ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ವರ್ಚಸ್ಸಿಗೆ ಧಕ್ಕೆ ತರಲು ಭಯೋತ್ಪಾದನಾ ಕೃತ್ಯ: ಆರ್.ಅಶೋಕ

Published 1 ಮಾರ್ಚ್ 2024, 19:56 IST
Last Updated 1 ಮಾರ್ಚ್ 2024, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರಿನ ವರ್ಚಸ್ಸು ಕುಗ್ಗಿಸಿ, ಜನರಲ್ಲಿ ಅಭದ್ರತೆ ಮೂಡಿಸುವ ಹುನ್ನಾರ ಭಯೋತ್ಪಾದಕರದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ ದೂರಿದರು.

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಾವೆಲ್ಲರೂ ತಲೆ ತಗ್ಗಿಸುವ ಘಟನೆ ನಡೆದಿದೆ. ಶಾಂತಿಯ ತೋಟವನ್ನು ಕೆಡಿಸುವ ಭಯೋತ್ಪಾದಕ ಚಟುವಟಿಕೆ ರಾಜಧಾನಿಯಲ್ಲಿ ನಡೆದಿದೆ. ರಾಮೇಶ್ವರ ಕೆಫೆಗೆ ದೇಶ, ವಿದೇಶಗಳ ಜನ ಬರುತ್ತಾರೆ. ಬೆಂಗಳೂರಿನ ಪ್ರಭಾವಳಿಯನ್ನು ಕಡಿಮೆ ಮಾಡಿ, ಬಂಡವಾಳ ಹೂಡಿಕೆ ಇಳಿಸಲು ಭಯೋತ್ಪಾದಕರು ಯೋಜಿಸಿದ್ದಾರೆ’ ಎಂದು ಆರ್‌.ಅಶೋಕ ತಿಳಿಸಿದರು.

ಬಿ.ವೈ.ವಿಜಯೇಂದ್ರ ಮಾತನಾಡಿ, ‘ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ವಿಚಾರದಲ್ಲಿ ಎಫ್‌ಎಸ್‌ಎಲ್‌ ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಎಫ್‌ಎಸ್‌ಎಲ್‌ ವರದಿ ಶುಕ್ರವಾರ ಬೆಳಿಗ್ಗೆ ಬಂದಿದೆ. ಘೋಷಣೆ ಕೂಗಿದ್ದು ಸತ್ಯ ಎಂಬ ಅಂಶ ವರದಿಯಲ್ಲಿದೆ. ಅದನ್ನು ಮುಚ್ಚಿಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಎಫ್‌ಎಸ್‌ಎಲ್‌ ವರದಿ ತಿರುಚಿ ಬೋಗಸ್‌ ವರದಿ ಸಿದ್ಧಪಡಿಸಲಾಗುತ್ತಿದೆ’ ಎಂದು ದೂರಿದರು.

ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರ ಹತ್ಯೆಗಳಾಗಿವೆ. ಈ ಸರ್ಕಾರ ಬಂದ ಬಳಿಕ ಕೊಲೆ ಪ್ರಕರಣಗಳು ಹೆಚ್ಚಾಗಿವೆ. ಕಾಂಗ್ರೆಸ್‌ ಸರ್ಕಾರದ ಮೃದು ಧೋರಣೆಯಿಂದ ರಾಜ್ಯದ ಸುರಕ್ಷತೆಗೆ ಗಂಡಾಂತರ ಉಂಟಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಎನ್‌.ರವಿಕುಮಾರ್‌, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ ಮತ್ತು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT