ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಒಬ್ಬಂಟಿ ಹೋರಾಟ: ಬಾಲ್ಯ ವಿವಾಹ ತಪ್ಪಿಸಿಕೊಂಡ ಬಾಲೆ

8ನೇ ತರಗತಿ ವಿದ್ಯಾರ್ಥಿನಿಗೆ ಹಿಂಸೆ ನೀಡಿ ತಾಳಿ ಕಟ್ಟಿಸಲು ಯತ್ನ
Published : 6 ಜೂನ್ 2025, 23:30 IST
Last Updated : 6 ಜೂನ್ 2025, 23:30 IST
ಫಾಲೋ ಮಾಡಿ
0
ಒಬ್ಬಂಟಿ ಹೋರಾಟ: ಬಾಲ್ಯ ವಿವಾಹ ತಪ್ಪಿಸಿಕೊಂಡ ಬಾಲೆ

ಬಾಲ್ಯ ವಿವಾಹ

ಚಿತ್ರದುರ್ಗ: ತನ್ನ ಮದುವೆ ಮಾಡಲು ಹೊರಟ ಪಾಲಕರು ಮತ್ತು ಸಂಬಂಧಿಗಳ ವಿರುದ್ಧ ಬಾಲಕಿಯೊಬ್ಬಳು ದಿಟ್ಟತನದಿಂದ ಹೋರಾಡಿ, ಬಾಲ್ಯ ವಿವಾಹದಿಂದ ಪಾರಾಗಿರುವ ಘಟನೆ ಜಿಲ್ಲೆಯಲ್ಲಿ ಜೂನ್‌ 4ರಂದು
ನಡೆದಿದೆ.

ADVERTISEMENT
ADVERTISEMENT

ಚಳ್ಳಕೆರೆ ತಾಲ್ಲೂಕಿನ ಗ್ರಾಮ ವೊಂದರ, 8ನೇ ತರಗತಿ ವಿದ್ಯಾರ್ಥಿನಿ ಯನ್ನು ಆಕೆಯ ಸೋದರಮಾವನಿಗೆ ಕೊಟ್ಟು ಮದುವೆ ಮಾಡಲು ಪಾಲಕರು ಸಿದ್ಧತೆ ಮಾಡಿಕೊಂಡಿದ್ದರು. ಮದುವೆ ವಿಚಾರ ಮೊದಲು ಬಾಲಕಿಗೆ ತಿಳಿದಿ ರಲಿಲ್ಲ. ತನಗರಿವಿಲ್ಲದೆಯೇ ಮದುವೆ ಮಾಡಿಸುತ್ತಿರುವುದು ಗೊತ್ತಾಗುತ್ತಿ
ದ್ದಂತೆಯೇ ಬಾಲಕಿ ಪಾಲಕರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಳು.

‘ಅಪ್ಪಾ, ಅಮ್ಮಾ, ದೊಡ್ಡಪ್ಪ, ದೊಡ್ಡಮ್ಮ ನನಗೆ ಮದುವೆ ಬೇಡ. ತಾಳಿ ಕಟ್ಟಿಸಬೇಡಿ. ನನ್ನನ್ನು ಕಾಪಾಡಿ. ನಿಮ್ಮ ಕಾಲಿಗೆ ಬೀಳುತ್ತೇನೆ ರಕ್ಷಿಸಿ’ ಎಂದು 14 ವರ್ಷದ ಆ ಬಾಲಕಿ ಗೋಳಿಟ್ಟರೂ ಕಿವಿಗೊಡದ ಪಾಲಕರು, ಸಂಬಂಧಿಕರು ಆಕೆಯನ್ನು ಥಳಿಸಿ, ಹಿಂಸಿಸಿ, ನೆಲಕ್ಕೆ ಬೀಳಿಸಿ ಸೋದರ ಮಾವನಿಂದ ತಾಳಿ ಕಟ್ಟಿಸಲು ಯತ್ನಿಸಿದ್ದರು.

10–15 ಜನ ಹಿಡಿದಿದ್ದರೂ ದಿಟ್ಟತನ ಪ್ರದರ್ಶಿಸಿ ತಾಳಿ ಕಟ್ಟಿಸಿಕೊಳ್ಳುವುದರಿಂದ ಪಾರಾಗಿರುವ ಬಾಲಕಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ADVERTISEMENT

ತಾಳಿ ಕಟ್ಟಿಸುವ ಪ್ರಯತ್ನಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಬಾಲಕಿ ಅಳುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದಳು. ವರ ತಾಳಿಯನ್ನು ಕೈಯಲ್ಲಿ ಹಿಡಿದುಕೊಂಡೇ ಬಾಲಕಿಯನ್ನು ಹಿಂಬಾಲಿಸಿದ್ದ. ಬಾಲಕಿಯ ತಾಯಿ, ಸಂಬಂಧಿಕರು ಆಕೆಯನ್ನು ಹಿಡಿದು ಕೆಳಗೆ ಬೀಳಿಸಿದ್ದರು. ಒಂದು ಹಂತದಲ್ಲಿ ಆಕೆಯ ತಾಯಿ ಬಾಲಕಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಸಂಬಂಧಿಕರೆಲ್ಲರೂ ಬಡಿದಿದ್ದರು. ಬಾಲಕಿಯ ರಕ್ಷಣೆಗೆ ಬಂದ ಅಕ್ಕಪಕ್ಕದ ಮನೆಯವರ ಮೇಲೂ ಮುಗಿಬಿದ್ದಿದ್ದರು. ನೆಲದ ಮೇಲೆ ಬಿದ್ದ ಬಾಲಕಿಗೆ ತಾಳಿ ಕಟ್ಟುವಂತೆ ವರನಿಗೆ ತಾಕೀತು ಮಾಡಿದ್ದರು. ಈ ದೃಶ್ಯಗಳು ವಿಡಿಯೊದಲ್ಲಿವೆ.

ಹಲವರು ಬಿಗಿಯಾಗಿ ಹಿಡಿದಿದ್ದರೂ ಬಾಲಕಿ ಪ್ರತಿರೋಧ ಮುಂದುವರಿಸಿದ್ದಳು. ‘ಕಾಪಾಡಿ, ಉಸಿರು ಕಟ್ಟುತ್ತಿದೆ ಪ್ರಾಣ ಉಳಿಸಿ’ ಎಂದು ಬೇಡಿದ್ದಳು. ಇಷ್ಟಾದರೂ ಬಿಡದ ಸಂಬಂಧಿಕರು ತಾಳಿ ಕಟ್ಟಿಸಲು ಮುಂದಾಗಿದ್ದರು. ಅರ್ಧ ಗಂಟೆಗೂ ಹೆಚ್ಚು ಹೊತ್ತು ಹೋರಾಟ ಮಾಡುವ ಬಾಲಕಿ ಕಡೆಗೂ ಸಂಭವನೀಯ ‘ವಿವಾಹ ಬಂಧನ’ದಿಂದ ಮುಕ್ತವಾಗಿದ್ದಳು.

ಗ್ರಾಮದ ಕೆಲವರು ಘಟನೆಯ ವಿಡಿಯೊ ಮಾಡಿಕೊಂಡು ಚಳ್ಳಕೆರೆ ಪೊಲೀಸರಿಗೆ ಕಳುಹಿಸಿದ್ದರು. ಅಂದೇ ಸಂಜೆ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಬಾಲಕಿಯನ್ನು ರಕ್ಷಿಸಿ ನಗರದ ಬಾಲಮಂದಿರಕ್ಕೆ ಸೇರಿಸಿದ್ದಾರೆ.

‘ಓದು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಮುಂದಿದ್ದ ಬಾಲಕಿಗೆ ಇಷ್ಟು ಬೇಗ ಮದುವೆ ಬೇಕಿರಲಿಲ್ಲ. ಪಾಲಕರು ರಸಹ್ಯವಾಗಿ ಮದುವೆ ಮಾಡಲು ಯೋಜನೆ ರೂಪಿಸಿದ್ದರು. ಇದರ ವಿರುದ್ಧ ಏಕಾಂಗಿಯಾಗಿ ಹೋರಾಡಿದ್ದಾಳೆ’ ಎಂದು ಪೊಲೀಸ್‌ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಲ್ಯ ವಿವಾಹ ನಡೆಯದ್ದರಿಂದ ಯಾರ ವಿರುದ್ಧವೂ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಲ್ಲ. ಪಾಲಕರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಬಾಲಕಿ ಮೇಲೆ ದೈಹಿಕ ಹಲ್ಲೆ ಮಾಡಿರುವ ಕಾರಣ ಪಾಲಕರು, ವರ ಹಾಗೂ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0