ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ವೆಚ್ಚ ತಗ್ಗಿಸಲು ಸೌರ ದಾರಿ

ನಿವಾಸಿಗಳಿಂದಲೇ 400 ಕಿ.ವಾ. ಸೌರ ಫಲಕ: ತಿಂಗಳಿಗೆ ₹3.7 ಲಕ್ಷ ಉಳಿತಾಯ
Published 26 ಆಗಸ್ಟ್ 2023, 3:33 IST
Last Updated 26 ಆಗಸ್ಟ್ 2023, 3:33 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ನಿವಾಸಿಗಳೆಲ್ಲರಿಗೂ ಸೇರುವ ಸಾಮಾನ್ಯ ಜಾಗದಲ್ಲಿನ ವಿದ್ಯುತ್ ಬೇಡಿಕೆಯನ್ನು ತಗ್ಗಿಸಲು ಬೇಗೂರಿನಲ್ಲಿರುವ ಅಪಾರ್ಟ್‌ಮೆಂಟ್‌ನ ನಿವಾಸಿಗಳ ಸಂಘವು ಸೌರ ವಿದ್ಯುತ್ ಘಟಕ ಅಳವಡಿಸಿ 400 ಕಿಲೋ ವಾಟ್‌ ವಿದ್ಯುತ್ ಉತ್ಪಾದಿಸುವ ಮೂಲಕ ಇಂಧನ ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆ ಇಟ್ಟಿದೆ.

ಬೇಗೂರಿನ ಡಿಎಲ್‌ಎಫ್‌ ವೆಸ್ಟೆಂಡ್ ಹೈಟ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ 19 ಕಟ್ಟಡಗಳಿವೆ. ಇದರಲ್ಲಿ ಒಟ್ಟು 1830 ಮನೆಗಳಿವೆ. ಇಷ್ಟು ದೊಡ್ಡ ಅಪಾರ್ಟ್‌ಮೆಂಟ್‌ನಲ್ಲಿನ ಕಾಮನ್ ಏರಿಯಾದ ಬೆಳಕು, ಪಂಪ್‌ಸೆಟ್‌, ಲಿಫ್ಟ್‌, ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಗೆ ಅಗತ್ಯವಿರುವ ವಿದ್ಯುತ್‌ಗಾಗಿ 29 ಮೀಟರ್‌ಗಳನ್ನು ಅಳವಡಿಸಲಾಗಿದೆ. ಬರುತ್ತಿದ್ದ ದುಬಾರಿ ಶುಲ್ಕವನ್ನು ಈವರೆಗೂ ನಿವಾಸಿಗಳೇ ಭರಿಸುತ್ತಾ ಬಂದಿದ್ದಾರೆ. ಆದರೆ ಇದಕ್ಕೊಂದು ಇತಿಶ್ರೀ ಹಾಡಲು ಸೌರ ಫಲಕ ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.

‘ಕಳೆದ ಮೂರು ವರ್ಷಗಳಿಂದ ಮೂರು ಹಂತಗಳಲ್ಲಿ ಸೌರ ಫಲಕಗಳನ್ನು ಅಪಾರ್ಟ್‌ಮೆಂಟ್‌ನ ಚಾವಣಿ ಮೇಲೆ ಅಳವಡಿಸಲಾಗಿದೆ. ಮೂರನೇ ಹಂತ ಇದೇ ತಿಂಗಳ 27ರಂದು ಉದ್ಘಾಟನೆಗೆ ಸಿದ್ದಗೊಂಡಿದೆ. ಇದರ ಮೂಲಕ ಒಟ್ಟು 400 ಕಿಲೋ ವಾಟ್‌ ಸೌರ ವಿದ್ಯುತ್ ಉತ್ಪಾದನೆ ಆದಂತಾಗಲಿದೆ. ಮೊದಲ ಹಂತದಲ್ಲಿ 185 ಕಿ.ವಾ., ಎರಡನೇ ಹಂತದಲ್ಲಿ 100 ಕಿ.ವಾ. ಹಾಗೂ ಮೂರನೇ ಹಂತದಲ್ಲಿ 115 ಕಿ.ವಾ. ಸಾಮರ್ಥ್ಯದ ಸೌರ ಫಲಕ ಅಳವಡಿಸಲಾಗಿದೆ’ ಎಂದು ಡಿಎಲ್‌ಎಫ್‌ ವೆಸ್ಟೆಂಡ್ ಹೈಟ್ಸ್‌ ನಿವಾಸಿಗಳ ಸಂಘದ ಕಾರ್ಯದರ್ಶಿ ಕಾರ್ತಿಕೇಯ ಖನ್ನಾ ತಿಳಿಸಿದರು.

‘ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸುವ ಫೋಟೊವೊಲ್ಟಾಯಿಕ್ ಸೌರ ಫಲಕಗಳಲ್ಲಿನ ಪ್ರತಿ ಪ್ಯಾನಲ್‌ 450 ವಾಟ್‌ ವಿದ್ಯುತ್ ಉತ್ಪಾದಿಸುತ್ತದೆ. ಒಟ್ಟು 400 ಕಿಲೋ ವಾಟ್‌ ಸಾಮರ್ಥ್ಯದ ಸೌರ ಫಲಕದಿಂದ ವಾರ್ಷಿಕ 5.6 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ. ತಿಂಗಳಿಗೆ 47 ಸಾವಿರ ಯೂನಿಟ್‌ ಉತ್ಪಾದನೆಯಾಗುವುದರಿಂದ ತಿಂಗಳಿಗೆ ₹3.7 ಲಕ್ಷದಷ್ಟು ಉಳಿತಾಯವಾಗಲಿದೆ. ಹೆಚ್ಚುವರಿ ವಿದ್ಯುತ್ ಅನ್ನು ಪ್ರತಿ ಯೂನಿಟ್‌ಗೆ ₹3.07ರಂತೆ ಬೆಸ್ಕಾಂಗೆ ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ವಿದ್ಯುತ್ ಉಳಿತಾಯಕ್ಕಾಗಿ ಅಪಾರ್ಟ್‌ಮೆಂಟ್ ನಿವಾಸಿಗಳು ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದೇವೆ. ಅದರಲ್ಲಿ 1100ರಷ್ಟು 45 ವ್ಯಾಟ್ ಫ್ಲೊರೊಸೆಂಟ್ ಟ್ಯೂಬ್‌ಗಳ ಜಾಗದಲ್ಲಿ 20 ವಾಟ್‌ನ ಎಲ್‌ಇಡಿ ಬಲ್ಬ್‌ ಅಳವಡಿಸಲಾಗಿದೆ. ಮೂರು ಸಾವಿರದಷ್ಟು 12 ವಾಟ್‌ ಸಿಎಫ್‌ಎಲ್‌ ಜಾಗದಲ್ಲಿ 7ರಿಂದ 9 ಎಲ್‌ಇಡಿ ಬಲ್ಬ್‌ ಅಳವಡಿಸಲಾಗಿದೆ. ಸೋಡಿಯಂ ವೇಫರ್ಸ್‌ ಬೀದಿ ದೀಪಗಳ ಜಾಗದಲ್ಲಿ ಎಲ್‌ಇಡಿ ಹಾಕಲಾಗಿದೆ. ಮೆಟ್ಟಿಲುಗಳ ಬಳಿ ಚಲನವಲನ ಆಧರಿಸಿ ಹೊತ್ತಿಕೊಳ್ಳುವ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ. ಸೌರ ಫಲಕ ಅಳವಡಿಸಿದ ನಂತರ ಬೆಸ್ಕಾಂ ಶುಲ್ಕ ಶೂನ್ಯವಾಗಿದೆ. ಮೊದಲು ನಿತ್ಯ 4300 ಯೂನಿಟ್‌ನಷ್ಟು ವಿದ್ಯುತ್ ಬಳಕೆಯಾಗುತ್ತಿತ್ತು. ಆದರೆ ಈಗ ಸುಮಾರು ಮೂರು ಸಾವಿರ ಯೂನಿಟ್‌ನಷ್ಟು ವಿದ್ಯುತ್ ಬಳಕೆಯಾಗುತ್ತಿದೆ.

ವಾರ್ಷಿಕ 5.6 ಲಕ್ಷ ಯೂನಿಟ್‌ ವಿದ್ಯುತ್ ಉತ್ಪಾದನೆಯಂತೆ 25 ವರ್ಷದಲ್ಲಿ ಸುಮಾರು ₹10 ಕೋಟಿಯಷ್ಟು ವಿದ್ಯುತ್ ಶುಲ್ಕದ ಮೊತ್ತ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಉಳಿದಂತಾಗಲಿದೆ

– ಕಾರ್ತಿಕೇಯ ಖನ್ನಾ ಕಾರ್ಯದರ್ಶಿ ಡಿಎಲ್‌ಎಫ್‌ ವೆಸ್ಟೆಂಡ್ ಹೈಟ್ಸ್‌ ನಿವಾಸಿಗಳ ಸಂಘ

ಅಪಾರ್ಟ್‌ಮೆಂಟ್‌ಗಳಲ್ಲಿ ಸೌರ ಫಲಕ ಅಳವಡಿಸಿ ಇಂಧನ ಸ್ವಾವಲಂಬಿಯಾಗಲು ಬೆಸ್ಕಾಂ ಸದಾ ಜಾಗೃತಿ ಮೂಡಿಸುತ್ತಿದೆ. ಗ್ರಾಹಕರ ಸಭೆ ಹಾಗೂ ಅದಾಲತ್‌ಗಳಲ್ಲೂ ಈ ಕುರಿತು ಮಾಹಿತಿ ನೀಡಲಾಗುತ್ತಿದೆ.

– ಮಹಾಂತೇಶ ಬೀಳಗಿ ವ್ಯವಸ್ಥಾಪಕ ನಿರ್ದೇಶಕ ಬೆಸ್ಕಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT