ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಂಗ ಮಾರ್ಗ ಮರು ಟೆಂಡರ್‌ ₹189 ಕೋಟಿ ಲಾಭ ಯಾರಿಗೆ?

ಎತ್ತಿನ ಹೊಳೆ: ‘ಮೈತ್ರಿ’ ಅವಧಿಯಲ್ಲಿ ಅಕ್ರಮ ಆರೋಪ
Published : 17 ಅಕ್ಟೋಬರ್ 2019, 19:13 IST
ಫಾಲೋ ಮಾಡಿ
Comments

ಬೆಂಗಳೂರು: ಎತ್ತಿನಹೊಳೆ ಯೋಜನೆಗೆ ಸುರಂಗ ಮಾರ್ಗ ಮತ್ತು ಅಕ್ವಾಡಕ್ಟ್‌ ನಿರ್ಮಾಣದ ಕಾಮಗಾರಿ ಚಾಲ್ತಿಯಲ್ಲಿರುವಾಗಲೇ ಮರುಟೆಂಡರ್‌ ಕರೆದು, ಪುನಃ ಅದೇ ಕಂಪನಿಗೆ ಹೆಚ್ಚಿನ ಮೊತ್ತಕ್ಕೆ ಕಾಮಗಾರಿ ಟೆಂಡರ್‌ ನೀಡಿರುವುದು ಸಂಶಯಗಳಿಗೆ ಕಾರಣವಾಗಿದೆ.

‘ದೋಸ್ತಿ’ ಸರ್ಕಾರ ಲೋಕಸಭಾ ಚುನಾವಣೆಗೆ ಮೊದಲು,ಭಾಗಶಃ ಟೆಂಡರ್‌ ರದ್ದುಪಡಿಸುವ ನಿರ್ಣಯ ಸಂಶಯಕ್ಕೆ ಎಡೆಮಾಡಿದೆ. ಯಾವ ಕಂಪನಿಯ ಟೆಂಡರ್‌ ಮೊತ್ತ ಮತ್ತು ಕಾರ್ಯವೈಖರಿಯ ಬಗ್ಗೆ ತಕರಾರು ಎತ್ತಿ ಮೂಲ ಟೆಂಡರ್‌ ರದ್ದುಪಡಿಸಿ ಮರು ಟೆಂಡರ್‌ ಕರೆಯಲಾಗಿತ್ತೋ, ಬಳಿಕ ಅದೇ ಕಂಪನಿಗೆ ಹೆಚ್ಚಿನ ಮೊತ್ತಕ್ಕೆ ಟೆಂಡರ್‌ ನೀಡಲಾಯಿತು.

ಅಚ್ಚರಿ ಎಂದರೆ,ಮೂಲ ಟೆಂಡರ್‌ನ ₹335 ಕೋಟಿ ಮೊತ್ತದ ಕಾಮಗಾರಿ ಪೈಕಿ, ₹128 ಕೋಟಿ ಮೊತ್ತದ ಕಾಮಗಾರಿ ನಡೆಯುತ್ತಿದೆ.

ಈ ಸಮಯದಲ್ಲಿ ಮೂಲ ಟೆಂಡರ್‌ನ ₹200 ಕೋಟಿ ಮೊತ್ತದ ಟೆಂಡರ್‌ ಪ್ಯಾಕೇಜ್‌ ರದ್ದುಪಡಿಸಿ, ಈ ಮೊತ್ತವನ್ನು₹300.74 ಕೋಟಿಗೆ ಏರಿಕೆ ಮಾಡಿ, ಪರಿಷ್ಕೃತ ಟೆಂಡರ್ ಕರೆಯಲಾಯಿತು. ಅಂತಿಮವಾಗಿ ₹ 389 ಕೋಟಿಗೆ ಒಪ್ಪಿಗೆ ನೀಡಲಾಯಿತು. ಇದರಿಂದಾಗಿ ಈ ಕಾಮಗಾರಿಗೆ ಸುಮಾರು ₹189 ಕೋಟಿಯಷ್ಟು ಹೆಚ್ಚು ಮೊತ್ತಕ್ಕೆ ಟೆಂಡರ್ ನೀಡಿದಂತಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಮೂಲಗಳು ಹೇಳಿವೆ.

ಚುನಾವಣೆ ಸಂದರ್ಭದಲ್ಲಿ ಈ ರೀತಿ ಲಾಭ ಮಾಡಿಕೊಟ್ಟಿರುವ ಹಿಂದೆ ರಾಜಕೀಯ ದುರುದ್ದೇಶವಿದ್ದು, ಅಧಿಕಾರಿಗಳ ಮೇಲೆ ಒತ್ತಡ ಹೇರಿ ಈ ಕೆಲಸ ಮಾಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಯೋಜನೆಯ (ಅರಸೀಕರೆ ವ್ಯಾಪ್ತಿ) 0.000 ಕಿ.ಮೀ.ನಿಂದ 1.156 ಕಿ.ಮೀ.ವರೆಗೆ ಸುರಂಗ ನಿರ್ಮಾಣ ಮತ್ತು 5.440 ಕಿ.ಮೀ.ನಿಂದ 6.680 ಕಿ.ಮೀವರೆಗೆ ಅಕ್ವಾಡಕ್ಟ್‌( ನಾಲೆ) ನಿರ್ಮಿಸಲು ಟೆಂಡರ್‌ ನೀಡಲಾಗಿತ್ತು. ಬಳಿಕ ತಾಂತ್ರಿಕ ಕಾರಣಗಳನ್ನು ನೀಡಿ 2018 ರ ಡಿಸೆಂಬರ್‌ನಲ್ಲಿ ಪ್ಯಾಕೇಜ್‌ 1 ಎ ಕಾಮಗಾರಿಯನ್ನು ಹಿಂದಕ್ಕೆ ಪಡೆಯುವ ನಿರ್ಣಯವನ್ನು ವಿಶ್ವೇಶ್ವರಯ್ಯ ಜಲ ನೀರಾವರಿ ನಿಗಮ ತೆಗೆದುಕೊಂಡಿತು.

2016–17 ರಲ್ಲಿ ಸುರಂಗ ಮಾರ್ಗ ಮತ್ತು ಅಕ್ವಾಡಕ್ಟ್‌ ನಿರ್ಮಾಣಕ್ಕಾಗಿ ಶಂಕರನಾರಾಯಣ ಕನ್ಸ್‌ಸ್ಟ್ರಕ್ಷನ್‌ ಕಂಪನಿಗೆ ₹335 ಕೋಟಿ ಮೊತ್ತಕ್ಕೆ ಟೆಂಡರ್‌ ನೀಡಲಾಗಿತ್ತು. ಕಾಮಗಾರಿ ಅನುಷ್ಠಾನದ ಸಂದರ್ಭ ಐಟಂಗಳಲ್ಲಿ ಗಣನೀಯ ಬದಲಾವಣೆಗಳು ಆದ ಹಿನ್ನೆಲೆಯಲ್ಲಿ ಮುಖ್ಯ ಎಂಜಿನಿಯರ್‌ ಸಲ್ಲಿಸಿದ ಇಎಫ್‌ಐ ಪ್ರಸ್ತಾವನೆಯನ್ನು ನಿಗಮದ ಅಂದಾಜು ಪರಿಶೀಲನಾ ಸಭೆಯಲ್ಲಿ ಮಂಡಿಸಲಾಯಿತು. ಈ ಕುರಿತು ತಾಂತ್ರಿಕ ಸಮಿತಿ ಅಧ್ಯಯನ ನಡೆಸಿದಾಗ ಇಎಫ್‌ಐ ಮೊತ್ತವು ಗುತ್ತಿಗೆ ಮೊತ್ತಕ್ಕಿಂತ ಶೇ 50 ರಷ್ಟು ಹೆಚ್ಚಾಗಿರುವುದು ಕಂಡು ಬಂದಿತು. ಇದರಿಂದಾಗಿ ಮೂಲ ಕರಾರು ರದ್ದುಪಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಬಳಿಕ ಟೆಂಡರ್‌ ಕರೆದಾಗ ವಿಶ್ವೇಶ್ವರಯ್ಯ ಜಲ ನಿಗಮ ₹300.74 ಕೋಟಿ ಮೊತ್ತವನ್ನು ನಿಗದಿ ಮಾಡಿತ್ತು. ಇದರಲ್ಲಿ ಮೂವರು ಬಿಡ್ಡುದಾರರು ಪಾಲ್ಗೊಂಡಿದ್ದರು. ಈ ಪೈಕಿ ಶಂಕರನಾರಾಯಣ ಕನ್ಸಟ್ರಕ್ಷನ್‌ ಪ್ರವೇಟ್‌ ಲಿಮಿಟೆಡ್‌ ಮತ್ತು ಎಚ್‌ಇಎಸ್‌ ಇನ್ಫ್ರಾ ಪ್ರೈವೇಟ್‌ ಲಿಮಿಟೆಡ್‌ ತಾಂತ್ರಿಕ ಅರ್ಹತೆ ಪಡೆದಿದ್ದವು. ಅಂತಿಮವಾಗಿ ಶಂಕರ ನಾರಾಯಣ ಕನ್ಸ್‌ಸ್ಟ್ರಕ್ಷನ್‌ಗೆ ₹389.46 ಕೋಟಿಗೆ ಪರಿಷ್ಕೃತ ಟೆಂಡರ್‌ ನೀಡಲಾಯಿತು ಎಂದು ಮೂಲಗಳು ಹೇಳಿವೆ.

ಶಂಕರ ನಾರಾಯಣ ಕನ್ಸ್‌ಸ್ಟ್ರಕ್ಷನ್‌ ಕೋಟ್‌ ಮಾಡಿದ ಮೊತ್ತವು (₹389.46 ಕೋಟಿ) ಟೆಂಡರ್‌ ಮೊತ್ತಕ್ಕಿಂತ (₹300.74 ಕೋಟಿ) ಶೇ 26.87 ರಷ್ಟು ಹೆಚ್ಚು ಇತ್ತು. ಎಚ್‌ಇಎಸ್‌ ಇನ್ಫ್ರಾಗೆ (₹409.01 ಕೋಟಿ )ಹೋಲಿಸಿದರೆ ಕಡಿಮೆ ಮೊತ್ತವನ್ನು ಕೋಟ್‌ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT