ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನಿಪುರಿ, ಕಬಾಬ್‌ ಸೇರಿ ಎಲ್ಲ ರೀತಿಯ ಖಾದ್ಯಗಳಲ್ಲಿ ಕೃತಕ ಬಣ್ಣಕ್ಕೆ ನಿಷೇಧ: ಸಚಿವ

Published 11 ಮಾರ್ಚ್ 2024, 9:09 IST
Last Updated 11 ಮಾರ್ಚ್ 2024, 9:09 IST
ಅಕ್ಷರ ಗಾತ್ರ

ಬೆಂಗಳೂರು: ‘ಬಣ್ಣ ಬಳಸಿ ಮಾಡಿದ ಕಾಟನ್‌ ಕ್ಯಾಂಡಿಗಳನ್ನು ನಿಷೇಧಿಸಲಾಗುವುದು. ಬಣ್ಣ ರಹಿತ ಕಾಟನ್‌ ಕ್ಯಾಂಡಿ ತಯಾರಿಕೆಗೆ ನಿರ್ಬಂಧ ಇರುವುದಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅವರು ತಿಳಿಸಿದರು.

ಕಾಟನ್‌ ಕ್ಯಾಂಡಿಗೆ ದಟ್ಟ ಮತ್ತು ಆಕರ್ಷಕ ಬಣ್ಣ ಬರಲು ರೋಡಮೈನ್‌–ಬಿಯನ್ನು ಬಳಸಲಾಗುತ್ತದೆ. ಇದನ್ನು ಆಹಾರದಲ್ಲಿ ಬಳಸುವುದಕ್ಕೆ ನಿಷೇಧವಿದೆ. ಇದು ಕ್ಯಾನ್ಸರ್‌ಗೆ ಕಾರಣವಾಗುವ ಅಂಶವನ್ನು ಹೊಂದಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಗೋಬಿ ಮಂಚೂರಿ, ಪಾನಿಪುರಿ, ಕಬಾಬ್‌ ಸೇರಿ ಎಲ್ಲ ರೀತಿಯ ಖಾದ್ಯಗಳಲ್ಲಿ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಲಾಗುವುದು. ಬೀದಿ ಬದಿಯ ತಳ್ಳು ಗಾಡಿ ವ್ಯಾಪಾರಿಗಳಿಂದ ಹಿಡಿದು ಪಂಚ ತಾರಾ ಹೋಟೇಲ್‌ವರೆಗೂ ಆದೇಶ ಅನ್ವಯವಾಗುತ್ತದೆ. ಒಂದು ವೇಳೆ ಕಾನೂನು ಉಲ್ಲಂಘಿಸಿ ಆಹಾರ ಪದಾರ್ಥಗಳನ್ನು ತಯಾರಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ದಂಡ ಮತ್ತು ಜೈಲು ವಾಸವನ್ನೂ ಅನುಭವಿಸಬೇಕಾಗುತ್ತದೆ’ ಎಂದು ದಿನೇಶ್‌ ಹೇಳಿದರು.

‘ಗೋಬಿ ಮಂಚೂರಿ ಸೇರಿ ಯಾವುದೇ ಆಹಾರಗಳ ಮೇಲೆ ನಿಷೇಧ ವಿಧಿಸುವುದಿಲ್ಲ. ಆದರೆ ಇವುಗಳಿಗೆ ಬಳಸುವ ಕೃತಕ ಬಣ್ಣ ಮತ್ತು ರುಚಿಯನ್ನು ವರ್ಧಿಸಲು ಬಳಸುವ ರಾಸಾಯನಿಕಗಳನ್ನು ಬಳಸುವುದನ್ನು ನಿರ್ಬಂಧಿಸಲಾಗುವುದು. ಇವೆಲ್ಲ ಆಹಾರ ಪದಾರ್ಥಗಳಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಸಾರ್ವಜನಿಕರೂ ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದರು.

‘ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ವಿಭಾಗವು ನಿಯಮಿತವಾಗಿ ಎಲ್ಲ ರೀತಿಯ ಹೋಟೆಲ್‌ಗಳು, ಬೀದಿ ಬದಿ ತಳ್ಳುಗಾಡಿಗಳಲ್ಲಿನ ಆಹಾರ ಪದಾರ್ಥಗಳನ್ನು ಪರೀಕ್ಷೆ ನಡೆಸುತ್ತದೆ. ಈ ಕಾರ್ಯಕ್ಕಾಗಿ ಹೆಚ್ಚಿನ ಸಿಬ್ಬಂದಿ ನೇಮಿಸಿಕೊಳ್ಳಲಾಗುವುದು. ಇದಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ’ ಎಂದು ದಿನೇಶ್‌ ತಿಳಿಸಿದರು.

‘ರಾಜ್ಯದಾದ್ಯಂತ ಮಾರಾಟ ಮಾಡುತ್ತಿರುವ ಗೋಬಿ ಮಂಚೂರಿ, ಕಾಟನ್‌ ಕ್ಯಾಂಡಿಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಸಾಮಾನ್ಯ ಹೋಟೆಲ್‌ಗಳಲ್ಲದೇ ತ್ರಿಸ್ಟಾರ್‌ ಹೋಟೆಲ್‌ಗಳಲ್ಲೂ ಕೃತಕ ಬಣ್ಣಗಳನ್ನು ಬಳಸಿವೆ. ಸದ್ಯಕ್ಕೆ ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ನು ಮಾತ್ರ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ಆಹಾರ ಪದಾರ್ಥಗಳನ್ನೂ ಪರೀಕ್ಷೆಗ ಒಳಪಡಿಸಲಾಗುವುದು’ ಎಂದು ವಿವರಿಸಿದರು.

‘ರೋಡಮೈನ್‌–ಬಿ ಗೆ ಅಪಾಯಕಾರಿ’

ಕಾಟನ್‌ ಕ್ಯಾಂಡಿಯಲ್ಲಿ ಬಳಸುವ ರೋಡಮೈನ್‌–ಬಿ ಅತ್ಯಂತ ಅಪಾಯಕಾರಿ. ದಟ್ಟ ಗುಲಾಬಿ ಅಥವಾ ಇತರ ಬಣ್ಣ ನೀಡುವುದಕ್ಕಾಗಿ ಇದನ್ನು ಬಳಸುತ್ತಾರೆ. ಇದು ಕ್ಯಾನ್ಸರ್‌ಗೆ ಕಾರಣವಾಗುವುದರ ಜತೆಗೆ ಮಿದುಳು, ಮೂತ್ರಪಿಂಡ, ಹೃದಯಕ್ಕೂ ಹಾನಿ ಮಾಡಬಲ್ಲದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ವಿವರಿಸಿದರು.

ಇದಲ್ಲದೇ ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣಕ್ಕಾಗಿ ಬಳಸುವ ಟಾರ್‌ ಟ್ರಾಸೈನ್‌, ಸನ್‌ಸೆಟ್‌ ಯೆಲ್ಲೊ ಮತ್ತು ಕಾರ್ಮೊಸಿನ್‌ ಕೂಡ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಿದರು.

ರೋಡಮೈನ್‌ ಪ್ಯಾಕ್‌ ಮಾಡಿದ ಆಹಾರಗಳಿಗೆ ಸೀಮಿತ ಪ್ರಮಾಣದಲ್ಲಿ ಬಳಕೆ ಮಾಡಲು ಮಾತ್ರ ಅವಕಾಶ ಇದೆ. ಆದರೆ, ಮನೆ, ಹೋಟೆಲ್‌ ಮತ್ತು ಇತರ ಕಡೆಗಳಲ್ಲಿ ಬಳಸುವುದಕ್ಕೆ ಅನುಮತಿ ಇಲ್ಲ ಎಂದರು.

ಕೃತಕ ಬಣ್ಣ ಬಳಸಿದರೆ ಶಿಕ್ಷೆ ಏನು?

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006 ರ ನಿಯಮ 59 ರಡಿ 7 ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು ₹10 ಲಕ್ಷ ದಂಡ ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT