ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಸಿ ನೀಡಿದ ನಂತರವೇ ತೆರಿಗೆ ವಿಧಿಸಬಹುದು: ಹೈಕೋರ್ಟ್‌

Published 19 ಡಿಸೆಂಬರ್ 2023, 16:20 IST
Last Updated 19 ಡಿಸೆಂಬರ್ 2023, 16:20 IST
ಅಕ್ಷರ ಗಾತ್ರ

ಬೆಂಗಳೂರು: ‘ನಿರ್ಮಾಣ ಕಾರ್ಯ ಪೂರ್ಣಗೊಳಿಸಿದ ನಂತರ ಕಟ್ಟಡಕ್ಕೆ ಸ್ವಾಧೀನಾನುಭವ ಪತ್ರ (ಒಸಿ) ನೀಡಿದ ನಂತರವಷ್ಟೇ ಆ ಕಟ್ಟಡಕ್ಕೆ ತೆರಿಗೆ ವಿಧಿಸಬಹುದು‘ ಎಂದು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಮೆಸರ್ಸ್ ಬಿ.ಎಂ.ಹ್ಯಾಬಿಟೇಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ 2018ರ ಫೆಬ್ರುವರಿ 15ರಂದು ನೀಡಿದ್ದ ನೋಟಿಸ್ ಅನ್ನು ರದ್ದುಗೊಳಿಸಿದೆ. ಅಂತೆಯೇ 2011ರ ಏಪ್ರಿಲ್ 25ರಿಂದ ಅನ್ವಯವಾಗುವಂತೆ ಅರ್ಜಿದಾರರಿಂದ ತೆರಿಗೆಯನ್ನು ಸ್ವೀಕರಿಸಿ ಎಂದು ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಕಟ್ಟಡ ನಿರ್ಮಾಣ ಕಾರ್ಯವನ್ನು 2010ರಲ್ಲಿ ಪೂರ್ಣಗೊಳಿಸಲಾಗಿದೆ. ಆದರೆ ಮಲ್ಟಿಪ್ಲೆಕ್ಸ್ ನಡೆಸಲು ಜಿಲ್ಲಾಧಿಕಾರಿ ನಿರಾಕ್ಷೇಪಣಾ ಪತ್ರ ವಿತರಿಸುವುದು ಮತ್ತು ಆಗ್ನಿ ಶಾಮಕ ದಳದ ಅನುಮೋದನೆ ಸಿಗುವುದು ತಡವಾಗಿದೆ. 2010ರ ಜುಲೈ 5ರಂದು ಸ್ವಾಧೀನಾನುಭವ ಪತ್ರ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಇದನ್ನು ಪಾಲಿಕೆ ಪರಿಗಣಿಸಿರಲಿಲ್ಲ. ಹೀಗಾಗಿ 2010ರ ಡಿಸೆಂಬರ್ 2ರಂದು ಮತ್ತೊಂದು ಅರ್ಜಿ ಸಲ್ಲಿಸಲಾಗಿತ್ತು‘ ಎಂದು ವಿವರಿಸಿದರು.

‘ಪಾಲಿಕೆ ಅಧಿಕಾರಿಗಳು ಕಟ್ಟಡದ ಪರಿಶೀಲನೆ ನಡೆಸಿ, 2011ರ ಏಪ್ರಿಲ್‌ 25ಕ್ಕೆ ಒಸಿ ವಿತರಿಸಿದ್ದಾರೆ. ನಿಯಮದಂತೆ ಆಸ್ತಿ ತೆರಿಗೆಯನ್ನು ಕಟ್ಟಡಕ್ಕೆ ಒಸಿ ನೀಡಿದ ನಂತರವೇ ವಿತರಿಸಬೇಕು. ಆದರೆ, ಪಾಲಿಕೆ ಹಿಂದಿನ ದಿನಾಂಕದಿಂದಲೇ ವಿತರಣೆ ಮಾಡುವಂತೆ ಡಿಮ್ಯಾಂಡ್ ನೋಟಿಸ್ ನೀಡಿದೆ. ಆದ್ದರಿಂದ ಅದನ್ನು ರದ್ದುಗೊಳಿಸಬೇಕು‘ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದನ್ನು ಆಕ್ಷೇಪಿಸಿದ ಪಾಲಿಕೆ ಪರ ವಕೀಲರು, ‘ಅರ್ಜಿದಾರರು ಕಟ್ಟಡ ನಿರ್ಮಾಣ ಪೂರ್ಣಗೊಂಡಿರುವ ದಿನಾಂಕವನ್ನು ತಪ್ಪಾಗಿ ನಮೂದಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದ್ದ ನಕ್ಷೆಯ ಅನುಮೋದನೆ 2008ರ ಜನವರಿ 17ರವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ಹಾಗಾಗಿ, ಕಟ್ಟಡ ನಿರ್ಮಾಣ ಕಾರ್ಯ 2008ರಲ್ಲೇ ಪೂರ್ಣಗೊಂಡಿದೆ‘ ಎಂದು ಪ್ರತಿಪಾದಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ‘ಕಟ್ಟಡಕ್ಕೆ ನಿರಾಕ್ಷೇಪಣ ಪತ್ರ ವಿತರಿಸಿರುವುದೇ 2010ರಲ್ಲಿ. ಹೀಗಾಗಿ, ಅರ್ಜಿದಾರರು ಮಾಲ್ ಅನ್ನು ಬಳಕೆ ಮಾಡಿಲ್ಲ. ಅರ್ಜಿದಾರರು ಒಸಿಗಾಗಿ ಮನವಿ ಸಲ್ಲಿಸಿದ್ದರೂ ಪಾಲಿಕೆ ಅದನ್ನು ಸಕಾಲದಲ್ಲಿ ಪರಿಗಣಿಸದೆ ವಿಳಂಬ ತೋರಿದೆ. ಕಟ್ಟಡ ಪೂರ್ಣಗೊಂಡ ಬಳಿಕ ಒಸಿ ವಿತರಣೆ ಮಾಡಿದ ನಂತರವೇ ತೆರಿಗೆ ವಿಧಿಸಬಹುದೇ ಹೊರತು ಮುಂಚಿತವಾಗಿ ಅಲ್ಲ. ಹೀಗಾಗಿ, ಬಿಬಿಎಂಪಿ ನೀಡಿದ್ದ ನೋಟಿಸ್ ರದ್ದುಗೊಳಿಸಲಾಗುತ್ತಿದೆ‘ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT