ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಡ್ಲಕ್ಕೆ ಪ್ರವಾಸಿಗರ ಕರೆ ತಂದ ಐಷಾರಾಮಿ ನೌಕೆ ‘ಐಡಾ ವಿಟಾ’

ಎನ್‌ಎಂಪಿಟಿಯಲ್ಲಿ ‘ಪ್ರವಾಸಿ ನಾವಿಕರ ಹೆಲಿ ಪ್ರವಾಸ’ಕ್ಕೆ ಚಾಲನೆ
Published : 4 ನವೆಂಬರ್ 2019, 8:19 IST
ಫಾಲೋ ಮಾಡಿ
Comments

ಮಂಗಳೂರು (ಕುಡ್ಲ): ಈ ಋತುವಿನ ಮೊದಲ ಪ್ರವಾಸಿ ನೌಕೆ ‘ಐಡಾ ವಿಟಾ’ (AIDA VITA) ಸೋಮವಾರ ಬೆಳಿಗ್ಗೆ ನವ ಮಂಗಳೂರು ಬಂದರಿಗೆ (ಎನ್‌ಎಂಪಿಟಿ) ಬಂತು. ಇದರೊಂದಿಗೆ ದೇಶದಲ್ಲೇ ಚೊಚ್ಚಲ ಬಾರಿಗೆ ಎನ್ನಲಾದ ‘ಪ್ರವಾಸಿ ನಾವಿಕರ ಹೆಲಿ ಪ್ರವಾಸ’ಕ್ಕೆ (Heli tourism)ಎನ್‌ಎಂಪಿಟಿಯಲ್ಲಿ ಚಾಲನೆ ನೀಡಲಾಯಿತು.

1,154 ಪ್ರವಾಸಿ ನಾವಿಕರು ಹಾಗೂ 407 ಸಿಬ್ಬಂದಿಯನ್ನು ಒಳಗೊಂಡ ಪನಮಾ ಧ್ವಜದ (ಮೂಲತಃ ಸಿಂಗಾಪುರ) ನೌಕೆಗೆ ಬಂದರಿನಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಭಾರತ, ಕರ್ನಾಟಕವೇ ಅಂತರ್ಗತವಾದ ತುಳುನಾಡಿನ ಸಾಂಪ್ರದಾಯಿಕ ಕಲೆಗಳಾದ ಯಕ್ಷಗಾನ, ಕಂಗಿಲು, ಗೊಂಬೆ, ಹುಲಿ ವೇಷ ಮತ್ತಿತರ ವೇಷಧಾರಿಗಳ ಹೆಜ್ಜೆ, ನಾದ ನಿನಾದಕ್ಕೆ ವಿದೇಶಿ ಪ್ರವಾಸಿಗರು ಬೆರಗಾಗಿ ಸಂಭ್ರಮಿಸಿದರು.

ಅಕ್ಟೋಬರ್ 28 ರಂದು ದುಬೈನಿಂದ ಹೊರಟ ನೌಕೆಯು ಗೋವಾದಲ್ಲಿಒಂದು ದಿನ ಪ್ರವಾಸವನ್ನು ಮುಗಿಸಿ, ಭಾನುವಾರ ರಾತ್ರಿ ಹೊರಟಿತ್ತು. ಸೋಮವಾರ ಬೆಳಿಗ್ಗೆಯಿಂದ ಸಂಜೆ ತನಕ ಮಂಗಳೂರಿನಲ್ಲಿ ಕಳೆಯಲಿದೆ. ರಾತ್ರಿ 8ಕ್ಕೆ ಕೊಚ್ಚಿಯತ್ತ ಯಾನ ಬೆಳೆಸಿ, ಅಲ್ಲಿಂದ ಮಾಲ್ಡೀವ್ಸ್, ಕೊಲೊಂಬೊ, ಮಲೇಷಿಯ,ಸಿಂಗಾಪುರ ಸೇರಿದಂತೆ 21 ದಿನಗಳ ದಕ್ಷಿಣ ಏಷ್ಯಾದ ಯಾನ ಮಾಡಲಿದೆ.

‘ಭಾರತದ ಪ್ರವಾಸವು ವಿಭಿನ್ನ ಅನುಭವವಾಗಿದೆ. ಇಲ್ಲಿನ ಸಂಸ್ಕೃತಿ, ಜನರು, ಸ್ಥಳಗಳು ನಮಗೆ ಖುಷಿ ನೀಡಿದೆ. ಮತ್ತೊಮ್ಮೆ ಮಗದೊಮ್ಮೆ ಮಂಗಳೂರಿಗೆ ಬರುವ ಅನಿಸುತ್ತದೆ’ ಎಂದು ಪ್ರವಾಸಿ ನಾವಿಕೆ ಜರ್ಮಿನಿಯ ಸೆರಾ ಹರ್ಷ ವ್ಯಕ್ತಪಡಿಸಿದರು.

ಪ್ರವಾಸಿಗರಿಗೆ ಸಂಭ್ರಮದ ಸ್ವಾಗತ (ಚಿತ್ರ: ಗೋವಿಂದರಾಜ ಜವಳಿ)
ಪ್ರವಾಸಿಗರಿಗೆ ಸಂಭ್ರಮದ ಸ್ವಾಗತ (ಚಿತ್ರ: ಗೋವಿಂದರಾಜ ಜವಳಿ)

‘ಇದೊಂದು ವಿಸ್ಮಯದ ವಿಚಾರ. ಇನ್‌ಕ್ರೆಡಿಬಲ್ ಇಂಡಿಯಾ. ಇದೇ ಮೊದಲ ಬಾರಿಗೆ ಬಂದಿದ್ದು, ಯಾನವು ಸಾರ್ಥಕವಾಯಿತು. ಇಲ್ಲಿ ಚಿತ್ರಣ, ಕಲೆಗಳನ್ನು ಗಮನಿಸಿದರೆ ಹೆಮ್ಮೆಯ ಭಾವನೆ ಮೂಡುತ್ತಿದೆ. ಇಲ್ಲಿ ಹೋಳಿ ಬಗ್ಗೆ ಕೇಳಿದ್ದೆನು. ನಿಜಕ್ಕೂ ವರ್ಣಮಯವಾಗಿದೆ’ ಎಂದು ಜರ್ಮಿಯ ಇವಾನಾ ಮುಗುಳ್ನಕ್ಕರು.

‘ಭಾರತದ ಸಂಸ್ಕತಿ, ಕಲೆ ಹಾಗೂ ಭೌಗೋಳಿಕ ಪ್ರದೇಶವನ್ನು ನೋಡುವ ಆಸಕ್ತಿ ಇದೆ. ಇಲ್ಲಿನ ಮೀನು ಮಾರುಕಟ್ಟೆ, ಆಟೊ ರಿಕ್ಷಾ, ಮಾಂಸಾಹಾರದ ರುಚಿ, ಕಲಾವಿದರು, ಶಿಲ್ಪಕಲೆಗಳು, ವಸ್ತ್ರಗಳು, ಸಂಸ್ಕೃತಿ ಸೇರಿದಂತೆ ವೈವಿಧ್ಯತೆಯನ್ನು ಸಂಭ್ರಮಿಸುವ ಖುಷಿ ಇದೆ’ ಎಂದು ಡಚ್ ಮೂಲದ ಯೆಜೆನ್ ಮತ್ತು ಕ್ರಿಸ್ಟಿಯಾನಾ ತಿಳಿಸಿದರು.

ಹೆಲಿ ಟೂರಿಸಂ: ‘ಒಂದು ವರ್ಷದ ಋತುವಿನಲ್ಲಿ ಸುಮಾರು 26 ಪ್ರವಾಸಿ ನೌಕೆಗಳು ಇಲ್ಲಿ ದಿನದ ಮಟ್ಟಿಗೆ ಲಂಗರು ಹಾಕುತ್ತವೆ. ಪ್ರವಾಸಿಗರಿಗೆ ಸಮಯದ ಕೊರತೆಯಿದ್ದು, ನಾವು ಕಡಿಮೆ ಅವಧಿಯಲ್ಲಿ ಹೆಚ್ಚಿನ ದರ್ಶನ ನೀಡಲು ‘ಪ್ರವಾಸಿ ನಾವಿಕರ ಹೆಲಿ ಪ್ರವಾಸ’ವನ್ನು ಆರಂಭಿಸಿದ್ದೇವೆ. ಮುಂದಿನ ನೌಕೆ ಬರುವ ವೇಳೆಯಲ್ಲಿ ಎರಡು ಹೆಲಿಕಾಪ್ಟರ್‌ ಮೂಲಕ ಪ್ರವಾಸಿಗರು ಸುತ್ತಾಟ ನಡೆಸಲಿದ್ದಾರೆ’ ಎಂದು ಎನ್‌ಎಂಪಿಟಿ ಅಧ್ಯಕ್ಷ ವೆಂಕಟ ರಮಣ ಅಕ್ಕರಾಜು ತಿಳಿಸಿದರು.

ಕಂಬಳದ ಕಲೆ ನೋಡಿ ಖುಷಿಪಟ್ಟರು
ಕಂಬಳದ ಕಲೆ ನೋಡಿ ಖುಷಿಪಟ್ಟರು

‘ಈ ವರ್ಷ 24 ಪ್ರವಾಸಿ ನೌಕೆಗಳ ನಿರೀಕ್ಷೆಯಲ್ಲಿದ್ದು, ಇದರಿಂದ ಬಂದರಿಗೆ ಸುಮಾರು ₹5 ಕೋಟಿಯಷ್ಟು ಆದಾಯ ಬರಬಹುದು. ಆದರೆ, ಪ್ರವಾಸಿಗರ ಸಂಚಾರವು ರಿಕ್ಷಾ, ಕಾರು, ಪ್ರವಾಸಿ ಏಜೆನ್ಸಿ, ಕರಕುಶಲ ಕರ್ಮಿಗಳು, ಹೋಟೆಲ್ ಸೇರಿದಂತೆ ಸ್ಥಳೀಯವಾಗಿ ಸೃಷ್ಟಿಸುವ ಉದ್ಯಮದ ವ್ಯಾಪ್ತಿ ಬಹುದೊಡ್ಡದು. ಹೀಗಾಗಿ, ಬಂದರಿನ ಆದಾಯಕ್ಕಿಂತಲೂ ಕರ್ನಾಟಕ ಹಾಗೂ ಭಾರತದ ಪ್ರವಾಸೋದ್ಯಮ, ವಹಿವಾಟು ಹಾಗೂ ಔದ್ಯೋಗಿಕ ಸೃಷ್ಟಿಯಲ್ಲಿ ಪ್ರವಾಸಿ ನೌಕೆಗಳ ಆಗಮನವು ದೊಡ್ಡ ಪಾತ್ರವನ್ನು ಹೊಂದಿದೆ. ಇದೊಂದು ನಮ್ಮ ಸಾಮಾಜಿಕ ಜವಾಬ್ದಾರಿ’ ಎಂದು ಎನ್‌ಎಂಪಿಟಿ ಅಧ್ಯಕ್ಷ ವೆಂಕಟ ರಮಣ ಅಕ್ಕರಾಜು ಪ್ರತಿಕ್ರಿಯಿಸಿದರು.

‘ಹೆಲಿಕಾಪ್ಟರ್‌ ಮೂಲಕ ಕರ್ನಾಟಕದ ಧರ್ಮಸ್ಥಳ, ಮೂಡುಬಿದಿರೆ, ಚಿಕ್ಕಮಗಳೂರು ಮಾತ್ರವಲ್ಲ, ಕೇರಳದ ಬೇಕಲ್ ಕೋಟೆ ಮತ್ತಿತರ ಪ್ರದೇಶದ ವೀಕ್ಷಣೆಯ ಅವಕಾಶ ಕಲ್ಪಿಸಿದ್ದೇವೆ’ ಎಂದು ಹೆಲಿ ಟೂರಿಸಂ ಆಯೋಜಕ ಏಜೆನ್ಸಿಗಳು ತಿಳಿಸಿದವು.

ಆಟೊ ಏರಿದವನ ಖುಷಿ ನೋಡಿ...
ಆಟೊ ಏರಿದವನ ಖುಷಿ ನೋಡಿ...

‘ಇದೇ ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದೇವೆ. ಪ್ರವಾಸಿಗರ ಆನಂದಕ್ಕಾಗಿ ನೌಕೆಯಲ್ಲಿ ಸಕಲ ಸೌಲಭ್ಯಗಳಿವೆ. ಪ್ರವಾಸಿಗರು ಬಹಳ ಸಂತಸಪಟ್ಟಿದ್ದಾರೆ’ ಎಂದು ಐಡಾ ವಿಟಾ ನೌಕೆಯ ಮುಖ್ಯಸ್ಥ ಎಡಾನಿಯಾ ಪ್ರತಿಕ್ರಿಯಿಸಿದರು.

ಸುಮಾರು 500ರಷ್ಟು ನಾವಿಕರು ಕೆಳಗಿಳಿದು ಬಂದಿದ್ದು, ಈ ಪೈಕಿ ಹಲವರು ನಗರ ಹಾಗೂ ಸಮೀಪದ ಪ್ರದೇಶದಲ್ಲಿ ಸುತ್ತಾಟ ನಡೆಸಿದರು. ವಿದೇಶಿಗರ ಓಡಾಟವು ಸ್ಥಳೀಯರಿಗೂ ಪುಳಕ ನೀಡಿದರೆ, ‘ಡಾಲರ್’ ವ್ಯವಹಾರವು ಆರ್ಥಿಕ ಬಲ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT