ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಭಾಗಗಳಾಗಿ ಬೆಂಗಳೂರು ಮರು ವಿಂಗಡಣೆ?

Published 10 ಜೂನ್ 2024, 20:18 IST
Last Updated 10 ಜೂನ್ 2024, 20:18 IST
ಅಕ್ಷರ ಗಾತ್ರ

ಬೆಂಗಳೂರು: ಪಾಲಿಕೆ ವ್ಯಾಪ್ತಿಯನ್ನು ಸರ್ಜಾಪುರ, ಎಲೆಕ್ಟ್ರಾನಿಕ್‌ ಸಿಟಿ ಸೇರಿದಂತೆ ಹೊರವಲಯದ ಹಲವು ಭಾಗಗಳಿಗೆ ವಿಸ್ತರಿಸಿ, ಐದು ಪಾಲಿಕೆಗಳನ್ನಾಗಿ ವಿಭಾಗಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ ಎಂದು ಬೆಂಗಳೂರು ಪಾಲಿಕೆಯನ್ನು ಐದು ಭಾಗ ಮಾಡಿ, ತಲಾ 80 ವಾರ್ಡ್‌ಗಳಾಗಿ ಮರು ವಿಂಗಡಿಸುವ ಕುರಿತು ಬೆಂಗಳೂರು ಕಾಂಗ್ರೆಸ್ ಶಾಸಕರ ನಿಯೋಗದ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಚರ್ಚೆ ನಡೆಸಿದರು.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಈ ಸಭೆ ನಡೆಯಿತು.

‘ನ್ಯಾಯಾಲಯದ ಆದೇಶ ಇರುವುದರಿಂದ ಯಾವುದೇ ನೆಪ ಮುಂದಿಟ್ಟು ಬಿಬಿಎಂಪಿ ಚುನಾವಣೆ ಮುಂದೂಡಲು ಅವಕಾಶ ಇಲ್ಲ. ಚುನಾವಣೆ ಮಾಡಲೇಬೇಕೆಂಬ ಒತ್ತಡವೂ ಇದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸಿ, ಈಗಾಗಲೇ ಮರು ವಿಂಗಡಿಸಿದಂತೆ 225 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಿತು’ ಎಂದು ಮೂಲಗಳು ಹೇಳಿವೆ.

ಬೆಂಗಳೂರು ಹೊರವಲಯ ಸಾಕಷ್ಟು ಬೆಳೆದಿದೆ. ಹೆಚ್ಚು ಆದಾಯವಿರುವ ಸರ್ಜಾಪುರ, ಎಲೆಕ್ಟ್ರಾನಿಕ್‌ ಸಿಟಿ ಭಾಗದ ಪ್ರದೇಶಗಳು ಬಿಬಿಎಂಪಿಯಿಂದ ಹೊರಗಿವೆ. ಈ ಪ್ರದೇಶಗಳನ್ನು ಬಿಬಿಎಂಪಿ ವ್ಯಾಪ್ತಿಗೆ ತಂದರೆ ಹೆಚ್ಚಿನ ತೆರಿಗೆ ಸಂಗ್ರಹಕ್ಕೂ ಅವಕಾಶವಾಗಲಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸಿ, ಐದು ವಿಭಾಗಗಳಾಗಿ ವಿಂಗಡಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕ್ಷೇತ್ರ ಮರು ವಿಂಗಡಣಾ ಸಮಿತಿ ಸಲಹೆ ನೀಡಿದೆ. ಈ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆದಿದೆ.

ಐದು ಭಾಗಗಳಾಗಿ ವಿಂಗಡಿಸುವ ಮತ್ತು ಮೀಸಲಾತಿ ನಿಗದಿಪಡಿಸುವ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್‌ನ ಮುಂದಿಡುವ ಬಗ್ಗೆಯೂ ಚರ್ಚೆ ನಡೆಯಿತು. ಆ ಮೂಲಕ, ಅಧಿಕಾರ ವಿಕೇಂದ್ರೀಕರಣಗೊಳಿಸಬಹುದು. ಈ ಉದ್ದೇಶದಿಂದ ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಬಗ್ಗೆಯೂ ಚರ್ಚೆ ನಡೆಯಿತು ಎಂದೂ ಗೊತ್ತಾಗಿದೆ.   

ಸಭೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್, ಶಾಸಕರಾದ ಎನ್‌.ಎ. ಹ್ಯಾರಿಸ್, ರಿಜ್ವಾನ್ ಅರ್ಷದ್, ಕೃಷ್ಣಪ್ಪ, ವಿಧಾನ ಪರಿಷತ್‌ ಸದಸ್ಯರಾದ ಯು.ಬಿ. ವೆಂಕಟೇಶ್, ಸುಧಾಮ ದಾಸ್, ನಾಗರಾಜ್ ಯಾದವ್, ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೆ. ಗೋವಿಂದರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT