ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೈಸೂರು ದಶಪಥ ಹೆದ್ದಾರಿ: ತಗ್ಗಿದ ಸಂಚಾರ ದಟ್ಟಣೆ, ಜನರ ನಿಟ್ಟುಸಿರು

ಪ್ರಯಾಣದ ಅವಧಿ 90 ನಿಮಿಷಕ್ಕೆ ಇಳಿಕೆ
Last Updated 11 ಮಾರ್ಚ್ 2023, 20:15 IST
ಅಕ್ಷರ ಗಾತ್ರ

ರಾಮನಗರ: ಬಹುನಿರೀಕ್ಷಿತ ಬೆಂಗಳೂರು–ಮೈಸೂರು ದಶಪಥಗಳ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಮಂಡ್ಯದಲ್ಲಿ ಭಾನುವಾರ ಉದ್ಘಾಟಿಸಲಿದ್ದಾರೆ. ಇದರೊಟ್ಟಿಗೆ ಕೆಲವು ಅಪೂರ್ಣ ಕಾಮಗಾರಿಗಳೂ ಪೂರ್ಣಗೊಂಡು ಇದೊಂದು ಸುಸಜ್ಜಿತ ಹೆದ್ದಾರಿ ಆಗಲಿ ಎನ್ನುವುದು ಈ ಭಾಗದ ಪ್ರಯಾಣಿಕರ ಆಶಯವಾಗಿದೆ.

ರಾಜ್ಯದ ಮೊದಲ ನಿಯಂತ್ರಿತ ಎಕ್ಸ್‌ಪ್ರೆಸ್‌ ವೇ ಎಂಬ ಖ್ಯಾತಿ ಈ ರಸ್ತೆಯದ್ದು. ಹತ್ತು ಪಥಗಳ ಪೈಕಿ ಆರು ಪಥದ ಎಕ್ಸ್‌ಪ್ರೆಸ್‌ವೇನಿಂದಾಗಿ ವಾಹನಗಳ ವೇಗ ಹೆಚ್ಚಿದ್ದು, ಬೆಂಗಳೂರು–ಮೈಸೂರು ನಡುವಿನ ಪ್ರಯಾಣದ ಅವಧಿ 3 ಗಂಟೆಯಿಂದ ಸರಾಸರಿ 90 ನಿಮಿಷಕ್ಕೆ ಇಳಿಕೆಯಾಗಿದೆ. 52 ಕಿ.ಮೀ. ಉದ್ದದ ಹೊಸ ಬೈಪಾಸ್‌ ರಸ್ತೆ ನಿರ್ಮಾಣದಿಂದಾಗಿ ನಗರಗಳಲ್ಲಿನ ಸಂಚಾರ ದಟ್ಟಣೆ ತಗ್ಗಿ ಪ್ರಯಾಣಿಕರು ನಿಟ್ಟುಸಿರು ಬಿಡುವಂತೆ ಆಗಿದೆ.

ಇಷ್ಟೆಲ್ಲ ಅನುಕೂಲ ಇರುವ ಹೆದ್ದಾರಿ ಕಾಮಗಾರಿಗಳು ಅಪೂರ್ಣವಾಗಿರುವಾಗಲೇ ಉದ್ಘಾಟಿಸಲಾಗುತ್ತಿದೆ. ಬೆಂಗಳೂರು–ಮೈಸೂರು ನಡುವಿನ 117 ಕಿ.ಮೀ. ಪೈಕಿ ಬೆಂಗಳೂರಿನ ನೈಸ್‌ ರಸ್ತೆ ಜಂಕ್ಷನ್‌ನಿಂದ ಮದ್ದೂರು ತಾಲ್ಲೂಕಿನ ನಿಡಘಟ್ಟವರೆಗಿನ ಮೊದಲ ಹಂತದ ಕಾಮಗಾರಿಗಳು ಶೇ 95ರಷ್ಟು ಪೂರ್ಣಗೊಂಡಿದ್ದರೆ, ನಿಡಘಟ್ಟದಿಂದ ಮೈಸೂರಿನ ಮಣಿಪಾಲ್‌ ಆಸ್ಪತ್ರೆ ಜಂಕ್ಷನ್‌ವರೆಗಿನ ಎರಡನೇ ಹಂತದ ಕಾಮಗಾರಿ ಇನ್ನೂ ಶೇ 15–20ರಷ್ಟು ಬಾಕಿ ಇರುವುದಾಗಿ ಅಧಿಕಾರಿಗಳೇ ಹೇಳುತ್ತಾರೆ.

ಪ್ರವೇಶ–ನಿರ್ಗಮನದ ವ್ಯವಸ್ಥೆ ಇಲ್ಲ: ಹೆದ್ದಾರಿ ಮಧ್ಯೆ ಬರುವ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ನಗರಗಳಿಗೆ ಎಕ್ಸ್‌ಪ್ರೆಸ್‌ವೇ ನಿಂದ ಪ್ರವೇಶ–ನಿರ್ಗಮನ ದ್ವಾರಗಳು ಇನ್ನೂ ನಿರ್ಮಾಣವಾಗಿಲ್ಲ. ಆರು ನಗರಗಳಿಗೆ ಪ್ರವೇಶ–ನಿರ್ಗಮನದ ಸಂಬಂಧ ಪ್ರಾಧಿಕಾರವು ಒಟ್ಟು ₹1201 ಕೋಟಿ ಮೊತ್ತದ ಯೋಜನೆಯ ಪ್ರಸ್ತಾವ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಇನ್ನೂ ಒಪ್ಪಿಗೆ ನೀಡಿಲ್ಲ.

ಈ ಮೊದಲು 117 ಕಿ.ಮೀ. ಉದ್ದದ ಹೆದ್ದಾರಿಗೆ ಒಂದೇ ಪ್ರವೇಶ ಮತ್ತು ನಿರ್ಗಮನ ದ್ವಾರ ನೀಡಿ ಎಕ್ಸ್‌ಪ್ರೆಸ್‌ ವೇ ಅನ್ನು ವಿನ್ಯಾಸಗೊಳಿಸಲಾಗಿತ್ತು. ಆದರೆ ಈ ಮಾರ್ಗ ಮಧ್ಯದಲ್ಲಿನ ನಗರಗಳ ಪ್ರಯಾಣಿಕರಿಗೂ ಓಡಾಟಕ್ಕೆ ಅವಕಾಶ ನೀಡಬೇಕು ಎಂಬ ಒತ್ತಾಯದ ಹಿನ್ನೆಲೆಯಲ್ಲಿ ಒಟ್ಟು 16 ಕಡೆಗಳಲ್ಲಿ ನೈಸ್ ರಸ್ತೆ ಮಾದರಿಯಲ್ಲಿ ಎಂಟ್ರಿ–ಎಕ್ಸಿಟ್ ಟೋಲ್‌ಗೆ ಪ್ರಸ್ತಾವ ಸಲ್ಲಿಕೆ ಆಗಿದೆ. ಕೇಂದ್ರ ಅನುಮತಿ ನೀಡಿದ ಬಳಿಕವಷ್ಟೇ ಭೂಸ್ವಾಧೀನ ಮತ್ತಿತರ ಪ್ರಕ್ರಿಯೆಗಳು ಆರಂಭ ಆಗಬೇಕಿದೆ.

ಸರ್ವೀಸ್ ರಸ್ತೆ ಅಪೂರ್ಣ: ಎಕ್ಸ್‌ಪ್ರೆಸ್‌ ವೇನ ಎರಡೂ ಬದಿಯಲ್ಲಿ ತಲಾ ಎರಡು ಪಥಗಳ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿ ಅಲ್ಲಲ್ಲಿ ಅಪೂರ್ಣವಾಗಿದೆ. ಮೊದಲ ಹಂತದಲ್ಲಿ ಬಿಡದಿಯ ಶೇಷಗಿರಿಹಳ್ಳಿ, ಹೆಜ್ಜಾಲ ಬಳಿ ಹಾಗೂ ಎರಡನೇ ಹಂತದಲ್ಲಿ ಮಂಡ್ಯದ ಬೂದನೂರು ಸೇರಿದಂತೆ ಹಲವಡೆ ಕಾಮಗಾರಿ ನಡೆಯುತ್ತಿದೆ. ಕಳೆದ ಮಳೆಗಾಲದಲ್ಲಿ ಹೆದ್ದಾರಿಗೆ ಮಳೆ ನೀರು ನುಗ್ಗಿ ಅವಾಂತರವಾಗಿತ್ತು. ನಂತರದಲ್ಲಿ ಮಳೆನೀರು ಚರಂಡಿಗಳನ್ನು ವೈಜ್ಞಾನಿಕವಾಗಿ ಮರು ವಿನ್ಯಾಸಗೊಳಿಸುವ ಕಾರ್ಯ ನಡೆದಿಲ್ಲ.

ಬೈಪಾಸ್‌ ರಸ್ತೆಗಳಲ್ಲಿ ಸುರಕ್ಷತೆಯ ಕೊರತೆಯಿಂದಾಗಿ ರಾತ್ರಿ ಹೊತ್ತು ಹೊಸ ರಸ್ತೆಯಲ್ಲಿ ಪ್ರಯಾಣಿಕರು ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಎಲ್ಲಿಯೂ ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಸದ್ಯ ಎರಡು ಕಿ.ಮೀ.ಗೆ ಒಂದರಂತೆ ಕೃತಕ ಬುದ್ದಿಮತ್ತೆ ಸಾಮರ್ಥ್ಯವುಳ್ಳ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಗಸ್ತು ವ್ಯವಸ್ಥೆ ಇನ್ನೂ ಆರಂಭ ಆಗಿಲ್ಲ.

ಬೈಪಾಸ್ ಮಧ್ಯೆ ವಾಹನ ಕೆಟ್ಟು ನಿಂತರೆ, ಪೆಟ್ರೋಲ್‌–ಡೀಸೆಲ್‌ ಖಾಲಿ ಆದರೆ, ವಾಹನ ಪಂಕ್ಚರ್‌ ಆದರೆ ಕಡುಕಷ್ಟ. ಎಲ್ಲಿಯೂ ಪೆಟ್ರೋಲ್‌ ಬಂಕ್‌ ಸಿಗುವುದಿಲ್ಲ. ತುರ್ತು ಸಂದರ್ಭಗಳಲ್ಲಿ ವಾಹನಗಳು ಸರ್ವೀಸ್‌ ರಸ್ತೆಗೆ ಹೊರಳಿಕೊಳ್ಳಲು ಅವಕಾಶ ಇಲ್ಲ. ಹೆದ್ದಾರಿ ಬದಿಯಲ್ಲಿ ಶೌಚಾಲಯ, ಹೋಟೆಲ್‌, ಆಸ್ಪತ್ರೆ, ಸರ್ವೀಸ್ ರಸ್ತೆಗಳಲ್ಲಿ ಬಸ್ ತಂಗುದಾಣ ಮೊದಲಾದ ಸೌಕರ್ಯಗಳು ಆಗಬೇಕಿದೆ.

ರಾಮನಗರ–ಚನ್ನಪಟ್ಟಣ ನಡುವೆ ದ್ವೀಪದ ಮಾದರಿಯಲ್ಲಿ 50 ಎಕರೆ ಪ್ರದೇಶದಲ್ಲಿ ರೆಸ್ಟ್‌ ಏರಿಯಾ ನಿರ್ಮಿಸಲು ಉದ್ದೇಶಿಸಿದ್ದು, ಅದಕ್ಕಿನ್ನೂ ಚಾಲನೆ ದೊರೆತಿಲ್ಲ.

ಟೋಲ್‌ ಸಂಗ್ರಹ ಮುಂದೂಡಲು ಒತ್ತಾಯ
ಫೆಬ್ರುವರಿ 28ರಿಂದಲೇ ಹೆದ್ದಾರಿಯ ಕಣಮಿಣಕಿ ಹಾಗೂ ಶೇಷಗರಿಹಳ್ಳಿ ಟೋಲ್‌ ಪ್ಲಾಜಾಗಳಲ್ಲಿ ಟೋಲ್‌ ಸಂಗ್ರಹಕ್ಕೆ ಪ್ರಾಧಿಕಾರ ಮುಂದಾಗಿದ್ದು, ಜನರ ವಿರೋಧದ ಕಾರಣಕ್ಕೆ ಅದನ್ನು ಮಾ. 14ಕ್ಕೆ ಮುಂದೂಡಿದೆ. ಹೆದ್ದಾರಿಯ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಂಡು, ಮೂಲ ಸೌಕರ್ಯಗಳನ್ನು ಕಲ್ಪಿಸುವವರೆಗೂ ಟೋಲ್‌ ಹಾಕಬಾರದು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ. ಪ್ರಾಧಿಕಾರವು ಸದ್ಯ ಪ್ರಕಟಿಸಿರುವ ಟೋಲ್‌ ದರ ಕೂಡ ದುಬಾರಿ ಆಗಿದ್ದು, ಪರಿಷ್ಕೃತ ದರ ಪ್ರಕಟಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಎಕ್ಸ್‌ಪ್ರೆಸ್‌ ವೇ ವಿಶೇಷ

* ರಾಜ್ಯದ ಮೊದಲ ಆಕ್ಸಸ್‌ ಕಂಟ್ರೋಲ್ಡ್‌ ಹೈವೆ

* ಹೆದ್ದಾರಿಯಲ್ಲಿಯೇ ಹೆಲಿಕಾಪ್ಟರ್ ಇಳಿಯುವ ವ್ಯವಸ್ಥೆ

* ದ್ವಿಚಕ್ರ– ತ್ರಿಚಕ್ರ ವಾಹನಗಳಿಗೆ ಎಕ್ಸ್‌ಪ್ರೆಸ್‌ವೇನಲ್ಲಿ ನಿರ್ಬಂಧ

* ಎಕ್ಸ್‌ಪ್ರೆಸ್‌ವೇನ ಎರಡೂ ಬದಿ 7 ಅಡಿ ಎತ್ತರದ ತಂತಿಬೇಲಿ

* ಪ್ರಯಾಣದ ಅವಧಿ 3 ಗಂಟೆಯಿಂದ 90 ನಿಮಿಷಕ್ಕೆ ಇಳಿಕೆ

ಹೆದ್ದಾರಿ: ಏನೇನು ಬೇಕು?

* ನಗರಗಳಿಗೆ ಪ್ರವೇಶ – ನಿರ್ಗಮನ ವ್ಯವಸ್ಥೆ

* ನಿರಂತರ ಹೈವೆ ಪೆಟ್ರೋಲಿಂಗ್‌ (ಗಸ್ತು) ವ್ಯವಸ್ಥೆ

* ಪೆಟ್ರೋಲ್‌ ಬಂಕ್‌, ಆಸ್ಪತ್ರೆ, ಶೌಚಾಲಯಗಳ ನಿರ್ಮಾಣ

* ಹೆದ್ದಾರಿ ಆಸುಪಾಸು ಹೋಟೆಲ್‌ಗಳ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT