ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ; ಸೌಕರ್ಯಕ್ಕೆ ಮುಖ್ಯಮಂತ್ರಿಗೆ ಮೊರೆ

Published 12 ಜುಲೈ 2023, 20:19 IST
Last Updated 12 ಜುಲೈ 2023, 20:19 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಡುವೆ ಸ್ಥಳೀಯರಿಗೆ ಅನುಕೂಲವಾಗುವಂತೆ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮಂಡ್ಯ ಜಿಲ್ಲೆಯ ಶಾಸಕರಾದ ದಿನೇಶ್‌ ಗೂಳಿಗೌಡ, ರವಿಕುಮಾರ್‌ ಗಣಿಗ, ರಮೇಶ್ ಬಂಡಿಸಿದ್ದೇಗೌಡ  ಅವರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಹೆದ್ದಾರಿಯಲ್ಲಿ ಬರುವ ಸೇವಾ ರಸ್ತೆಗಳು ಸೇರಿದಂತೆ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಮೂಲಸೌಕರ್ಯ ಕಲ್ಪಿಸುವ ಮೊದಲೇ ಎರಡು ಕಡೆ ಟೋಲ್‌ ಸಂಗ್ರಹ ಮಾಡಲಾಗುತ್ತಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮಾರ್ಚ್‌ ತಿಂಗಳಲ್ಲಿ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಇದು ನಿಜಕ್ಕೂ ಜನರ ಜೇಬು ಸುಡುವ ರಹದಾರಿಯಾಗಿದೆ. ಈ ಮಾರ್ಗದಲ್ಲಿ ಜನರು ಟೋಲ್‌ ಶುಲ್ಕಕ್ಕೆ ಬಸವಳಿದಿದ್ದಾರೆ ಎಂದು ದೂರಿದರು.

ಶ್ರೀರಂಗಪಟ್ಟಣದಲ್ಲಿ ಜುಲೈ 1ರಿಂದ ಟೋಲ್ ಸಂಗ್ರಹ ಆರಂಭವಾಗಲಿದೆ. ಸಾಕಷ್ಟು ಕಾಮಗಾರಿಗಳು ಬಾಕಿ ಇವೆ. ಸೌಕರ್ಯ ಕಲ್ಪಿಸಲು ಆಗದೇ ಜನರಿಂದ ಹಣ ಪಡೆಯುತ್ತಿದ್ದಾರೆ. ಮಂಡ್ಯ ತಾಲ್ಲೂಕಿನ ಹನಕೆರೆ ಅಂಡರ್ ಪಾಸ್, ಹಳೇ ಬೂದನೂರು ಹಾಗೂ ಹೊಸ ಬೂದನೂರು ನಡುವಿನ ಸರ್ವಿಸ್ ರಸ್ತೆಗೆ ನಿರ್ಮಾಣ ಮಾಡುತ್ತಿರುವ ಸೇತುವೆ ಸೇರಿದಂತೆ ಹಲವು ಕಾಮಗಾರಿಗಳು ಅಪೂರ್ಣವಾಗಿವೆ. ಇನ್ನು ಹಲವು ಕಡೆ ಸರ್ವಿಸ್ ರಸ್ತೆ ಕಾಮಗಾರಿ ಸಹ ಪೂರ್ಣಗೊಂಡಿಲ್ಲ. ಈ ಹಂತದಲ್ಲಿ ಟೋಲ್ ಸಂಗ್ರಹ ಮಾಡುವುದು ಸರಿಯಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆ ಖಂಡನಾರ್ಹ ಎಂದರು.

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ, ಹೆದ್ದಾರಿ ಪ್ರಾಧಿಕಾರದ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT