ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ ವರ್ಗದ ಇನ್ನೂ ನಾಲ್ಕು ಗಣಿಗಳ ಹರಾಜು

ಮೂರು ಗಣಿಗಳ ಮಾರಾಟ ಸ್ಥಗಿತ; ಒಂದರ ಪ್ರಕ್ರಿಯೆ ಮುಂದೂಡಿಕೆ
Last Updated 11 ಸೆಪ್ಟೆಂಬರ್ 2018, 18:58 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಾಪಕ ಅಕ್ರಮಗಳಿಂದಾಗಿ ವಿವಾದ ಸೃಷ್ಟಿಸಿದ್ದ ‘ಸಿ’ ಗುಂಪಿನ ಗಣಿಗಳ ಎರಡನೇ ಹಂತದ ಇ– ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ನಾಲ್ಕು ಗಣಿಗಳನ್ನು ಬಿಕರಿ ಮಾಡಲಾಗಿದೆ.

‘ಕಿರ್ಲೋಸ್ಕರ್‌ ಫೆರಸ್‌’ ಎರಡು, ‘ಜೆಎಸ್‌ಡಬ್ಲ್ಯು’ ಮತ್ತು ‘ಮಿನೆರಾ ಸ್ಟೀಲ್ಸ್‌’ ತಲಾ ಒಂದೊಂದು ಗಣಿಗಳನ್ನು ಖರೀದಿಸಿವೆ. ಈ ಕಂಪನಿಗಳು, ಅದಿರಿನ ರಾಜಧನದ ಮೇಲೆ ಪ್ರೀಮಿಯಂ ಕೂಡಾ ಪಾವತಿಸಲಿವೆ.

ಮಿನೆರಾ ಸ್ಟೀಲ್ಸ್‌’ ಪಾಲಾಗಿರುವ ಗಣಿಯಲ್ಲಿ ಹೆಚ್ಚು ಅದಿರಿದ್ದರೂ ಆರ್ಥಿಕವಾಗಿ ಲಾಭದಾಯಕವಲ್ಲದ್ದರಿಂದ ಕಡಿಮೆ ಬೆಲೆಗೆ ಮಾರಾಟವಾಗಿದೆ. ಅಲ್ಲದೆ, ಅದಿರು ಕಳಪೆ ಗುಣಮಟ್ಟದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

ಅದಿರು ದರವನ್ನು ‘ಇಂಡಿಯನ್‌ ಬ್ಯುರೊ ಆಫ್‌ ಮೈನ್ಸ್‌’ (ಐಬಿಎಂ) ಪ್ರತಿ ತಿಂಗಳು ನಿರ್ಧರಿಸಲಿದೆ. ಸಿ ಗುಂಪಿನಲ್ಲಿ 51 ಗಣಿಗಳಿದ್ದು, ಕಳೆದ ವರ್ಷ ಏಳು ಗಣಿಗಳನ್ನು ಹರಾಜು ಮಾಡಲಾಗಿತ್ತು. ಈಗ ಎಂಟು ಗಣಿಗಳ ಹರಾಜಿಗೆ ಟೆಂಡರ್‌ ಕರೆಯಲಾಗಿತ್ತು.

ಮೂರು ಗಣಿಗಳಿಗೆ ಮೂರಕ್ಕಿಂತ ಕಡಿಮೆ ಅರ್ಜಿಗಳು ಬಂದಿದ್ದರಿಂದ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು. ಇನ್ನೊಂದು ಗಣಿಯ ಹರಾಜು ತಾಂತ್ರಿಕ ಕಾರಣಗಳಿಂದ ಬುಧವಾರಕ್ಕೆ (ಸೆಪ್ಟೆಂಬರ್‌ 12) ಮುಂದೂಡಲಾಯಿತು. ಈ ಗಣಿಯಲ್ಲಿ 6 ಲಕ್ಷ ಟನ್‌ಗೂ ಅಧಿಕ ಅದಿರಿದ್ದು, ಬಿಡ್ಡುದಾರ ಕಂಪನಿಗಳ ನಡುವೆ ಪೈಪೋಟಿ ಏರ್ಪಡಬಹುದು ಎಂದು ನಿರೀಕ್ಷಿಸಲಾಗಿದೆ.

ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ವ್ಯಾಪಕವಾಗಿ ನಡೆದಿದ್ದ ಅಕ್ರಮ ಗಣಿಗಾರಿಕೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿತ್ತು. ಸುಪ್ರೀಂ ಕೋರ್ಟ್‌ ನೇಮಿಸಿದ್ದ ‘ಕೇಂದ್ರ ಉನ್ನತಾಧಿಕಾರ ಸಮಿತಿ’ (ಸಿಇಸಿ) 166ಗಣಿಗಳನ್ನು ಮೂರು ಗುಂಪಾಗಿ ವಿಂಗಡಿಸಿತ್ತು. ವ್ಯಾಪಕ ಅಕ್ರಮ ನಡೆದಿದ್ದ ಸಿ ಗುಂಪಿನ ಗಣಿಗಳ ಪರವಾನಗಿಗಳನ್ನು ರದ್ದುಪಡಿಸಿ, ಮುಚ್ಚಿಸುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಕೋರ್ಟ್‌ ಒಪ್ಪಿಕೊಂಡಿತ್ತು.

ಅತ್ಯಲ್ಪ ಪ್ರಮಾಣದಲ್ಲಿ ಅಕ್ರಮ ನಡೆದಿದ್ದ 45 ಗಣಿಗಳನ್ನು ‘ಎ’ ಗುಂಪಿನಲ್ಲಿ, ಶೇ 10ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಅಕ್ರಮ ಎಸಗಲಾಗಿದ್ದ 72 ಗಣಿಗಳನ್ನು ‘ಬಿ’ ಗುಂಪಿನಲ್ಲಿ ಇಡಲಾಗಿತ್ತು. ಎ ಹಾಗೂ ಬಿ ಗುಂಪಿನ ಗಣಿಗಳ ಪರವಾನಗಿ ನವೀಕರಿಸಿ, ಗಣಿಗಾರಿಕೆ ಆರಂಭಿಸಲು ಕೋರ್ಟ್‌ ಆದೇಶಿಸಿತ್ತು. ಆನಂತರ ಸಿ ವರ್ಗದ ಗಣಿಗಳನ್ನು ಹರಾಜು ಹಾಕುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಉಕ್ಕು ಕಾರ್ಖಾನೆ ಹೊಂದಿರುವ ಕಂಪೆನಿಗಳು ಹರಾಜಿನಲ್ಲಿ ಪಾಲ್ಗೊಳ್ಳಬೇಕು ಎಂಬ ಷರತ್ತು ವಿಧಿಸಿತ್ತು.

* * * *

ಸಿ ವರ್ಗದ ಗಣಿಗಳ ಹರಾಜಿನಿಂದ ನಿರೀಕ್ಷೆಗೂ ಮೀರಿ ಆದಾಯ ಬರಲಿದೆ. ಮೂರಕ್ಕಿಂತ ಕಡಿಮೆ ಅರ್ಜಿಗಳು ಬಂದಿದ್ದರಿಂದ ಹರಾಜು ಸ್ಥಗಿತಗೊಳಿಸಲಾಗಿದೆ

– ಪ್ರಸನ್ನ ಕುಮಾರ್‌, ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT