ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಿಲಗದ್ದೆಯಲ್ಲಿ ಧರೆಗಿಳಿವ ತಾರಾ ಲೋಕ: ಹಾವೇರಿಯಲ್ಲಿ ರೈತನ ಮಗನಿಂದ ಆಸ್ಟ್ರೊ ಫಾರ್ಮ್‌!

ರೈತನ ಮಗ ನಿರಂಜನಗೌಡ ಖಾನಗೌಡ್ರ, ರಾಜ್ಯದ ಮೊದಲ ‘ಇಂಟರ್‌ಸ್ಟೆಲ್ಲರ್‌ ಆಸ್ಟ್ರೊಫಾರ್ಮ್‌’ ಸ್ಥಾಪಿಸಿ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ.
Published 12 ಜುಲೈ 2023, 0:51 IST
Last Updated 12 ಜುಲೈ 2023, 0:51 IST
ಅಕ್ಷರ ಗಾತ್ರ

ಹಾವೇರಿ: ಆಕಾಶದಲ್ಲಿ ಮಿನುಗುವ ನಕ್ಷತ್ರಗಳನ್ನು ಕುತೂಹಲದಿಂದ ನೋಡುತ್ತ ನಿದ್ದೆಗೆ ಜಾರುತ್ತಿದ್ದ ರೈತನ ಮಗ ನಿರಂಜನಗೌಡ ಖಾನಗೌಡ್ರ, ರಾಜ್ಯದ ಮೊದಲ ‘ಇಂಟರ್‌ಸ್ಟೆಲ್ಲರ್‌ ಆಸ್ಟ್ರೊಫಾರ್ಮ್‌’ ಸ್ಥಾಪಿಸಿ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಶಿಗ್ಗಾವಿ ತಾಲ್ಲೂಕಿನ ಕುನ್ನೂರು ಗ್ರಾಮದ ನಿರಂಜನಗೌಡ ಅವರು ದುಂಡಶಿ ಅರಣ್ಯ ವಲಯದ ಅಂಚಿನಲ್ಲಿರುವ ಹಳೇ ತರ್ಲಘಟ್ಟ ಸಮೀಪದ ‘ನವಿಲಗದ್ದೆ’ ಗುಡ್ಡದಲ್ಲಿರುವ 60 ಎಕರೆ ಜಮೀನಿನಲ್ಲಿ ಆಸ್ಟ್ರೊಫಾರ್ಮ್ ನಿರ್ಮಿಸುವ ಮೂಲಕ ₹40 ಲಕ್ಷ ವೆಚ್ಚದಲ್ಲಿ ‘ಖಗೋಳ ಪ್ರವಾಸೋದ್ಯಮ ಕೇಂದ್ರ’ ತೆರೆದಿದ್ದಾರೆ. ‘ನವಿಲಗದ್ದೆ’ ಗುಡ್ಡವು ಹುಬ್ಬಳ್ಳಿಯಿಂದ 40 ಕಿ.ಮೀ ಮತ್ತು ಮುಂಡಗೋಡದಿಂದ 10 ಕಿ.ಮೀ ಅಂತರದಲ್ಲಿದೆ.

ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಆಸ್ಟ್ರೊಫಿಸಿಕ್ಸ್‌) ಪೂರ್ಣಗೊಳಿಸಿರುವ ನಿರಂಜನಗೌಡ ಅವರು ನಕ್ಷತ್ರ ವೀಕ್ಷಣೆಗೆ ಬೆಳಕಿನ ಮಾಲಿನ್ಯ ಕಡಿಮೆ ಇರುವ ‘ನವಿಲಗದ್ದೆ’ ಸ್ಥಳ ಆಯ್ಕೆ ಮಾಡಿದ್ದಾರೆ. ಜನರಿಗೆ ತಾರೆಗಳ ಲೋಕ ಪರಿಚಯಿಸಲು 6 ದೂರದರ್ಶಕ ಉಪಕರಣಗಳು, ಮಸೂರಗಳು, ನೇತ್ರಕಗಳನ್ನು (ಐ ಪೀಸ್‌) ಖರೀದಿಸಿ ‘ಆಸ್ಟ್ರೋ ಫಾರ್ಮ್‌’ ಆರಂಭಿಸಿದ್ದಾರೆ. 

ಬಾರ್ಟಲ್‌ 2 ವಲಯ

ಅತಿಯಾದ ಕೃತಕ ಬೆಳಕು ಮತ್ತು ಹೊಗೆ, ದೂಳಿನಿಂದ ಉಂಟಾಗುವ ವಾಯು ಮಾಲಿನ್ಯದಿಂದ ‘ಬೆಳಕಿನ ಮಾಲಿನ್ಯ’ ಆಗುತ್ತದೆ. ಬೆಳಕಿನ ಮಾಲಿನ್ಯ ಅಳೆಯುವ ಮಾ‍‍ಪಕ ‘ಬಾರ್ಟಲ್‌’ ಪ್ರಕಾರ, ಬೆಂಗಳೂರಿನಲ್ಲಿ ಅತಿ ಹೆಚ್ಚು ಬೆಳಕು ಮತ್ತು ವಾಯುಮಾಲಿನ್ಯವಿದ್ದು ಬಾರ್ಟಲ್‌ 7 ರಿಂದ 8ರ ವಲಯದಲ್ಲಿ ಬರುತ್ತದೆ.

‘ಅರಣ್ಯ ಮತ್ತು ಶುಚಿ ಪರಿಸರವುಳ್ಳ ‘ನವಿಲಗದ್ದೆ’ಯು ಬಾರ್ಟಲ್‌–2 ವಲಯದಲ್ಲಿ ಬರುತ್ತದೆ. ರಾತ್ರಿ ವೇಳೆ ಆಕಾಶ ವೀಕ್ಷಣೆಗೆ ಪ್ರಶಸ್ತ ಸ್ಥಳ. ದೂರದರ್ಶಕ ಯಂತ್ರಗಳ ಮೂಲಕ ತಾರಾ ಮಂಡಲ, ಗ್ರಹಗಳು, ಚಂದ್ರ, ಕ್ಷುದ್ರಗ್ರಹಗಳು, ಧೂಮಕೇತು, ನಿಹಾರಿಕೆಗಳನ್ನು ಸ್ಪಷ್ಟವಾಗಿ ನೋಡಬಹುದು’ ಎಂದು ನಿರಂಜನಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಖಗೋಳ ಪ್ರವಾಸೋದ್ಯಮ

‘ಕೇಂದ್ರ ಸರ್ಕಾರ ಉತ್ತರಾಖಂಡದಲ್ಲಿ ಮೊದಲ ‘ಆಸ್ಟ್ರೊ ವಿಲೇಜ್‌’ ಸ್ಥಾಪಿಸಿದೆ. ಉತ್ತರ ಭಾರತದಲ್ಲಿ ಖಾಸಗಿ ಸಂಸ್ಥೆಯವರು ‘ನಕ್ಷತ್ರ ವೀಕ್ಷಣೆ’ (ಸ್ಟಾರ್‌ ಗೇಜಿಂಗ್‌) ಕಾರ್ಯಕ್ರಮ ಆಯೋಜಿಸುತ್ತಾರೆ. ರಾಜ್ಯದಲ್ಲಿ ‘ಖಗೋಳ ಪ್ರವಾಸೋದ್ಯಮ’ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂಬುದು ನನ್ನ ಕನಸು. ಇಲ್ಲಿನ ಆಸ್ಟ್ರೊಫಾರ್ಮ್‌ನಲ್ಲಿ ಇನ್ನಷ್ಟು ಉನ್ನತ ಮಟ್ಟದ ಟೆಲಿಸ್ಕೋಪ್‌ ಮತ್ತು ಮೌಂಟ್ಸ್‌ಗಳನ್ನು ಹಂತ–ಹಂತವಾಗಿ ಅಳವಡಿಸುವ ಉದ್ದೇಶವಿದೆ’ ಎಂದು ಹೇಳಿದರು.

ದೂರದರ್ಶಕ ಉಪಕರಣದಲ್ಲಿ ಆಕಾಶ ಕಾಯಗಳನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು 
ದೂರದರ್ಶಕ ಉಪಕರಣದಲ್ಲಿ ಆಕಾಶ ಕಾಯಗಳನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು 
ನಿರಂಜನಗೌಡ ಖಾನಗೌಡ್ರ
ನಿರಂಜನಗೌಡ ಖಾನಗೌಡ್ರ

ತಾರಾಲಯಗಳಲ್ಲಿ ಬಹುತೇಕ ಸಲ ಕೃತಕ ಮತ್ತು ಸಂಗ್ರಹಿಸಿದ ದೃಶ್ಯಗಳನ್ನು ತೋರಿಸಲಾಗುತ್ತದೆ. ಆದರೆ ಇಲ್ಲಿನ ದೂರದರ್ಶಕ ಉಪಕರಣಗಳ ಮೂಲಕ ನೇರವಾಗಿ ಆಕಾಶಕಾಯಗಳನ್ನು ವೀಕ್ಷಿಸಬಹುದು –-ನಿರಂಜನಗೌಡ ಖಾನಗೌಡ್ರ ಆಸ್ಟ್ರೊಫಾರ್ಮ್‌ ಸ್ಥಾಪಕ

ನಕ್ಷತ್ರ ವೀಕ್ಷಣೆ ಜೊತೆ ತಂಗಲು ವ್ಯವಸ್ಥೆ

‘ಆಸ್ಟ್ರೊಫಾರ್ಮ್ ಮೂಲಕ ನಕ್ಷತ್ರ ಮತ್ತು ಖಗೋಳ ವಿಸ್ಮಯಗಳನ್ನು ನೋಡಲು ಅಕ್ಟೋಬರ್‌ನಿಂದ ಮೇ ತಿಂಗಳು ಸೂಕ್ತ ಸಮಯ. ಮಳೆಗಾಲದಲ್ಲಿ ಮೋಡ ಮುಸುಕಿರುತ್ತದೆ. ನಕ್ಷತ್ರಗಳ ವೀಕ್ಷಣೆ ಆಗದು. ಸಂಜೆ 5.30ಕ್ಕೆ ಬರುವ ವೀಕ್ಷಕರಿಗೆ ಲಘು ಉಪಾಹಾರದ ವ್ಯವಸ್ಥೆ ಇರುತ್ತದೆ. ಸಂಜೆ 7ರಿಂದ ನಕ್ಷತ್ರ ವೀಕ್ಷಿಸಬಹುದು. ರಾತ್ರಿ ಗುಡ್ಡದಲ್ಲೇ ತಂಗಲು 40 ಕ್ಯಾಂಪಿಂಗ್‌ ಟೆಂಟ್‌ ಮತ್ತು 8 ಶೆಲ್ಟರ್‌ಗಳಿವೆ. ರಾತ್ರಿ ಊಟ ಇರುತ್ತದೆ. ಆರಂಭಿಕ ದಿನಗಳಲ್ಲಿ ಉಚಿತ ಪ್ರವೇಶವಿತ್ತು. ಈಗ ಟಿಕೆಟ್ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT