ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೃತ ಸರೋವರ: ರಾಜ್ಯದಲ್ಲಿ 644 ಹೊಸ ಕೆರೆ ನಿರ್ಮಾಣ

‘ಅಮೃತ ಸರೋವರ’: 11 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ನವ ಸಂಗ್ರಹ ತಾಣ
Published : 26 ಮಾರ್ಚ್ 2023, 19:30 IST
ಫಾಲೋ ಮಾಡಿ
Comments

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ‘ಅಮೃತ ಸರೋವರ’ ಯೋಜನೆಯಲ್ಲಿ ರಾಜ್ಯ 644 ಹೊಸ ಕೆರೆಗಳನ್ನು ನಿರ್ಮಿಸಿದೆ. 11 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಕ್ಯೂಬಿಕ್‌ ಮೀಟರ್‌ ನೀರನ್ನು ಸಂಗ್ರಹಿಸಲಾಗಿದೆ.

ಕೆರೆಗಳ ಸಮಗ್ರ ಅಭಿವೃದ್ಧಿಯ ‘ಅಮೃತ ಸರೋವರ’ ಯೋಜನೆಯಲ್ಲಿ ಹೊಸ ಕೆರೆಗಳನ್ನೂ ನಿರ್ಮಿಸುವ ಕಾರ್ಯ ಕೈಗೊಳ್ಳಲಾಗಿದೆ. ಇದರಲ್ಲಿ ಬೆಳಗಾವಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, 493 ಎಕರೆ ಪ್ರದೇಶದಲ್ಲಿ 75 ಕೆರೆಗಳನ್ನು ಸೃಷ್ಟಿಸಿದೆ. ನಂತರ ಸ್ಥಾನ ಹಾಸನದ್ದಾಗಿದೆ. 6,714 ಎಕರೆ ಪ್ರದೇಶದಲ್ಲಿ 60 ಕೆರೆಗಳು ನಿರ್ಮಾಣಗೊಂಡಿವೆ.

ನಶಿಸಿಹೋಗಿದೆ ಎಂದು ಕಂದಾಯ ದಾಖಲೆಗಳಲ್ಲಿ ಉಲ್ಲೇಖವಾಗಿದ್ದ ಕೆರೆ ಪ್ರದೇಶಗಳನ್ನು ಮತ್ತೆ ಗುರುತಿಸಿ, ಹೊಸ ಕೆರೆಗಳನ್ನಾಗಿ ಪುನಶ್ಚೇತನಗೊಳಿಸಲಾಗಿದೆ. ನೀರಿನ ಸಂಗ್ರಹದ ಸಾಧ್ಯತೆ ಇರುವ ಕಡೆಗಳಲ್ಲಿ ಹೊಸ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಗ್ರಾಮಗಳು, ಹಳ್ಳಿಗಳ ಹಂಚಿನಲ್ಲಿ ಕುಡಿಯುವ ನೀರು, ಪ್ರಾಣಿಗಳಿಗೆ ನೀರು ಸೇರಿದಂತೆ ಬೆಟ್ಟಗಳಿಂದ ಬರುವ ನೀರನ್ನು ಸಂಗ್ರಹಿಸಿ, ಜೀವವೈವಿಧ್ಯಕ್ಕೆ ನೆರವಾಗುವ ಉದ್ದೇಶದಿಂದ ಹೊಸ ಕೆರೆಗಳನ್ನು ಕಟ್ಟಲಾಗಿದೆ.

1,963 ಕೆರೆಗಳ ಪುನರುಜ್ಜೀವನ: ಅಮೃತ ಸರೋವರ ಯೋಜನೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 75 ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕಿತ್ತು. ಆದರೆ, ಇದನ್ನು ರಾಜ್ಯ ಸರಾಸರಿ 204 ಕೆರೆಗಳಿಗೆ ಗುರಿ ನಿರ್ಧರಿಸಿಕೊಂಡಿದೆ. ಹೀಗಾಗಿ 6,324 ಕೆರೆಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 4,738 ಕೆರೆಗಳಲ್ಲಿ ಕಾಮಗಾರಿ ಆರಂಭವಾಗಿದ್ದು, 1963 ಕೆರೆಗಳು ಪುನಶ್ಚೇತನಗೊಂಡಿವೆ. ಇದರಿಂದ ಒಂದು ಕೋಟಿಗೂ ಹೆಚ್ಚು ಕ್ಯೂಬಿಕ್‌ ಮೀಟರ್‌ (1,14,69,183 ಕ್ಯೂಬಿಕ್‌ ಮೀಟರ್‌) ನೀರಿನ ಸಂಗ್ರಹ ಅಧಿಕವಾಗಿದೆ. ಈ ಸಾಧನೆಯಿಂದ ರಾಜ್ಯ ಇದೀಗ ದೇಶದ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಒಂದು ಎಕರೆ ಕೆರೆ ವಿಸ್ತೀರ್ಣವಿದ್ದರೆ ಅದರ ನೀರಿನ ಸಂಗ್ರಹ ಸಾಮರ್ಥ್ಯವನ್ನು 10 ಸಾವಿರ ಕ್ಯೂಬಿಕ್‌ ಮೀಟರ್‌ಗೆ ಹೆಚ್ಚಿಸಬೇಕು. ‘ಅಮೃತ ಸರೋವರ’ ಯೋಜನೆಯ ಆಶಯದಂತೆ ಸ್ವಾತಂತ್ರ್ಯ ಹೋರಾಟಗಾರರು, ಅವರ ಕುಟುಂಬದವರು, ಪದ್ಮ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಸ್ಥಳೀಯ ಜನರು ಕೆರೆಗಳ ಪುನಶ್ಚೇತನ ಕಾಮಗಾರಿಗಳಲ್ಲಿ ತೊಡಗಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೈಲ್ವೆ ಇಲಾಖೆಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿವೆ. ಮಹಾತ್ಮಗಾಂಧಿ ನರೇಗಾ, 15ನೇ ಹಣಕಾಸು ಆಯೋಗ, ಜಲಾನಯನ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳ ಅನುದಾನವಿದೆ. ಇದಲ್ಲದೆ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌ ಫಂಡ್‌) ಬಳಸಿಕೊಳ್ಳಲಾಗಿದೆ.

₹679.25 ಕೋಟಿ ವೆಚ್ಚ: ಕೆರೆಗಳ ಸಮಗ್ರ ಅಭಿವೃದ್ದಿಯಲ್ಲಿ ಈವರೆಗೆ ರಾಜ್ಯ ಸರ್ಕಾರ ₹679.25 ಕೋಟಿ ವೆಚ್ಚ ಮಾಡಿದೆ. 2023ರ ಆಗಸ್ಟ್‌ 15ರೊಳಗೆ ಎಲ್ಲ ಯೋಜನೆ ಪೂರ್ಣಗೊಳ್ಳಬೇಕಿದೆ. ಆ.15ರಂದು ಪುನಶ್ಚೇತನಗೊಂಡಿರುವ ಹಾಗೂ ಹೊಸದಾಗಿ ನಿರ್ಮಾಣಗೊಂಡಿರುವ ಎಲ್ಲ ಕೆರೆಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಾಗುವುದು ಎಂದು ಶಿಲ್ಪಾ ನಾಗ್ ತಿಳಿಸಿದರು.

ತುಮಕೂರಿನಲ್ಲಿ ಅತಿಹೆಚ್ಚು

ಅಮೃತ ಸರೋವರ ಯೋಜನಯಲ್ಲಿ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 443 ಕೆರೆಗಳನ್ನು ಸಮಗ್ರ ಅಭಿವೃದ್ಧಿಗೆ ಗುರುತಿಸಲಾಗಿದೆ. ಆದರೆ ಇದರಲ್ಲಿ ಈವರೆಗೆ ಕಾಮಗಾರಿ ಆರಂಭವಾಗಿರುವ ಕೆರೆಗಳ ಸಂಖ್ಯೆ 202. ಅಭಿವೃದ್ಧಿಯಾಗಿರುವ ಕೆರೆಗಳು 85 ಮಾತ್ರ. ಇನ್ನು ಎರಡನೇ ಸ್ಥಾನದಲ್ಲಿರುವ ಹಾಸನದಲ್ಲಿ 343 ಕೆರೆಗಳ ಪೈಕಿ 84 ಕೆರೆಗಳು ಅಭಿವೃದ್ಧಿಗೊಂಡಿವೆ. ಕಲಬುರಗಿಯಲ್ಲಿ 298ರಲ್ಲಿ 48, ಬೆಳಗಾವಿಯಲ್ಲಿ 284ಕ್ಕೆ 88, ರಾಮನಗರದಲ್ಲಿ 274ಕ್ಕೆ 75 ಕೆರೆಗಳು ಅಭಿವೃದ್ಧಿಯಾಗಿವೆ. ಚಾಮರಾಜನಗರ, ಉಡುಪಿ, ಬೆಂಗಳೂರು, ಉತ್ತರ ಕನ್ನಡ, ಕೊಡಗು ಜಿಲ್ಲೆಗಳು ಕೆರೆಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಕೊನೆಯ ಐದು ಸ್ಥಾನದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT