ಬೆಂಗಳೂರು: ಶಾಲಾ ಮಕ್ಕಳಿಗೆ ವಿದ್ಯಾ ವಿಕಾಸ್ ಯೋಜನೆಯಡಿ ಕಳಪೆ ಸಮವಸ್ತ್ರ ಪೂರೈಕೆ ಮಾಡಿರುವ ಆರೋಪದಡಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಮಲ್ಲೇಶ್ವರದಲ್ಲಿರುವ ಜವಳಿ ಆಯುಕ್ತರ ಸಹಾಯಕ ಬಿ. ಶ್ರೀಧರ್ ನಾಯಕ್ ಅವರು ಕಳಪೆ ಸಮವಸ್ತ್ರದ ಬಗ್ಗೆ ದೂರು ನೀಡಿದ್ದಾರೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್. ಮುದ್ದಯ್ಯ, ತಾಂತ್ರಿಕ ವ್ಯವಸ್ಥಾಪಕ ಬಿ.ಜಿ. ಶ್ರೀಧರ್ ಹಾಗೂ ಬಿ. ಲಕ್ಷ್ಮಣಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರವನ್ನು ವಂಚಿಸಿರುವ ಆರೋಪ ಅಧಿಕಾರಿಗಳ ಮೇಲಿದೆ. ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಸೂಕ್ತ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಲಾಗುವುದು’ ಎಂದು ತಿಳಿಸಿದರು.
2021–22ರಲ್ಲಿ ಅಕ್ರಮ:
‘ರಾಜ್ಯದ ಸರ್ಕಾರಿ ಶಾಲೆಗಳ 1ನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲ ಮಕ್ಕಳಿಗೆ ಎರಡು ಜೊತೆ ಶಾಲಾ ಸಮವಸ್ತ್ರ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆಯು 2021–22ನೇ ಸಾಲಿನಲ್ಲಿ ವಿದ್ಯಾ ವಿಕಾಸ್ ಯೋಜನೆಯಡಿ ಕಾರ್ಯಾದೇಶ ಹೊರಡಿಸಿತ್ತು’ ಎಂದು ಪೊಲೀಸರು ಹೇಳಿದರು.
‘ಕಾರ್ಯಾದೇಶ ಪಡೆದಿದ್ದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಗುಣಮಟ್ಟದ ಸಮವಸ್ತ್ರ ಪೂರೈಸಿರಲಿಲ್ಲ. ಕಳಪೆ ಸಮವಸ್ತ್ರ ಪೂರೈಸಿದ್ದರು. ಇತ್ತೀಚೆಗೆ ನಡೆಸಿದ್ದ ಆಂತರಿಕ ತನಿಖೆಯಲ್ಲಿ ಕೃತ್ಯ ಪತ್ತೆಯಾಗಿದೆ. ವಿಸ್ತ್ರತ ವರದಿ ಸಮೇತ ಜವಳಿ ಆಯುಕ್ತರ ಸಹಾಯಕರು ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
ಮಾರುಕಟ್ಟೆ ದರ ಪಡೆಯದೇ ಶೆಡ್ ಬಾಡಿಗೆ: ‘ಪೀಣ್ಯ 2ನೇ ಹಂತದಲ್ಲಿರುವ ಪ್ರಿಯದರ್ಶಿನಿ ಸಂಸ್ಕರಣಾ ಕೇಂದ್ರದ 2 ಎಕರೆ 34 ಗುಂಟೆ ಜಾಗದಲ್ಲಿ 7 ಕೈಗಾರಿಕೆ ಶೆಡ್‌ಗಳಿವೆ. ಮಾರುಕಟ್ಟೆ ದರಕ್ಕೆ ತಕ್ಕಂತೆ ಬಾಡಿಗೆ ದರ ನಿಗದಿ ಸಂಬಂಧ ಸಕ್ಷಮ ಪ್ರಾಧಿಕಾರದಿಂದ ವರದಿ ಪಡೆಯದ ಅಧಿಕಾರಿಗಳು, ಕಡಿಮೆ ದರಕ್ಕೆ 22 ವರ್ಷ ಬಾಡಿಗೆ ನೀಡಲು ಟೆಂಡರ್ ಕರೆದಿದ್ದರು’ ಎಂದು ಪೊಲೀಸರು ಹೇಳಿದರು.
‘ಅಲ್ಪಾವಧಿ ಟೆಂಡರ್ ಅಕ್ರಮದ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೂವರು ಅಧಿಕಾರಿಗಳು, ವ್ಯವಸ್ಥಿತ ಸಂಚು ರೂಪಿಸಿ ಸರ್ಕಾರಕ್ಕೆ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ತಿಳಿಸಿದರು.
undefined undefined
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.