ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣಕ್ಕೆ ನಿಷ್ಠರಾಗಿ ಪರಿಷ್ಕರಣೆ: ಬರಗೂರು

ಬಸವಣ್ಣ, ಡಾ.ರಾಜ್‌, ರಾಯಣ್ಣ, ಮಾಸ್ತಿ ಪಾಠ ಸೇರ್ಪಡೆ ಕಮ್ಯುನಿಸ್ಟ್‌ ಹೇಗೆ?
Last Updated 24 ಜೂನ್ 2022, 20:16 IST
ಅಕ್ಷರ ಗಾತ್ರ

ಬೆಂಗಳೂರು: ‘ಕಂದಾಯ ಸಚಿವ ಆರ್‌.ಅಶೋಕ ಅವರು ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಅಸತ್ಯ ಹೇಳಿದ್ದಾರೆ. ನಾವು ಕಮ್ಯುನಿಸ್ಟರಾಗಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿಲ್ಲ. ಶಿಕ್ಷಣಕ್ಕೆ ನಿಷ್ಠರಾಗಿ ಮಾಡಿದೆವು. ಸಚಿವರು ಇನ್ನಾದರೂ ಮಿಥ್ಯಾರೋಪಗಳನ್ನು ನಿಲ್ಲಿಸಲಿ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

‘ಮರು ಪರಿಷ್ಕರಣೆಯನ್ನು ವಿರೋಧಿಸುತ್ತಿರುವ ಸಾಹಿತಿಗಳು ಮತ್ತು ಸಂಘಟನೆಗಳನ್ನು ಮಾತುಕತೆಗೆ ಕರೆದು ಪ್ರಜಾಸತ್ತಾತ್ಮಕ ನಡೆಗೆ ಮುಂದಾಗಬೇಕು’ ಎಂದೂ ಅವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.

‘ನಾವು ಬಸವಣ್ಣ, ಸಂಗೊಳ್ಳಿ ರಾಯಣ್ಣ, ಡಾ.ರಾಜ್‌ಕುಮಾರ್ ಅವರ ಪಾಠ ಸೇರಿಸಿದರೆ ಅದು ಕಮ್ಯುನಿಸ್ಟ್‌ ಪಠ್ಯವೇ? ಮಾಸ್ತಿ, ಅಡಿಗ, ಗೊರೂರು, ಮೂರ್ತಿರಾಯರು, ಲಂಕೇಶ್‌, ಸಾರಾ ಅಬೂಬಕ್ಕರ್, ಚೆನ್ನಣ್ಣ ವಾಲೀಕಾರ ಮುಂತಾದವರ ಬರಹಗಳನ್ನು ಹೊಸದಾಗಿ ಸೇರಿಸಿ ಸಮತೋಲನ ಸಾಧಿಸಿದರೆ ಅದು ಕಮ್ಯುನಿಸ್ಟ್‌ ಸಿದ್ಧಾಂತವೇ’ ಎಂದು ಬರಗೂರು ಪ್ರಶ್ನಿಸಿದ್ದಾರೆ.

ಬರಗೂರು ಸ್ಪಷ್ಟನೆ:

* ಮೈಸೂರು ಒಡೆಯರ ಕಾಲದ ವಿವರಗಳನ್ನು ನಾವು ಬಿಟ್ಟಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ವಾಸ್ತವದಲ್ಲಿ 6 ನೇ ತರಗತಿಯ ಸಮಾಜ ವಿಜ್ಞಾನದಲ್ಲಿದ್ದ ಪಾಠವನ್ನು ಹೆಚ್ಚು ವಿವರಗಳ ಸಮೇತ 7ನೇ ತರಗತಿಯ (ಭಾಗ–1 ಪುಟ 45 ರಿಂದ 58) ಪಠ್ಯಕ್ಕೆ ನಾವು ವರ್ಗಾಯಿಸಿದ್ದೆವು. ಇಡೀ ಅಧ್ಯಾಯವನ್ನು ಮರು ಪರಿಷ್ಕರಣೆಯಲ್ಲಿ ತೆಗೆದುಹಾಕಿ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ. ನಮ್ಮ ಪಾಠದಲ್ಲಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್‌, ಸರ್‌.ಎಂ.ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ಅವರ ಪೂರ್ಣ ವಿವರವನ್ನು ಮರುಪರಿಷ್ಕರಣೆಯಲ್ಲಿ ಕೈ ಬಿಟ್ಟಿದ್ದಾರೆ.

* ನಾಡಪ್ರಭು ಕೆಂಪೇಗೌಡರ ಪಾಠ ನಮ್ಮ ಪರಿಷ್ಕರಣೆ ಪಠ್ಯದಲ್ಲಿ ಇರಲಿಲ್ಲ ಎಂಬುದು ಸುಳ್ಳು. ನಾವು 7ನೇ ತರಗತಿಯ ಸಮಾಜ ವಿಜ್ಞಾನ (ಭಾಗ–1 ಪುಟ 43–44) ರಲ್ಲಿ ಎರಡು ಪುಟಗಳ ವಿವರಗಳನ್ನು ಕೊಟ್ಟಿದ್ದೆವು. ಮರು ಪರಿಷ್ಕರಣೆಯಲ್ಲಿ ಒಂದು ಪುಟಕ್ಕೆ ಇಳಿಸಿದ್ದಲ್ಲದೇ, ಕೆಂಪೇಗೌಡರ ಆಡಳಿತಕ್ಕೆ ರಾಮನಗರ, ಕೋಲಾರ ಮತ್ತು ತುಮಕೂರು ಭಾಗಗಳು ಒಳಪಟ್ಟಿದ್ದವೆಂದು ನಾವು ಕೊಟ್ಟಿದ್ದ ವಿವರವನ್ನು ತೆಗೆದು ಹಾಕಿದ್ದಾರೆ.

* ಪೋರ್ಚುಗೀಸರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕ ಪಾಠವನ್ನು ತೆಗೆದುಹಾಕಿದ್ದಾರೆ. ನಾವು 7 ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಹೊಸದಾಗಿ ಸೇರಿಸಿದ್ದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರನ್ನು ಕುರಿತ ಅಧ್ಯಾಯವನ್ನು ಕೈಬಿಟ್ಟಿದ್ದಾರೆ. ಇದರಲ್ಲಿ ರಾಣಿ ಅಬ್ಬಕ್ಕ, ಯಶೋಧರ ದಾಸಪ್ಪ, ಬಳ್ಳಾರಿ ಸಿದ್ದಮ್ಮ, ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಕುಂದಾಪುರ ಅವರ ಎಲ್ಲ ವಿವರಗಳನ್ನು ತೆಗೆದಿದ್ದಾರೆ.

*7 ನೇ ತರಗತಿಯ ಸಮಾಜ ವಿಜ್ಞಾನ ಭಾಗ–1 ರಲ್ಲಿ ಭಕ್ತಿಪಂಥ ಮತ್ತು ಸೂಫಿ ಪರಂಪರೆಯೆಂಬ ಅಧ್ಯಾಯದಲ್ಲಿದ್ದ ಅಕ್ಕಮಹಾದೇವಿ, ಶಿಶುನಾಳ ಶರೀಫ, ಪುರಂದರದಾಸ, ಕನಕದಾಸ ಎಲ್ಲ ವಿವರಗಳನ್ನು ತೆಗೆದು ಉತ್ತರ ಭಾರತದವರನ್ನು ಮಾತ್ರ ಉಳಿಸಿಕೊಂಡಿದ್ದಾರೆ. ಇದು ಕರ್ನಾಟಕದ ಅಸ್ಮಿತೆಗೆ ಮಾಡಿದ ಅನ್ಯಾಯ.

*ತಾವು ಮಾಡಿದ ಅಪಚಾರ ಗಳನ್ನು ಮರೆ ಮಾಚಲು ಕುವೆಂಪು ಅವರ 10 ಪಾಠಗಳನ್ನು ಹಾಕಿರುವುದನ್ನು ಮುಂದೆ ಮಾಡುತ್ತಿದ್ದಾರೆ. ನಾವು ಕುವೆಂಪು ಅವರು ಪ್ರತಿಪಾದಿಸಿದ ಅಖಂಡ ಕರ್ನಾಟಕತ್ವ ಮತ್ತು ಸರ್ವಜನಾಂಗದ ಶಾಂತಿಯ ತೋಟವೆಂಬ ಆದರ್ಶಕ್ಕೆ ಅನುಗುಣವಾಗಿ ಕರ್ನಾಟಕದ ಎಲ್ಲ ಭಾಗಗಳ ಬರಹಗಾರನ್ನು ಪ್ರಾತಿನಿಧಿಕವಾಗಿ ಸೇರಿಸಿದ್ದೇವೆ.

* ವೇದಕಾಲದ ಸಂಸ್ಕೃತಿ ಎಂಬ ಪಾಠವನ್ನು ತೆಗೆದುಹಾಕಿರುವ ಇವರು ಭಾರತೀಯ ಪರಂಪರೆಯ ಬಗ್ಗೆ ಮಾತನಾಡುವುದೇ ಒಂದು ವಿಚಿತ್ರ.

* ಡಾ.ಅಂಬೇಡ್ಕರ್‌ ಅವರ ವಿಚಾರಧಾರೆಗೆ ಸಾಕಷ್ಟು ಕತ್ತರಿ ಪ್ರಯೋಗ ಮಾಡಿದ್ದಾರೆ. ಅಂಬೇಡ್ಕರ್‌ ಮತ್ತು ಬುದ್ಧನ ಕುರಿತ ಪದ್ಯವನ್ನು ತೆಗೆದಿದ್ದಾರೆ.

ಸಿದ್ಧಗಂಗೆ, ಚುಂಚನಗಿರಿ ಮಠ ವಿವರಕ್ಕೆ ಕತ್ತರಿ

*ಸಿದ್ದಗಂಗೆ ಮತ್ತು ಆದಿಚುಂಚನಗಿರಿ ಮಠಗಳ ವಿವರಗಳನ್ನೂ ಒಂದೇ ಸಾಲಿಗೆ ಇಳಿಸಿ ಅನ್ಯಾಯ ಮಾಡಿದ್ದಾರೆ.

*ಹುಯಿಲಗೋಳ ನಾರಾಯಣರಾಯರು, ದೇವೇಗೌಡರು, ದೇವನೂರ ಮಹಾದೇವ ಅವರ ಚಿತ್ರಗಳನ್ನು ಕೈಬಿಟ್ಟಿದ್ದಾರೆ.

* ಕರ್ನಾಟಕದ ಏಕೀಕರಣ ವಿಷಯ ತಿಳಿಸುವಾಗ ಕುವೆಂಪು ಚಿತ್ರ ತೆಗೆದುಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT