ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರೋದ್‌ ಮಾಂತ್ರಿಕನಿಗೆ ಭಾವಪೂರ್ಣ ವಿದಾಯ: ಧಾರ್ಮಿಕ ವಿಧಾನವಿಲ್ಲದೆ ಅಂತ್ಯಕ್ರಿಯೆ

Published 12 ಜೂನ್ 2024, 20:14 IST
Last Updated 12 ಜೂನ್ 2024, 20:14 IST
ಅಕ್ಷರ ಗಾತ್ರ

ಮೈಸೂರು: ಅನಾರೋಗ್ಯದಿಂದ ಮಂಗಳವಾರ ನಿಧನರಾದ ಖ್ಯಾತ ಸರೋದ್‌ ವಾದಕ ಪಂಡಿತ್ ತಾರಾನಾಥ ಅವರ ಅಂತ್ಯಕ್ರಿಯೆಯನ್ನು ಬುಧವಾರ ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯ ಚಿತಾಗಾರದಲ್ಲಿ ಶಿಷ್ಯಂದಿರು, ಸಂಗೀತ– ಸಾಹಿತ್ಯ ಅಭಿಮಾನಿಗಳ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.

ಪತ್ನಿ ಮಾಧವಿ ಹಾಗೂ ಪುತ್ರ ಚೇತನ್ ಅನಾರೋಗ್ಯದ ಕಾರಣ ಅಮೆರಿಕದಿಂದ ಬರಲಿಲ್ಲ. ವಿಡಿಯೊ ಕಾಲ್‌ ಮೂಲಕವೇ ಅಂತ್ಯಕ್ರಿಯೆಯನ್ನು ನೋಡಿದರು. ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಪೊಲೀಸ್ ಬ್ಯಾಂಡ್‌ ರಾಷ್ಟ್ರಗೀತೆ ನುಡಿಸಿತು.

ಕೃಷ್ಣಾ ಮನವಳ್ಳಿ, ಅರಣ್ಯ ಕುಮಾರ್‌, ಸೋಹನ್‌ ನೀಲಕಂಠ, ಸಚಿನ್ ಹಂಪೆ ಸೇರಿದಂತೆ ಸಂಗೀತ– ಸಾಹಿತ್ಯ ಕ್ಷೇತ್ರದ ಶಿಷ್ಯಂದಿರು ಅಂತಿಮ ನಮನ ಸಲ್ಲಿಸಿದರು. ಧಾರ್ಮಿಕ ವಿಧಿವಿಧಾನವಿಲ್ಲದೇ ತಾರಾನಾಥರ ಇಷ್ಟದಂತೆಯೇ ಅಂತ್ಯಕ್ರಿಯೆ ನಡೆಯಿತು. 

ಅದಕ್ಕೂ ಮುನ್ನ ಕುವೆಂಪುನಗರದ ನಿವಾಸದಲ್ಲಿ ವಿವಿಧೆಡೆಯಿಂದ ಬಂದಿದ್ದ ಅಭಿಮಾನಿಗಳು, ಲೇಖಕರು, ಸಂಗೀತಗಾರರು, ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಅಂತಿಮ ದರ್ಶನ ಪಡೆದು ಭಾವುಕರಾದರು.

ಲೇಖಕರಾದ ಪ್ರೊ.ಚಂದ್ರಶೇಖರ ಕಂಬಾರ, ದೇವನೂರ ಮಹಾದೇವ, ಓ.ಎಲ್‌.ನಾಗಭೂಷಣಸ್ವಾಮಿ, ರಹಮತ್‌ ತರೀಕೆರೆ, ಜಯಂತ ಕಾಯ್ಕಿಣಿ, ಅಬ್ದುಲ್ ರಶೀದ್‌, ವಿಜಯಮ್ಮ, ಸುಮಂಗಲಾ, ಸಂಗೀತಗಾರರಾದ ಫಯಾಜ್ ಖಾನ್‌, ವೀರಭದ್ರಯ್ಯ ಹಿರೇಮಠ ಸೇರಿದಂತೆ ನೂರಾರು ಮಂದಿ ಬಂದಿದ್ದರು.

ಚಂದ್ರಶೇಖರ ಕಂಬಾರ, ‘ನಮ್ಮ ಕಾಲದ ಎಲ್ಲ ನವ್ಯ ಸಾಹಿತಿಗಳಿಗಿಂತ ತಾರಾನಾಥರು ಮುಂದೆ ಹೋಗಿ ಯೋಚಿಸಿದವರು. ನಮ್ಮನ್ನು ತಿದ್ದಿದವರು. ಅವರು ಕಟ್ಟಿದ್ದು ನಿಜವಾದ ನವ್ಯತೆ. ಭಿನ್ನವಾಗಿ ಬೆಳೆಯಲು ಕಾರಣರಾದ ಅವರು ನನ್ನ ಗುರು’ ಎಂದು ಕಂಬನಿ ಮಿಡಿದರು.  

ಸರ್ಕಾರದ ಪರವಾಗಿ ಗೌರವ ಸಲ್ಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ‘ಸಾಹಿತ್ಯ ಹಾಗೂ ಸಂಗೀತದ ಮೂಲಕ ಸಾಮರಸ್ಯದ ಸಮಾಜವನ್ನು ಕಟ್ಟಲು ಯತ್ನಿಸಿದ ಸಂಗೀತ ಮಾಂತ್ರಿಕ ಅವರು. ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ರಾಜೀವ ತಾರಾನಾಥರ ಸ್ಮಾರಕವನ್ನು ನಿರ್ಮಿಸಲಾಗುವುದು. ಆಸ್ಪತ್ರೆ ವೆಚ್ಚ ₹ 30 ಲಕ್ಷವಾಗಿದ್ದು, ಸರ್ಕಾರವೇ ಭರಿಸಲಿದೆ’ ಎಂದರು.

ಸಚಿವ ಡಾ.ಎಚ್.ಸಿ.ಮಹದೇವಪ್ಪ ಲೇಖಕ ಚಂದ್ರಶೇಖರ ಕಂಬಾರ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ರಾಜೀವ ತಾರಾನಾಥರ ಅಂತಿಮ ದರ್ಶನ ಪಡೆದರು. ಕೆ.ಎಂ.ಗಾಯತ್ರಿ ಎಂ.ಡಿ.ಸುದರ್ಶನ್ ಕೃಷ್ಣಾ ಮನವಳ್ಳಿ ವಿಜಯಮ್ಮ ಹಾಜರಿದ್ದರು
ಸಚಿವ ಡಾ.ಎಚ್.ಸಿ.ಮಹದೇವಪ್ಪ ಲೇಖಕ ಚಂದ್ರಶೇಖರ ಕಂಬಾರ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ರಾಜೀವ ತಾರಾನಾಥರ ಅಂತಿಮ ದರ್ಶನ ಪಡೆದರು. ಕೆ.ಎಂ.ಗಾಯತ್ರಿ ಎಂ.ಡಿ.ಸುದರ್ಶನ್ ಕೃಷ್ಣಾ ಮನವಳ್ಳಿ ವಿಜಯಮ್ಮ ಹಾಜರಿದ್ದರು

ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಕೃಪಾ ಫಡ್ಕೆ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ನಿವೃತ್ತ ಐಜಿಪಿ ಸಿ.ಚಂದ್ರಶೇಖರ್, ರಂಗಕರ್ಮಿ ಸಿ.ಬಸವಲಿಂಗಯ್ಯ, ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT