ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ವಿವಿ: ಅನ್ನಪೂರ್ಣ, ಅನುರಾಧಾಗೆ ತಲಾ ಒಂಬತ್ತು ಚಿನ್ನ

ಸಿದ್ಧ ತಿನಿಸುಗಳ ವಿತರಕ, ಖಾಸಗಿ ಕಂಪನಿ ಉದ್ಯೋಗಿ ಪುತ್ರಿಯರ ಸಾಧನೆ
Published : 9 ಸೆಪ್ಟೆಂಬರ್ 2024, 22:56 IST
Last Updated : 9 ಸೆಪ್ಟೆಂಬರ್ 2024, 22:56 IST
ಫಾಲೋ ಮಾಡಿ
Comments

ಬೆಂಗಳೂರು: ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಸಿದ್ಧ ಆಹಾರ ವಿತರಣೆ ಮಾಡುವ ಕುಟುಂಬದ ಕುಡಿ ಎಸ್‌. ಅನ್ನಪೂರ್ಣ ಅವರು ಬೆಂಗಳೂರು ವಿಶ್ವವಿದ್ಯಾಲಯದ ಒಂಬತ್ತು  ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ರಸಾಯನಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಮೊದಲ ರ್‍ಯಾಂಕ್‌ ಪಡೆದ ಅವರು ಒಂಬತ್ತು ಚಿನ್ನದ ಪದಕಗಳ ಜೊತೆಗೆ ಎರಡು ನಗದು ಬಹುಮಾನಕ್ಕೂ ಪಾತ್ರರಾಗಿದ್ದಾರೆ.

ಕೆ.ಎಲ್‌. ಸೋಮಶೇಖರ್–ಎನ್‌. ಲಲಿತಾ ದಂಪತಿಯ ಐವರು ಮಕ್ಕಳಲ್ಲಿ ಅನ್ನಪೂರ್ಣ ಹಿರಿಯ ಮಗಳು. ಬೆಂಗಳೂರಿನಲ್ಲಿ ಸಿದ್ಧವಾಗುವ ಪೂರಿ, ಪರೋಟಗಳನ್ನು ತರಿಸಿ, ಸ್ಥಳೀಯ ಹೋಟೆಲ್‌, ಅಂಗಡಿಗಳಿಗೆ ವಿತರಿಸುವ ಕೆಲಸ ಮಾಡುತ್ತಾರೆ. ಆರ್ಥಿಕ ಸಂಕಷ್ಟದ ಮಧ್ಯೆಯೂ ಐವರು ಮಕ್ಕಳಿಗೆ ಉತ್ತಮ ಕೊಡಿಸಲು ಶ್ರಮಿಸುತ್ತಿದ್ದಾರೆ.

‘ಸ್ನಾತಕೋತ್ತರ ಪದವಿಯ ನಂತರ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದೆ. ಈಗ ಕೆಲಸ ಬಿಟ್ಟು ಪಿಎಚ್‌.ಡಿಗೆ ಪ್ರವೇಶಕ್ಕೆ ಸಿದ್ಧತೆ ನಡೆಸಿರುವೆ. ಸರ್ಕಾರಿ ಕೆಲಸಕ್ಕೆ ಸೇರಿ ತಂಗಿಯರು, ತಮ್ಮನ್ನು ಓದಿಸುವ ಜವಾಬ್ದಾರಿ ತೆಗೆದುಕೊಳ್ಳುವೆ’ ಎನ್ನುತ್ತಾರೆ ಅನ್ನಪೂರ್ಣ. 

ಅನುರಾಧಾಗೂ ಒಂಬತ್ತು ಚಿನ್ನ:

ಖಾಸಗಿ ಕಂಪನಿ ಉದ್ಯೋಗಿ, ನೆಲಮಂಗಲ ತಾಲ್ಲೂಕು ಗೂಳಾಪುರದ ಆರ್. ಮಂಜುನಾಥ್‌ ಅವರ ಪುತ್ರಿ ಎಂ. ಅನುರಾಧಾ ಅವರು ಬಿ.ಎಸ್‌ಸಿ ಪದವಿಯಲ್ಲಿ ಒಂಬತ್ತು ಚಿನ್ನ, ಏಳು ನಗದು ಬಹುಮಾನ ಪಡೆದಿದ್ದಾರೆ. ಬೆಂಗಳೂರಿನ ಜಿಂದಾಲ್‌ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿ ಅನುರಾಧಾ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರದಲ್ಲಿ ಎಂ.ಎಸ್‌ಸಿ ಸೇರಿದ್ದಾರೆ.

‘ಅಪ್ಪ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದರೆ, ಅಮ್ಮ ಟೈಲರಿಂಗ್ ಮಾಡಿ ಓದಿಗೆ ನೆರವಾಗುತ್ತಿದ್ದಾರೆ. ಸ್ಪರ್ಧಾ ಪರೀಕ್ಷೆಗಳನ್ನು ಬರೆದು ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ಅನುರಾಧಾ ಮಾಹಿತಿ ನೀಡಿದರು.

308 ಚಿನ್ನದ ಪದಕ: 

ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಸೇರಿ ವಿವಿಧ ವಿಭಾಗಗಳ 158 ವಿದ್ಯಾರ್ಥಿಗಳು ಒಟ್ಟು 308 ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ. ಅವರಲ್ಲಿ 113 ಮಹಿಳೆಯರು ಎನ್ನುವುದು ವಿಶೇಷ. ಸ್ನಾತಕೋತ್ತರ ವಿಭಾಗದಲ್ಲಿ 77 ಹಾಗೂ ಸ್ನಾತಕ ಪದವಿಯಲ್ಲಿ 36 ಮಹಿಳೆಯರು ಪದಕ ಪಡೆದಿದ್ದಾರೆ. ಮೂರು ವಿದ್ಯಾರ್ಥಿಗಳು ತಲಾ ಆರು, ಏಳು ವಿದ್ಯಾರ್ಥಿಗಳು ತಲಾ ಐದು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಸೇಂಟ್‌ ಕ್ಲಾರೆಟ್‌ ಕಾಲೇಜಿನ ಜೆ. ರಮ್ಯಾ, ಬೆಂಗಳೂರು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಎಂ.ಪಿ. ರಮ್ಯಾ, ಕನ್ನಡ ಅಧ್ಯಯನ ಕೇಂದ್ರದ ವೈ.ಬಿ. ವಿಶಾಲಾಕ್ಷಿ ಅವರಿಗೆ ಡಾ. ಬಿ.ಆರ್‌. ಅಂಬೇಡ್ಕರ್‌ ಚಿನ್ನದ ಪದಕದ ಶ್ರೇಯ ಸಂದಿದೆ. 

ಬೆಂಗಳೂರು ವಿವಿ: ಇಂದು ಘಟಿಕೋತ್ಸವ

ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವ ಸೆಂಟ್ರಲ್‌ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ  ಸೆ. 10ರಂದು ಬೆಳಿಗ್ಗೆ 11ಕ್ಕೆ ಆರಂಭವಾಗಲಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕುಲಪತಿ ಎಸ್‌.ಎಂ. ಜಯಕರ ರಾಜ್ಯಪಾಲರು ಘಟಿಕೋತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಹಾಗಾಗಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್‌ ಅಧ್ಯಕ್ಷತೆಯಲ್ಲಿ ಘಟಕೋತ್ಸವ ನಡೆಯಲಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗದ ಉಪಾಧ್ಯಕ್ಷ ದೀಪಕ್‌ ಕುಮಾರ್ ಶ್ರೀವಾಸ್ತವ ಘಟಿಕೋತ್ಸವ ಭಾಷಣ ಮಾಡುವರು ಎಂದರು. ಸಿಂಡಿಕೇಟ್‌ನ ಮೂವರು ಸದಸ್ಯರಿಗೆ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಹೈಕೋರ್ಟ್ ತಡೆ ನೀಡಿದೆ. ಹಾಗಾಗಿ ಅವರು ಘಟಿಕೋತ್ಸವದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು.  31382 ವಿದ್ಯಾರ್ಥಿಗಳು ಪದವಿಗೆ ಅರ್ಹರಾಗಿದ್ದಾರೆ. 21853 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 140 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪ್ರದಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗುರುಕಿರಣ್‌ ರಾಜಣ್ಣಗೆ ಗೌರವ ಡಾಕ್ಟರೇಟ್‌

ಸಂಗೀತ ನಿರ್ದೇಶಕ ಗುರುಕಿರಣ್‌ ಸಮಾಜಸೇವಕ ಕೆ.ಎಸ್‌. ರಾಜಣ್ಣ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಿದೆ. ಕಲೆ ಸಂಗೀತ ಕ್ಷೇತ್ರದ ಸಾಧನೆಗೆ ಗುರುಕಿರಣ್ ಮತ್ತು ಕ್ರೀಡೆ ಸಮಾಜ ಸೇವಾ ಕ್ಷೇತ್ರದಲ್ಲಿನ ಸಾಧನೆಗೆ ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಮಾಜಿ ಆಯುಕ್ತ ರಾಜಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಎಂದು ಕುಲಪತಿ ಎಂ.ಎಸ್. ಜಯಕರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT