST
ಅಕ್ಷರ ಗಾತ್ರ

ವೈಯಕ್ತಿಕವಾಗಿ, ವೈಚಾರಿಕವಾಗಿ ಅವಮಾನವಾದ ಸ್ಥಳದಲ್ಲಿ ಶ್ರೀನಿವಾಸ ಪ್ರಸಾದ್‌ ಒಂದೇ ಒಂದು ಕ್ಷಣವೂ ನಿಲ್ಲುತ್ತಿರಲಿಲ್ಲ. ಆಗ ಪ್ರಧಾನಿಯಾಗಿದ್ದ ದೇವೇಗೌಡರೊಂದಿಗಿನ ಸಂಘರ್ಷವೂ ತಮ್ಮ ಸಮುದಾಯದವರಿಗೆ ಟಿಕೆಟ್‌ ನೀಡಿಲ್ಲ ಎಂಬುದಕ್ಕೇ ಆಗಿತ್ತು. ಹಿಂದಿನಿಂದಲೂ ದೇವೇಗೌಡರ ಬಗ್ಗೆ ವೈಚಾರಿಕ ವಿರೋಧ ಹೊಂದಿದ್ದ ಪ್ರಸಾದ್‌, ಕೊನೆಯವರೆಗೂ ಅವರತ್ತ ತಿರುಗಿಯೂ ನೋಡಲಿಲ್ಲ. ಗೌರವಕ್ಕೆ ಚ್ಯುತಿ ಬಂದಾಗ ಸಿದ್ದರಾಮಯ್ಯ ಅವರಿಂದಲೂ ಪ್ರಸಾದ್‌ ದೂರವಾದರು...

1999ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ, ಆಗ ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಎಚ್‌.ಡಿ. ದೇವೇಗೌಡ ಅವರೊಂದಿಗೆ, ಸಂಸದೀಯ ಮಂಡಳಿ ಸದಸ್ಯರಾಗಿದ್ದ ಪ್ರಸಾದ್‌ ಅವರಿಗೆ ಟಿಕೆಟ್‌ ವಿಚಾರದಲ್ಲಿ ಸಂಘರ್ಷವಾಯಿತು. ಪೆರಿಕಲ್‌ ಮಲ್ಲಪ್ಪ ಸೇರಿದಂತೆ ಮೂರು ಜನರಿಗೆ ಟಿಕೆಟ್‌ ನೀಡಬೇಕು ಎಂದು ಪ್ರಸಾದ್‌ ಹಟ ಹಿಡಿದರು. ದೇವೇಗೌಡರು ಟಿಕೆಟ್‌ ನೀಡಲು ಸಾಧ್ಯವೇ ಇಲ್ಲ ಎಂದಾಗ, ಅವರ ವಿರುದ್ಧ ಕಟುವಾಗಿ ಮಾತನಾಡಿದ್ದರು. ಸಮುದಾಯದ ಬಗ್ಗೆ ಧ್ವನಿ ಎತ್ತಿದ್ದರು. ಆ ಸನ್ನಿವೇಶವನ್ನು ಇಂದಿಗೂ ನನಗೆ ಮರೆಯಲು ಸಾಧ್ಯವಿಲ್ಲ. ಅವರ ಅನುಯಾಯಿಗಳನ್ನು ಬೆಳೆಸಲು ಪ್ರಸಾದ್‌ ಅಂದು, ಎಂದೂ ಹೋರಾಡಿದ್ದರು. 

ಪ್ರಸಾದ್‌ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ, ಪ್ರೀತಿಯ ರಾಜಕಾರಣವನ್ನೇ ಮಾಡುತ್ತಿದ್ದರು. ರಾಜಕೀಯವಾಗಿ ಅವರ ವಿಚಾರಗಳನ್ನು ಒಪ್ಪದವರು, ಅವಕಾಶ ಕೊಡದವರನ್ನೂ ಅವರು ದ್ವೇಷಿಸುತ್ತಿರಲಿಲ್ಲ. ಪಕ್ಷದ ಆಧಾರದಲ್ಲಿ ಅವರು ಯಾರನ್ನೂ ದ್ವೇಷ ಮಾಡುತ್ತಿರಲಿಲ್ಲ. ಮುಂದೆ ಅಲ್ಲ, ಹಿಂದೆಯೂ ಯಾವುದೇ ಸಮುದಾಯವನ್ನು ಅವರು ಟೀಕೆ ಮಾಡುತ್ತಿರಲಿಲ್ಲ.

ಸಿದ್ದರಾಮಯ್ಯ ಅವರ ಸಚಿವರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದಾಗಲೂ ಅವರ ಗೌರವಕ್ಕೆ ಚ್ಯುತಿ ಬಂತು ಎಂದೇ ಅವರಿಂದ ದೂರವಾದರೇ ಹೊರತು ದ್ವೇಷದಿಂದಲ್ಲ. ಕೊನೆಗೆ, ಸಿದ್ದರಾಮಯ್ಯ ಅವರೇ ದೊಡ್ಡ ಮನಸ್ಸು ಮಾಡಿ ಹಳೆಯ ಸ್ನೇಹವನ್ನೆಲ್ಲ ಕುದುರಿಸಿಕೊಂಡಿದ್ದು ಒಳ್ಳೆಯದೇ ಆಯಿತು. ಪ್ರಸಾದ್ ಆತ್ಮಕ್ಕೆ ಸ್ವಲ್ಪ ಶಾಂತಿ ಸಿಕ್ಕಿತು ಎನಿಸುತ್ತದೆ.

ಬಾಬಾಸಾಹೇಬ್‌ ಬಿ.ಆರ್‌. ಅಂಬೇಡ್ಕರ್‌ ಅವರ ವಿಚಾರಗಳ ಕುರಿತು ಬರೆಯುವುದು, ಭಾಷಣ ಮಾಡುವುದು ಒಂದು ಭಾಗ. ಆದರೆ, ಆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಂತಹ ವ್ಯಕ್ತಿ ಪ್ರಸಾದ್‌. ಆ ವಿಚಾರದಲ್ಲಿ ಅವರು ಕೊನೆಯ ದಿನಗಳವರೆಗೂ ಎಳ್ಳಷ್ಟೂ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ.

1970–80ರ ದಶಕದಲ್ಲಿ ಬಹಳ ಜನ ವಿದ್ಯಾರ್ಥಿ ಮುಖಂಡರು ಸಾರ್ವಜನಿಕ ಜೀವನಕ್ಕೆ ಪ್ರವೇಶ ಮಾಡಿದರು. ಅದರಲ್ಲಿ ಬಹಳ ಪ್ರಮುಖವಾಗಿ ಯಾವುದೇ ಕಳಂಕ ಇಲ್ಲದಂತೆ, ಜನನಾಯಕರಾಗಿ ಬೆಳೆದ ನೇತಾರರಲ್ಲಿ ಶ್ರೀನಿವಾಸ ಪ್ರಸಾದ್‌ ಅವರು ಮೊದಲಿಗರು. ನಾನು ಅವರನ್ನು ಪ್ರಥಮವಾಗಿ ಭೇಟಿ ಮಾಡಿದ್ದು 1972–73ರಲ್ಲಿ ಮೈಸೂರಿನ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ. ಪ್ರಸಾದ್‌ ಡಿಎಂಕೆ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ನಾನು ಆಗ ಭಾರತೀಯ ಜನಸಂಘದಲ್ಲಿದ್ದೆ. ನಾನು ಆಗತಾನೇ ಎಂಜಿನಿಯರಿಂಗ್‌ ಮುಗಿಸಿ ಬಂದಿದ್ದೆ. ಪ್ರಸಾದ್‌ ಡಿಎಂಕೆ ಪಾರ್ಟಿಯಿಂದ ನಿಂತಿದ್ದು ನಮಗೆಲ್ಲ ಆಶ್ಚರ್ಯ ತಂದಿತ್ತು. ಆದರೆ, ಅವರು ಗಣನೀಯವಾಗಿ ಮತಗಳನ್ನು ಪಡೆದರೂ ಸೋತರು. ವೆಂಕಟಲಿಂಗಯ್ಯ ಅವರು ಸಂಸ್ಥಾ ಕಾಂಗ್ರೆಸ್‌ನಿಂದ ಆ ಉಪ ಚುನಾವಣೆಯಲ್ಲಿ ಗೆದ್ದರು.

1974–75ರಲ್ಲಿ ದೇಶದಲ್ಲಿ ಜಯಪ್ರಕಾಶ್‌ ನಾರಾಯಣ್‌ ಅವರು ಜನಾಂದೋಲನ ಪ್ರಾರಂಭವಾಯಿತು. ಮೈಸೂರಿನಲ್ಲಿ ಪ. ಮಲ್ಲೇಶ್‌, ಪ್ರೊ. ನಂಜುಂಡಸ್ವಾಮಿ, ರಾಜಶೇಖರ ಕೋಟಿ ಅವರೆಲ್ಲ ಆಂದೋಲನದಲ್ಲಿ ಭಾಗವಹಿಸಿದ್ದರು. ಆ ಯುವಕರ ಪೈಕಿ ಶ್ರೀನಿವಾಸ ಪ್ರಸಾದ್‌ ಅವರು ಬಹಳ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರು ಒಂದು ದಿನದ ಮಟ್ಟಿಗೆ ಬಂಧನಕ್ಕೂ ಒಳಗಾಗಿದ್ದರು. ಜೆಪಿ ಹಾಗೂ ಆರ್‌ಎಸ್‌ಎಸ್‌ ಪರವಾಗಿದ್ದ ಜನರು ಭೂಗತವಾಗಿ ಪ್ರಕಟ ಮಾಡುತ್ತಿದ್ದ ‘ಕಹಳೆ’ ಎಂಬ ಪತ್ರಿಕೆಯನ್ನು ಪ್ರಸಾದ್‌ ಹಂಚುತ್ತಿದ್ದರು. ಮೈಸೂರಿನಲ್ಲಿದ್ದ ಆರ್‌ಎಸ್‌ಎಸ್‌ ಮುಖಂಡ ವೆಂಕಟರಾಮ್‌ ಅವರ ಪ್ರಭಾವ ಪ್ರಸಾದ್‌ ಅವರ ಮೇಲಿತ್ತು. ಪ್ರಸಾದ್‌ ಅವರು ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಒಪ್ಪುತ್ತಿರಲಿಲ್ಲ. ಕೊನೆಯವರೆಗೂ ಒಪ್ಪಲಿಲ್ಲ. ಆದರೆ, ಮುಖಂಡರ ಜೊತೆ ಸಂಪರ್ಕವಿತ್ತು. ಹೀಗಾಗಿಯೇ ಅವರು ಜೆಪಿ ಜನಾಂದೋಲನದಲ್ಲಿ ಭಾಗವಹಿಸಿದ್ದರು. ಬಸವಲಿಂಗಪ್ಪ ಅವರ ದೊಡ್ಡ ಅಭಿಮಾನಿ ಪ್ರಸಾದ್‌. ಬೂಸಾ ಚಳವಳಿ ಸಂದರ್ಭದಲ್ಲಿ ಬಸವಲಿಂಗಪ್ಪ ಅವರ ಪರವಾಗಿ ಮೊದಲನೆಯವರಾಗಿ ನಿಂತದ್ದೇ ಅವರು.

ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ ಅವರ ಸಂಪರ್ಕದಲ್ಲಿದ್ದ ಪ್ರಸಾದ್‌ ಅವರು, ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದರು. ನಂತರದ ದಿನಗಳಲ್ಲಿ ಅವರು ಜನತಾ ಪಕ್ಷಕ್ಕೆ ಬಂದರು. 1977ರಿಂದ 1978ರವರಲ್ಲಿ ಯುವ ಜನತಾ ಪಕ್ಷದ ಉಪಾಧ್ಯಕ್ಷರಾಗಿದ್ದ ಪ್ರಸಾದ್‌ ಅವರು, ರಾಜ್ಯದಾದ್ಯಂತ ಪ್ರವಾಸ ಮಾಡಿದ್ದರು. ಯುವ ಜನತಾ ಪಕ್ಷದ ಅಧ್ಯಕ್ಷನಾಗಿದ್ದ ನಾನು ಅವರೊಂದಿಗೆ ಇಡೀ ರಾಜ್ಯ ಪ್ರವಾಸ ಮಾಡಿದ್ದೆ. 1978ರಲ್ಲಿ ಮೈಸೂರಿನಲ್ಲಿ ವಿಧಾನಸಭೆಯ ಮೀಸಲು ಕ್ಷೇತ್ರದಲ್ಲಿ ಪ್ರಸಾದ್‌ ಸ್ಪರ್ಧಿಸಿ, ಸೋತರು.

1980ರಲ್ಲಿ ಲೋಕಸಭೆ ವಿಸರ್ಜನೆಯಾಯಿತು. ಜನತಾ ಪಕ್ಷದ ಮುಖಂಡರಲ್ಲಿ ಭಿನ್ನಾಭಿಪ್ರಾಯವಿತ್ತು. ಆರ್‌ಎಸ್‌ಎಸ್‌ ಪರವಾಗಿರುವವರು ಒಂದು ಕಡೆ ಇರಲಿ, ಬೇರೆಯವರು ಇನ್ನೊಂದು ಕಡೆಯಾಗಲಿ ಎಂದಾಯಿತು. ಆಗ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಥಾಪನೆಯಾಯಿತು. ಆ ಸಂದರ್ಭದಲ್ಲಿ ಪ್ರಸಾದ್‌ ಅವರು ವೀರೇಂದ್ರ ಪಾಟೀಲ ಅವರೊಂದಿಗೆ ಕಾಂಗ್ರೆಸ್‌ ಸೇರಿದರು. 1980ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಅವರು ಗೆದ್ದರು. ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾಗ ಇವತ್ತಿನ ಉಪ ಮುಖ್ಯಮಂತ್ರಿಯವರಿಂದ ಹಿಡಿದು, ಎಚ್‌.ಎಂ. ರೇವಣ್ಣ, ರಾಮಲಿಂಗಾರೆಡ್ಡಿ ಅವರನ್ನೆಲ್ಲ ಗುರುತಿಸಿ, ಬೆಳೆಸಿದರು.

ಪ್ರಸಾದ್‌ ಅವರ ಪ್ರತಿಭೆಯನ್ನು ಸರಿಯಾಗಿ ಗುರುತಿಸಿ ಪ್ರೋತ್ಸಾಹ ಸಿಕ್ಕಿದ್ದರೆ, ರಾಷ್ಟ್ರಮಟ್ಟದಲ್ಲಿ ಅವರು ಅತ್ಯಂತ ಪ್ರಭಾವಿ ನಾಯಕರಾಗಿರುತ್ತಿದ್ದರು. ಅವರಿಗೆ ಸಿಗಬೇಕಾದ ಗೌರವ– ಸ್ಥಾನ ಸಿಗಲಿಲ್ಲ. ಅವರಿಗೆ ತೊಂದರೆ ಕೊಟ್ಟವರೇ ಜಾಸ್ತಿ. ಅಧಿಕಾರ ಕೊಡದಿರುವುದು, ಟಿಕೆಟ್‌ ಕೊಡದಿರುವುದು... ಹೀಗೆ ಸಹಾಯ ಮಾಡದವರೇ ಹೆಚ್ಚು. 10–20 ವರ್ಷ ಅವರು ದುಡಿದ ಮೇಲೆ ಸಮತಾ ಪಕ್ಷದಿಂದ ಎನ್‌ಡಿಎ ನೇತೃತ್ವದ ವಾಜಪೇಯಿ ಸರ್ಕಾರದಲ್ಲಿ ಅವರು ಕೇಂದ್ರದ ಸಚಿವರಾದರು. 

ಒಂದು ಗ್ಯಾಸ್‌ ಏಜೆನ್ಸಿ ಹಾಗೂ ಒಂದು ಮನೆ ಕಟ್ಟಿಸಿರುವುದು ಬಿಟ್ಟರೆ 53 ವರ್ಷದ ಸಾರ್ವಜನಿಕ ಬದುಕಿನಲ್ಲಿ ಆರ್ಥಿಕವಾಗಿ ಪ್ರಸಾದ್‌ ಏನೂ ಗಳಿಸಲಿಲ್ಲ. ಚುನಾವಣೆ ಹಾಗೂ ಕಾರ್ಯಕ್ರಮಗಳಿಗೆ ಅವರು ಬೇರೆಯವರ ಮುಂದೆ ಕೈಯೊಡ್ಡಿದವರಲ್ಲ. ರಾಜ್ಯದಲ್ಲಿ ಅವರು ಕಂದಾಯ ಸಚಿವರಾಗಿದ್ದಾಗ ಕೈಗೊಂಡ ಹಲವು ಮಹತ್ತರ ತೀರ್ಮಾನಗಳಿಂದ ಹಲವರಿಗೆ ಅನುಕೂಲವಾಯಿತು. ಒಬ್ಬರಿಂದಲೂ ಒಂದು ರೂಪಾಯಿ ತೆಗೆದುಕೊಳ್ಳಲಿಲ್ಲ. ಅವರ ಮೇಲೆ ಭ್ರಷ್ಟಾಚಾರದ ಆರೋಪ ಯಾರೂ ಮಾಡಲಾಗುವುದಿಲ್ಲ. ಸಮಾನತೆಗೆ ಅವರು ಮಾಡಿದ ಹೋರಾಟಗಳನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಕೆಲವರು ದುರಂಹಕಾರಿ ಎಂದು ಹೇಳುತ್ತಾರೆ ಅಷ್ಟೇ.

ರಾಜಶೇಖರಮೂರ್ತಿ ಅವರ ಬಗ್ಗೆ ವೈಚಾರಿಕವಾಗಿ ಬಹಳ ಭಿನ್ನಾಭಿಪ್ರಾಯವಿತ್ತು. ತಮ್ಮ ಸೋಲಿಗೆ ಮೂರ್ತಿ ಕಾರಣ ಎಂಬ ವಿಷಯವಾಗಿ ವೈಯಕ್ತಿಕವಾಗಿಯೂ ಸಿಟ್ಟು ಇತ್ತು. ಆದರೆ, ಅದನ್ನೇ ಸಾಧಿಸಲು ಹೋಗಲಿಲ್ಲ. ಪ್ರಸಾದ್‌ ಅವರು ಲಿಂಗಾಯತ ವಿರೋಧಿ ಎಂಬ ತಪ್ಪು ಮಾತಿದೆ. ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ಹೇಳುವ ಮಾತಿದು. ಪ್ರಸಾದ್‌ ತಮ್ಮ ಅಂತಿಮ ದಿನಗಳವರೆಗೂ ಸುತ್ತೂರು ಮಠದ ಜೊತೆಗೆ ಬಹಳ ನಿಕಟ ಸಂಪರ್ಕ ಹೊಂದಿದ್ದರು. ಬಸವಣ್ಣನವರ ವಿಚಾರವನ್ನು ನಂಬಿದ್ದರು. ಬಸವಣ್ಣ, ಬುದ್ಧ, ಅಂಬೇಡ್ಕರ್‌ ವಿಚಾರದಲ್ಲಿ ವ್ಯತ್ಯಾಸಗಳಿಲ್ಲ ಎನ್ನುತ್ತಿದ್ದರು.

ಮೈಸೂರಿನಲ್ಲಿ ಬ್ರಾಹ್ಮಣರಿರಲಿ, ಲಿಂಗಾಯಿತರಿರಲಿ ಅಥವಾ ಇನ್ನಿತರ ಮುಂದುವರಿದ ಸಮಾಜದವರಲ್ಲೂ ನಿಷ್ಠಾವಂತ, ಪ್ರಾಮಾಣಿಕ, ನೇರವಾದಿಯಾಗಿದ್ದ ಪ್ರಸಾದ್‌ ಬಗ್ಗೆ ಗೌರವವಿತ್ತು. ಬಂಡಾಯ ಹೋರಾಟಗಾರ, ಅಂಬೇಡ್ಕರ್‌ ವಿಚಾರಗಳನ್ನು ಮುಂದೆ ತೆಗೆದುಕೊಂಡು ಹೋಗುತ್ತಿದ್ದ ನಿಷ್ಠಾವಂತ ಹೋರಾಟಗಾರ ಪ್ರಸಾದ್‌ ಅವರನ್ನು ನಾವು ಕಳೆದುಕೊಂಡಿದ್ದೇವೆ. ಪ್ರಸಾದ್ ನಿರ್ಗಮನದಿಂದ ಹೋರಾಟದ ಹಾದಿಯಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದೆ.

ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಸಿಪಾಯಿ ಶ್ರೀನಿವಾಸ ಪ್ರಸಾದ್, ಜನನಾಯಕರಾಗಿದ್ದರು. ಅವರು ಹಲವು ದಶಕಗಳ ಸಾಮಾಜಿಕ ಜೀವನದ ಪ್ರತಿ ಕ್ಷಣವನ್ನು ಬಡವರು, ಶೋಷಿತರು, ವಂಚಿತರಿಗಾಗಿ ಮೀಸಲಿಟ್ಟರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಉತ್ತಮ ಕೆಲಸ ಮಾಡಿದರು. ದಲಿತ ವರ್ಗದವರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಸದಾ ಯತ್ನಿಸಿದರು.
ನರೇಂದ್ರ ಮೋದಿ, ಪ್ರಧಾನಿ

ಅನಭಿಷಿಕ್ತ ದೊರೆ

1975ರಿಂದ ಪ್ರಸಾದ್‌ ಅವರು ಮೈಸೂರಿನಲ್ಲಿ ಒಂದು ಗುಂಪು ಇಟ್ಟು ಕೊಂಡಿದ್ದರು. ಮೈಸೂರಿನ ಅಶೋಕಪುರಂನಲ್ಲಿ ಶ್ರೀನಿವಾಸ ಪ್ರಸಾದ್‌ ಅನಭಿಷಿಕ್ತ ದೊರೆ ಇದ್ದಂತೆ. ಅಲ್ಲಿನ ಜನ ಇವರನ್ನು ಬಹಳ ಪ್ರೀತಿ ಮಾಡುತ್ತಿದ್ದರು. 1978ರಲ್ಲಿ ಪ್ರಸಾದ್‌ ಮದುವೆಗೆ ದೇವೇಗೌಡರ ಜೊತೆ ನಾನು ಮೈಸೂರಿನ ಅಶೋಕಪುರಂಗೆ ಹೋದಾಗ, ಸಾವಿರಾರು ಜನ ಸೇರಿದ್ದರು. ಅದು ಅವರು ಚುನಾವಣೆಯಲ್ಲಿ ಸೋತ ಸಂದರ್ಭವಾದರೂ ಅಷ್ಟು ಜನ ಸೇರಿದ್ದು, ಅವರು ಜನಾನುರಾಗಿ ನಾಯಕ ಎಂಬುದಕ್ಕೆ ಸಾಕ್ಷಿಯಾಗಿತ್ತು. 53 ವರ್ಷ ರಾಜಕೀಯ ಕ್ಷೇತ್ರದಲ್ಲಿದ್ದು ಅಪಾರ ಅಭಿಮಾನಿ ಬಳಗವನ್ನು ಹೊಂದಿರುವುದು ಅಪರೂಪ. ರಾಜಕಾರಣಿಗಳ ಪೈಕಿ ಪ್ರಸಾದ್‌ ಅವರಿಗೆ ಮಾತ್ರ ಇಂತಹ ಅಭಿಮಾನ ಸಿಕ್ಕಿದೆ. 

ಬಿರಿಯಾನಿ ಎಂದರೆ ಪ್ರೀತಿ

ನಾನು, ಮೋಹನ್‌ ಕೊಂಡಜ್ಜಿ, ದಿವಾಕರ್‌, ಜೀರಿಗೆ ಲೋಕೇಶ್‌ ಸೇರಿದಂತೆ ದೊಡ್ಡ ಬಳಗವೇ ಇದೆ. ನಮ್ಮಲ್ಲಿ ಯಾರೇ ದೆಹಲಿಗೆ ಹೋದರೆ ಅವರ ಮನೆಗೆ ಹೋಗಲೇಬೇಕಿತ್ತು. ಇಲ್ಲದಿದ್ದರೆ ಬೇಸರಿಸಿಕೊಳ್ಳುತ್ತಿದ್ದರು. ನನಗೆ ಕೋಳಿ ಮಾಂಸದ ಖಾದ್ಯ ಎಂದರೆ ಇಷ್ಟ ಎಂಬುದು ಅವರಿಗೆ ಗೊತ್ತಿತ್ತು. ಅವರು ಇಲ್ಲದಿದ್ದರೂ ಸಿಂಧ್ಯ ಬಂದರೆ ಕೋಳಿ ಖಾದ್ಯ ಮಾಡಲೇಬೇಕು ಎಂದು ತಾಕೀತು ಮಾಡಿದ್ದರು.

ಕಾಟನ್‌ಪೇಟೆಯಲ್ಲಿ ಗೋವಿಂದರಾವ್‌ ಅವರ ಹೋಟೆಲ್‌ನ ಮಟನ್‌ ಬಿರಿಯಾನಿ ಎಂದರೆ ಅತ್ಯಂತ ಪ್ರಿಯ. ಕೆಎಸ್‌ಆರ್‌ಟಿಸಿಯ ಅಧ್ಯಕ್ಷರಾಗಿದ್ದ ಟಿ. ಪ್ರಭಾಕರ್‌ ಹಾಗೂ ನಾನು, ಅಲ್ಲಿಂದ ಬಿರಿಯಾನಿ ತಂದರೆ, ಅವರಿಗೆ ಸ್ವರ್ಗ ಸಿಕ್ಕಂತೆ. ಶಾಸಕರ ಭವನದಲ್ಲಿ ಸಂತೋಷದಿಂದ ತಿನ್ನುತ್ತಿದ್ದರು. 

ನಾವೆಲ್ಲ ಪ್ರವಾಸ ಅಥವಾ ಎಲ್ಲಿಗಾದರೂ ಹೋದಾಗ ದೇವಸ್ಥಾನದ ಒಳಗೆ ಪ್ರಸಾದ್‌ ಬರುತ್ತಿರಲಿಲ್ಲ. ಅದನ್ನು ಎಲ್ಲಿಯೂ ತೋರಿಸಿಕೊಳ್ಳುತ್ತಲೂ ಇರಲಿಲ್ಲ.

ಜನನಾಯಕ ಸವೆಸಿದ ಹಾದಿ

• ಜನನ: ಆ.6, 1947

• 1974: ಕೃಷ್ಣರಾಜ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧೆ ಮೂಲಕ ಚುನಾವಣಾ ರಾಜಕಾರಣ ಪ್ರವೇಶ.

• 1977-78– ಯುವ ಜನತಾ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ

• 1980- ಮೊದಲ ಬಾರಿ ಲೋಕಸಭೆಗೆ ಆಯ್ಕೆ

• 1984- ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ

• 1984- 2ನೇ ಬಾರಿಗೆ ಲೋಕಸಭೆಗೆ ಆಯ್ಕೆ. ಹಕ್ಕುಬಾಧ್ಯತಾ ಸಮಿತಿ, ಪೆಟ್ರೋಲಿಯಂ ಮತ್ತು ರಾಸಾಯನಿಕ ಸಚಿವಾಲಯ ಸಮಾಲೋಚನಾ ಸಮಿತಿ ಸದಸ್ಯ

• 1986- ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

• 1989- 3ನೇ ಬಾರಿಗೆ ಲೋಕಸಭೆಗೆ ಆಯ್ಕೆ, ಸಾರ್ವಜನಿಕ ಉದ್ದಿಮೆ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ, ಪೆಟ್ರೋಲಿಯಂ ಮತ್ತು ರಾಸಾಯನಿಕ ಸಮಾಲೋಚನಾ ಸಮಿತಿ ಸದಸ್ಯ

• 1991- 4ನೇ ಬಾರಿಗೆ ಲೋಕಸಭೆಗೆ ಆಯ್ಕೆ. ಅಂದಾಜು ಸಮಿತಿ, ಪ.ಜಾತಿ ಮತ್ತು ಬುಡಕಟ್ಟುಗಳ ಸಮಿತಿ, ಉಕ್ಕು ಮತ್ತು ಗಣಿ ಸಚಿವಾಲಯ ಸಮಾಲೋಚನಾ ಸಮಿತಿ ಸದಸ್ಯ

• 1999- 5ನೇ ಬಾರಿಗೆ ಲೋಕಸಭೆಗೆ ಜೆಡಿಯು ಟಿಕೆಟ್ ಮೇಲೆ ಆಯ್ಕೆ. ಅಟಲ್‌ ಬಿಹಾರಿ ವಾಜಪೇಯಿ ಸಂಪುಟದಲ್ಲಿ ರಾಜ್ಯ ಸಚಿವ

• 2008, 2013- ಸತತ ಎರಡು ಬಾರಿ ನಂಜನಗೂಡಿನಿಂದ ವಿಧಾನಸಭೆಗೆ ಆಯ್ಕೆ. 2ನೇ ಬಾರಿಗೆ ಗೆದ್ದಾಗ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ

• 2017- ಸಂಪುಟದಿಂದ ಕೈಬಿಟ್ಟಿದ್ದನ್ನು ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ, ಬಿಜೆಪಿ ಸೇರ್ಪಡೆ, ನಂಜನಗೂಡು ಉಪ ಚುನಾವಣೆಯಲ್ಲಿ ಸೋಲು

• 2019- 6ನೇ ಬಾರಿಗೆ ಲೋಕಸಭೆಗೆ ಬಿಜೆಪಿ ಟಿಕೆಟ್ ಮೇಲೆ ಆಯ್ಕೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸ್ಥಾಯಿ ಸಮಿತಿ, ಅರ್ಜಿಗಳ ಸಮಿತಿ ಸದಸ್ಯ

ವಿ. ಶ್ರೀನಿವಾಸ ಪ್ರಸಾದ್ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ (ಸಂಗ್ರಹ ಚಿತ್ರ)

ವಿ. ಶ್ರೀನಿವಾಸ ಪ್ರಸಾದ್ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ (ಸಂಗ್ರಹ ಚಿತ್ರ)

(ನಿರೂಪಣೆ: ಆರ್.ಮಂಜುನಾಥ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT