ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಲಾಂ ನಿಂದನೆ ಆರೋಪ: ಸೌದಿ ಆದೇಶ ಪ್ರತಿ ಸಲ್ಲಿಸಲು ನಿರ್ದೇಶನ

Published 8 ಆಗಸ್ಟ್ 2023, 23:30 IST
Last Updated 8 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ಲಾಂ ಧರ್ಮ ಮತ್ತು ಸೌದಿ ಅರೇಬಿಯಾದ ರಾಜನ ಕುರಿತಂತೆ ಫೇಸ್‌ಬುಕ್‌ನಲ್ಲಿ ನಿಂದನಾತ್ಮಕ ಹೇಳಿಕೆಗಳನ್ನು ಪ್ರಕಟಿಸಿದ ಆರೋಪದಡಿ ಸೌದಿ ಅರೇಬಿಯಾದಲ್ಲಿ 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್‌ ಕುಮಾರ್ ಅವರ ಶಿಕ್ಷೆಯ ಆದೇಶದ ಪ್ರತಿ ಮತ್ತು ಅದರ ದೃಢೀಕರಣದ ಆದೇಶವನ್ನು ಹಾಜರುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಶೈಲೇಶ್ ಪತ್ನಿ ಕವಿತಾ ಶೈಲೇಶ್ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಶಿಕ್ಷೆ ಬದಲಾವಣೆ ಮಾಡುವಂತೆ ಕೋರಿ ಸೌದಿ ಅರೇಬಿಯಾದ ರಾಜರ ಮುಂದೆ ಮನವಿ ಸಲ್ಲಿಸುವಂತೆಯೂ ನಿರ್ದೇಶಿಸಿದೆ.

ಧರ್ಮ ನಿಂದನೆ, ವಿಶ್ವಾಸಘಾತುಕತನ ಅಥವಾ ದೇಶದ್ರೋಹದ ಆರೋಪಗಳನ್ನು ಎದುರಿಸುತ್ತಿರುವ ಪ್ರಕರಣಗಳಲ್ಲಿ ಕ್ಷಮಾದಾನ ಅರ್ಜಿ ಸಲ್ಲಿಸುವ ಕುರಿತ ಕಾರ್ಯವಿಧಾನವನ್ನು ವಿಸ್ತೃತವಾಗಿ ಪರಿಶೀಲಿಸಿ ವಿವರಿಸುವಂತೆಯೂ ಕೇಂದ್ರಕ್ಕೆ ನಿರ್ದೇಶಿಸಿದೆ.

ವಿಚಾರಣೆ ವೇಳೆ ಸೌದಿ ಅರೇಬಿಯಾದ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ಮೋಹಿನ್ ಖಾನ್ ಆನ್‌ ಲೈನ್‌ ಮೂಲಕ ಹಾಜರಾಗಿ, ‘ಶೈಲೇಶ್‌ಗೆ ಶಿಕ್ಷೆ ವಿಧಿಸಿರುವ ಆದೇಶದ ಪ್ರತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಆದರೆ, ಈವರೆಗೂ ಆದೇಶದ ಪ್ರತಿ ಲಭ್ಯವಾಗಿಲ್ಲ. ಪ್ರಯತ್ನ ಮುಂದುವರಿಸಲಾಗಿದೆ‘ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT