ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಮತ್ತೊಬ್ಬ ಆರೋಪಿ ಬಂಧನ, ಬಂಧಿತರ ಸಂಖ್ಯೆ 8ಕ್ಕೆ

Published 12 ಡಿಸೆಂಬರ್ 2023, 13:55 IST
Last Updated 12 ಡಿಸೆಂಬರ್ 2023, 13:55 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆ ಒಬ್ಬರನ್ನು ಬೆತ್ತಲೆಗೊಳಿಸಿ, ಬೀದಿಯಲ್ಲಿ ಓಡಾಡಿಸಿ, ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತರ ಸಂಖ್ಯೆ 8ಕ್ಕೆ ಏರಿದೆ.

ಹೊಸ ವಂಟಮೂರಿ ಗ್ರಾಮದ ಶಿವಪ್ಪ ವಣ್ಣೂರಿ 8ನೇ ಆರೋಪಿಯಾಗಿದ್ದಾರೆ. ಯುವತಿಯ ತಾಯಿ ಪಾರ್ವತಿ ಬಸಪ್ಪ ನಾಯಕ, ಅಜ್ಜಿ ಯಲ್ಲವ್ವ ರುದ್ರ‍ಪ್ಪ ನಾಯಕ, ಸಂಗೀತಾ ಸದಾಶಿವ ಹೆಗ್ಗನಾಯಕ, ಗಂಗವ್ವ ಬಸ‍ಪ್ಪ ವಾಲಿಕಾರ ಅವರನ್ನು ಸೋಮವಾರ ರಾತ್ರಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಯುವತಿಯ ತಂದೆ ಬಸಪ್ಪ ರುದ್ರಪ್ಪ ನಾಯಕ, ಸಂಬಂಧಿಕರಾದ ಕೆಂಪಣ್ಣ ರಾಜು ನಾಯಕ, ರಾಜು ರುದ್ರಪ್ಪ ನಾಯಕ ಅವರನ್ನು ಮಂಗಳವಾರ ಬೆಳಿಗ್ಗೆ ಗ್ರಾಮಕ್ಕೆ ಕರೆದೊಯ್ದು ಮಹಜರು ಮಾಡಲಾಯಿತು. ನಂತರ ಎಲ್ಲರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಬೆಳಗಾವಿಯ 4ನೇ ಜೆಎಂಎಫ್‌ಸಿ ನ್ಯಾಯಾಲಯವು ಎಲ್ಲ ಆರೋಪಿಗಳನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆ ಆರೋಗ್ಯ ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಗೆ ಧೈರ್ಯ ಹೇಳಿದರು.

ಹೊಸ ವಂಟಮೂರಿಯ ದುಂಡಪ್ಪ ಗಡ್ಕರಿ (24) ಹಾಗೂ ಪ್ರಿಯಾಂಕ (22) ಪ್ರೀತಿಸುತ್ತಿದ್ದರು. ಪ್ರಿಯಾಂಕ ಮನೆಯವರು ಇವರಿಬ್ಬರ ಪ್ರೀತಿ ಒಪ್ಪದೇ, ಬೇರೊಬ್ಬ ವರನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಸೋಮವಾರ (ಡಿ.11) ಪ್ರಿಯಾಂಕ ಅವರಿಗೆ ‘ಯಾದಿ ಮೇ ಶಾದಿ’ ಪದ್ಧತಿಯಲ್ಲಿ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಭಾನುವಾರ ರಾತ್ರಿಯೇ ದುಂಡಪ್ಪ– ಪ್ರಿಯಾಂಕ ಮನೆ ಬಿಟ್ಟು ಓಡಿಹೋದರು. ಇದರಿಂದ ಸಿಟ್ಟಿಗೆದ್ದ ಯುವತಿಯ ಪಾಲಕರು ಹಾಗೂ ಸಂಬಂಧಿಕರು ಸೇರಿಕೊಂಡು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ, ವಿದ್ಯುತ್‌ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT