ಬಾನು ಮುಷ್ತಾಕ್ ಅವರ ಕೃತಿಗೆ ‘ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ’ ಬಂದದ್ದು ಕರ್ನಾಟಕಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಹೆಮ್ಮೆಯ ಸಂಗತಿ. ಪ್ರಗತಿಪರ ಚಳವಳಿಗಳ ಸಂಗಾತಿಗೆ ಈ ಪ್ರಶಸ್ತಿ ಬಂದದ್ದು, ಮನಸ್ಸು ತುಂಬಿ ಬಂದಿದೆ. ಬಾನು ಮುಷ್ತಾಕ್ ಅವರು ಬಂಡಾಯ ಸಾಹಿತ್ಯ ಚಳವಳಿಯ ಮೂಲಕ ಬದ್ಧತೆಯಿಂದ ಬೆಳೆದು ಬಂದ ಲೇಖಕಿ ಎಂಬುದು ಮತ್ತಷ್ಟು ಹೆಮ್ಮೆಯ ಸಂಗತಿ. ಅವರ ಕಥನ ಸಾಹಿತ್ಯವು ಕನ್ನಡಕ್ಕೆ ಹೊಸ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿನ್ಯಾಸಗಳನ್ನು ಪರಿಚಯಿಸಿದೆ. ಬಹು ಸಂಸ್ಕೃತಿಗಳ ಭಾರತದ ಪ್ರತಿಪಾದಕರಾದ ಅವರು ನಮಗೆಲ್ಲ ಹೆಮ್ಮೆ ತಂದಿದ್ದಾರೆ.
ಹತ್ತು ಹಲವು ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಕನ್ನಡ ಸಾಹಿತ್ಯಕ್ಕೆ, ಕನ್ನಡ ಭಾಷೆಯ ಪ್ರಾಯೋಗಿಕತೆಗೆ ಮತ್ತು ಮಹಿಳಾ ಅಸ್ಮಿತೆಗೆ ಅವರು ನೀಡಿದ ಕೊಡುಗೆಗಳಿಗೆ ಸಂದ ಪುರಸ್ಕಾರವಿದು. ಸೋಲರಿಯದೆ, ದಿಟ್ಟತನದಿಂದ, ಛಲದಿಂದ ಮುಂದುವರಿದ ಅವರ ನಡೆ ನಾಡಿನ ಹಲವರಿಗೆ, ಅದರಲ್ಲೂ ಮಹಿಳೆಯರಿಗೆ ಮಾದರಿಯಾಗಿದೆ. ಧರ್ಮಾಂಧತೆ, ಮತಾಂಧತೆಗಳ ವಿಷ ಬಿತ್ತುತ್ತಿರುವ ಈ ಹೊತ್ತಿನಲ್ಲಿ ಈ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡ ಬಾನು ಅವರು ನಮ್ಮ ಹೆಮ್ಮೆ. ಇದೊಂದು ಐತಿಹಾಸಿಕ ನಡೆ ಮಾತ್ರವಲ್ಲ, ವಿಶ್ವಶಾಂತಿ ಮತ್ತು ಸೌಹಾರ್ದತೆಗೆ ಸಂದ ಜಯ.
– ಮೀನಾಕ್ಷಿ ಬಾಳಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ
ಕನ್ನಡ ಬಾನಿನಲ್ಲಿ ದೀಪ ಹಚ್ಚಿದ ಕನ್ನಡತಿಯರಾದ ನಿಮಗೆ ಸಾವಿರದ ಶರಣು. ಕನ್ನಡದ ಕೀರ್ತಿಯನ್ನು ದೂರದ ದೇಶದಲ್ಲಿ ಹಾಡಿ ಕೊಂಡಾಡಿದ್ದೀರಿ. ಹೀಗಳೆಯುವವರ ಮೂಗು ಮುರಿದಿದ್ದೀರಿ. ನಿಮ್ಮ ಈ ಸಾಧನೆಯಿಂದ ಮನಸ್ಸು, ದೇಹ ಪುಳಕಗೊಂಡಿದೆ. ಕಣ್ಣಾಲಿಗಳು ಒದ್ದೆಯಾಗಿವೆ. ಹೀಗೆ ಇನ್ನೂ ಉನ್ನತ ಶಿಖರವೇರುತ್ತಾ ಕೀರ್ತಿ ಪತಾಕೆ ಹಾರಿಸುತ್ತಿರಿ.