ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆ ಹಾಲು ಮಾರಾಟ ಆರೋಪ: ಮಾಹಿತಿಗೆ ಸೂಚನೆ

Published 11 ಏಪ್ರಿಲ್ 2024, 0:03 IST
Last Updated 11 ಏಪ್ರಿಲ್ 2024, 0:03 IST
ಅಕ್ಷರ ಗಾತ್ರ

ಬೆಂಗಳೂರು: ‘ತಾಯಂದಿರ ಎದೆಹಾಲು ಸಂಗ್ರಹಣೆ ಹಾಗೂ ಮಾರಾಟ ಚಟುವಟಿಕೆ ತಡೆಯುವಂತಹ ನಿರ್ದಿಷ್ಟ ಕಾನೂನುಗಳು ಜಾರಿಯಲ್ಲಿವೆಯೇ ಎಂಬ ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ಸಲ್ಲಿಸಿ’ ಎಂದು ಹೈಕೋರ್ಟ್‌, ಪ್ರಕರಣದ ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿದೆ.

ಈ ಸಂಬಂಧ ನಗರದ ಮರಳಕುಂಟೆಯ ಮುನೇಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಬಿ.ವಿಶ್ವೇಶ್ವರಯ್ಯ ‘ಕೆಲವು ಬಹುರಾಷ್ಟ್ರೀಯ ಕಂಪನಿಗಳು ತಾಯಂದಿರ ಎದೆಹಾಲು ಸಂಗ್ರಹಿಸಿ ಮಾರಾಟ ಮಾಡುತ್ತಿವೆ. ಇದರಿಂದ ವಾಣಿಜ್ಯ ಪ್ರಯೋಜನ ಪಡೆಯುತ್ತಿವೆ. ನೈತಿಕ ನಿಯಮಗಳಿಗೆ ವಿರುದ್ಧವಾದ ಇಂತಹ ಚಟುವಟಿಕೆಯನ್ನು ತಡೆಯಬೇಕು. ಈ ಸಂಬಂಧ ನಿರ್ದಿಷ್ಟ ಕಾನೂನು ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ತಾಯಂದಿರ ಎದೆಹಾಲು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಯಾವುದಾದರೂ ನಿರ್ದಿಷ್ಟ ಘಟನೆ ನಡೆದಿರುವುದು ನಿಮಗೆ ಕಂಡುಬಂದಿದೆಯೇ? ಅಂತೆಯೇ ಇಂತಹ ಚಟುವಟಿಕೆಯನ್ನು ತಡೆಯಲು ದೇಶದ ಯಾವುದಾದರೂ ರಾಜ್ಯಗಳು ಅಥವಾ ವಿದೇಶಗಳಲ್ಲಿ ಸ್ಪಷ್ಟವಾದ ಕಾನೂನುಗಳು ಇವೆಯೇ? ಎಂದು ಪ್ರಶ್ನಿಸಿತು. ಇದಕ್ಕೆ ವಿಶ್ವೇಶ್ವರಯ್ಯ, ‘ನಾನು ಈತನಕ ನಡೆಸಿರುವ ಅಧ್ಯಯನದ ಪ್ರಕಾರ ಅಂತಹ ಯಾವುದೇ ಕಾನೂನು ಇಲ್ಲ’ ಎಂದರು.

ಇದಕ್ಕೆ ನ್ಯಾಯಪೀಠ, ‘ಇದೊಂದು ಪ್ರಮುಖವಾದ ವಿಚಾರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಅಧ್ಯಯನ ನಡೆಸಿ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿ’ ಎಂದು ಸೂಚಿಸಿ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿತು.

ಪ್ರಕರಣದಲ್ಲಿ; ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆಯುಷ್‌, ಕಾನೂನು, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಅರ್ಜಿಯಲ್ಲಿ ಏನಿದೆ?

‘ಕೆಲ ಖಾಸಗಿ ಸಂಸ್ಥೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ತಾಯಂದಿರಿಗೆ ಹಣ ನೀಡಿ ಎದೆಹಾಲು ಸಂಗ್ರಹಿಸಿ, ನಂತರ ಅದನ್ನು ಪೌಡರ್‌ ರೂಪದಲ್ಲಿ ದೇಶದಾದ್ಯಂತ ಮಾರಾಟ ಮಾಡುತ್ತಿವೆ. ತಾಯಂದಿರ ಎದೆಹಾಲನ್ನು ನವಜಾತ ಶಿಶುಗಳಿಗೆ ಉಣಿಸಲು ಮಾತ್ರವೇ ಬಳಸಬಹುದು. ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು ಎಂದು ಆರೋಗ್ಯ ಇಲಾಖೆಯಡಿ ಕಾರ್ಯ ನಿರ್ವಹಿಸುವ ಹಾಲುಣಿಸುವ ನಿರ್ವಹಣಾ ಕೇಂದ್ರಗಳಿಗೆ 2017ರಲ್ಲಿಯೇ ಮಾರ್ಗಸೂಚಿ ನಿಗದಿಪಡಿಸಲಾಗಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

‘ತಾಯಿಯ ಎದೆಹಾಲನ್ನು ಮಾರಾಟ ಮಾಡಿದರೆ, ಶಿಶುಗಳ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ, ತಾಯಂದಿರ ಎದೆಹಾಲು ಸಂಗ್ರಹಿಸುವ ಹಾಗೂ ಮಾರಾಟ ಮಾಡುವ ಮತ್ತು ನೈತಿಕ ನಿಯಮಗಳಿಗೆ ವಿರುದ್ಧವಾದ ಇಂತಹ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ತಡೆಯುವ ಅಗತ್ಯವಿದೆ. ಈ ದಿಸೆಯಲ್ಲಿ ಸಮಗ್ರ ತನಿಖೆ ನಡೆಯಬೇಕು. ಎದೆಹಾಲು ಸಂಗ್ರಹಣೆ ಹಾಗೂ ಮಾರಾಟದಿಂದ ಖಾಸಗಿ ಕಂಪನಿಗಳು ಗಳಿಸಿರುವ ಲಾಭವನ್ನು ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT