ಬೆಂಗಳೂರು: ‘ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಗೌರವಧನ ಯೋಜನೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿಯನ್ನು ಪರಿಗಣಿಸಿ‘ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಮುಂದಿನ ಎರಡು ತಿಂಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು‘ ಎಂದು ಆದೇಶಿಸಿದೆ.
‘ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಉತ್ತಮ ಸೌಲಭ್ಯ ದೊರೆಯುತ್ತಿಲ್ಲ. ಹೀಗಾಗಿ, ಅವರ ಸೇವೆಯನ್ನು ಪರಿಗಣಿಸಿ ಗೌರವಧನ ಹೆಚ್ಚಳ ಮಾಡಬೇಕೆಂಬ ಮನವಿಯ ಪರಿಶೀಲನೆ ಅವಶ್ಯವಿದೆ‘ ಎಂದು ನ್ಯಾಯಪೀಠ ತಿಳಿಸಿದೆ.
‘ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಪಾವತಿ ಯೋಜನೆಯನ್ನು 2011ರ ಮಾರ್ಚ್ 18ರಂದು ಪ್ರಾರಂಭಿಸಿದ್ದ ಸರ್ಕಾರ ಕಾರ್ಯಕರ್ತೆಯರಿಗೆ ₹ 30 ಸಾವಿರ ಮತ್ತು ಸಹಾಯಕಿಯರಿಗೆ ₹ 50 ಸಾವಿರ ನೀಡುತ್ತಿದೆ. ಈ ಮೊತ್ತವನ್ನು ಕ್ರಮವಾಗಿ ₹ 50 ಸಾವಿರ ಹಾಗೂ ₹ 1 ಲಕ್ಷಕ್ಕೆ ಹೆಚ್ಚಳ ಮಾಡಲು ನಿರ್ದೇಶಿಸಬೇಕು‘ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.