ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕದ ಜೊತೆ ಅನ್ಯೋನ್ಯ ಸಂಬಂಧ: ರಾಹುಲ್

ರಾಯಚೂರಿನಲ್ಲಿ ‘ಭಾರತ್‌ ಜೋಡೊ’ ಯಾತ್ರೆಗೆ ಅದ್ಧೂರಿ ಬೀಳ್ಕೊಡುಗೆ
Last Updated 22 ಅಕ್ಟೋಬರ್ 2022, 20:07 IST
ಅಕ್ಷರ ಗಾತ್ರ

ರಾಯಚೂರು: ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ನಡೆದ ಭಾರತ್ ಜೋಡೊ ಯಾತ್ರೆಯು ಶನಿವಾರ ಕೊನೆಗೊಂಡಿದ್ದು ರಾಯಚೂರಿನಲ್ಲಿ ಲಕ್ಷಾಂತರ ಜನರು ಅವರೊಂದಿಗೆ ಹೆಜ್ಜೆಹಾಕಿ, ಅದ್ಧೂರಿಯಾಗಿ ಬೀಳ್ಕೊಟ್ಟರು.

ನಗರದ ವಾಲ್ಕಟ್ ಮೈದಾನದಲ್ಲಿ ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್‌ಗಾಂಧಿ ಮಾತನಾಡಿ, ‘ನನ್ನ ಕುಟುಂಬಕ್ಕೂ ಮತ್ತು ಕರ್ನಾಟಕಕ್ಕೂ ಅನ್ಯೋನ್ಯ ಸಂಬಂಧವಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಚಿಕ್ಕಮಗಳೂರಿನಿಂದ ಗೆಲ್ಲಿಸಿದ್ದನ್ನು ನಾವು ಎಂದಿಗೂ ಮರೆಯುವುದಿಲ್ಲ. ಅದೇ ರೀತಿ ತಾಯಿ ಸೋನಿಯಾಗಾಂಧಿ ಅವರನ್ನು ಬಳ್ಳಾರಿಯಿಂದ ಗೆಲ್ಲಿಸಿದ್ದನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ’ ಎಂದರು. ಬಳಿಕ ದೀಪಾವಳಿ ಹಬ್ಬದ ಶುಭಾಶಯವನ್ನೂ ಕೋರಿದರು.

‘ಕರ್ನಾಟಕದಲ್ಲಿ 500 ಕಿ.ಮೀ. ಗಿಂತ ಹೆಚ್ಚು ದೂರ ಯಾತ್ರೆ ಮಾಡಿದ್ದು, ನಾಳೆ ಮುಂದಿನ ರಾಜ್ಯಕ್ಕೆ ಹೋಗುತ್ತೇವೆ. ಪಾದಯಾತ್ರೆಯುದ್ದಕ್ಕೂ ಎಲ್ಲ ಜನರು ಶಕ್ತಿ, ಪ್ರೀತಿ ನೀಡಿದ್ದು, ಆಭಾರಿಯಾಗಿದ್ದೇನೆ. ಬಿಸಿಲು, ಚಳಿ, ಮಳೆ, ಬಿರುಗಾಳಿಯನ್ನು ಲೆಕ್ಕಿಸದೆ ಈ ಪಾದಯಾತ್ರೆ ಮಾಡಿದ್ದೇವೆ. ಯಾವ ಶಕ್ತಿಯಿಂದಲೂ ಪಾದಯಾತ್ರೆ ತಡೆಯ ಲಾಗದು. ಜಮ್ಮು–ಕಾಶ್ಮೀರದಲ್ಲೇ ಯಾತ್ರೆ ಮುಗಿಯಲಿದೆ’ ಎಂದು ಅವರು ಗಟ್ಟಿಧ್ವನಿಯಲ್ಲಿ ಹೇಳಿದಾಗ, ಜನರು ಚಪ್ಪಾಳೆ ಹೊಡೆದು ಕೂಗಿದರು.

‘ಬಿಜೆಪಿ, ಆರ್‌ಎಸ್‌ಎಸ್‌ನವರು ದೇಶದಲ್ಲಿ ಕೋಮು–ಅಸೂಯೆ ಮೂಡಿ ಸುವ ಮತ್ತು ಅಣ್ಣತಮ್ಮಂದಿರಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ದೇಶ ವಿಭಜಿಸುವ ಕೆಲಸ ತಡೆಯಲು ಭಾರತ ಜೋಡೊ ಪಾದಯಾತ್ರೆ ನಡೆದಿದೆ. ಇಡೀ ಮನುಕುಲಕ್ಕೆ ದಾರಿ ತೋರಿದ ಬಸವಣ್ಣ, ಡಾ.ಬಿ.ಆರ್‌.ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಅವರ ವಿಚಾರಧಾರೆಯಲ್ಲಿ ಯಾತ್ರೆ ಸಾಗಿದೆ’ ಎಂದರು.

ವಿಧಾನಸಭೆ ವಿರೋಧ ‍ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ರಾಹುಲ್‌ಗಾಂಧಿ ಅವರು ಕನ್ಯಾ
ಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಕೈಗೊಂಡಿದ್ದು, ಇಂಥ ಸಾಹಸ ಸ್ವತಂತ್ರ ಭಾರತದಲ್ಲಿ ಯಾರೂ ಕೂಡ ಮಾಡಿಲ್ಲ. 150 ದಿನಗಳವರೆಗೆ 3,571 ಕಿ.ಮೀ ದೂರ ನಡೆಯುವುದು ಸಾಮಾನ್ಯ ಸಂಗತಿಯಲ್ಲ. ಪ್ರಧಾನಿಆಗಬೇಕು ಎಂಬ ಉದ್ದೇಶದಿಂದ ರಾಹುಲ್‌ಗಾಂಧಿ ಅವರು ಈ ಪಾದಯಾತ್ರೆ ಮಾಡುತ್ತಿಲ್ಲ’ ಎಂದು ಹೇಳಿದರು.

ಶಾಸಕರಾದ ಕೃಷ್ಣ ಬೈರೇಗೌಡ, ಡಾ. ಅಜಯ್ ಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಇದ್ದರು.

‘ನಾಡದೇವಿಯ ಆಶೀರ್ವಾದ ಸಿಕ್ಕಿದೆ’

‘ನಮ್ಮ ರಾಜ್ಯದಲ್ಲಿ ರಾಹುಲ್‌ ಗಾಂಧಿ ಅವರು ವಿಜಯದಶಮಿ ಆಚರಿಸಿದ್ದು, ನಾಡದೇವಿಯ ಆಶೀರ್ವಾದ ಅವರಿಗೆ ಸಿಕ್ಕಿದೆ. ಈಗ ದೀಪಾವಳಿ ಆಚರಿಸುವ ಹೊಸ್ತಿಲಲ್ಲಿ ಇದ್ದೇವೆ. ದೀಪದಿಂದ ದೀಪ ಹಚ್ಚುವ ಕೆಲಸವನ್ನು ಎಲ್ಲರೂ ಮಾಡೋಣ. ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿದ್ದು ನಮ್ಮ ರಾಜ್ಯಕ್ಕೂ ದೊಡ್ಡ ಶಕ್ತಿ ಸಿಕ್ಕಂತಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ನಟಿ ರಮ್ಯಾ ಭಾಗಿ

ಮಂತ್ರಾಲಯ ರಸ್ತೆಯಲ್ಲಿರುವ ಐಬಿ ಕಾಲೊನಿಯಿಂದ ಸಾರ್ವಜನಿಕ ಸಭೆ ಆಯೋಜಿಸಲಾಗಿದ್ದ ವಾಲ್ಕಟ್‌ ಮೈದಾನ ದವರೆಗೂ ನಡೆದ ಯಾತ್ರೆಯಲ್ಲಿ ರಾಹುಲ್‌ಗಾಂಧಿ ಅವರೊಂದಿಗೆ ನಟಿ ರಮ್ಯಾ ಮಾತನಾಡುತ್ತ ಹೆಜ್ಜೆ ಹಾಕಿದರು. ರಮ್ಯಾ ಅವರು ಸೇರಿಕೊಳ್ಳುತ್ತಿದ್ದಂತೆ ಜನರು ಗುಂಪಾಗುವುದು ಹೆಚ್ಚಳವಾಯಿತು. ಎಂದಿನಂತೆ ರಾಹುಲ್‌ ಅವರು ರಸ್ತೆಯ ಎರಡು ಅಂಚಿನಲ್ಲಿ ನಿಂತ ಜನರತ್ತ ಕೈಬೀಸುತ್ತ ಮುನ್ನಡೆದರು.

ಲಕ್ಷಾಂತರ ಜನರು ಭಾಗಿ

ರಾಯಚೂರು ನಗರದಲ್ಲಿ ಶನಿವಾರ ನಡೆದ ಪಾದಯಾತ್ರೆಯಲ್ಲಿ ಲಕ್ಷಾಂತರ ಜನರು ಹೆಜ್ಜೆ ಹಾಕಿದ್ದು, ಗಮನಾರ್ಹವಾಗಿತ್ತು. ಮಂತ್ರಾಲಯ ಮಾರ್ಗದ ಬೃಂದಾವನ ಹೋಟೆಲ್‌ನಿಂದ ಪಾದಯಾತ್ರೆ ಆರಂಭವಾದಾಗ, ಸುಮಾರು 2 ಕಿ.ಮೀ. ಉದ್ದಕ್ಕೂ ಪಾದಯಾತ್ರಿಗಳು ಹೊರಟಿದ್ದರು. ಸಾರ್ವಜನಿಕ ಸಭೆ ವಾಲ್ಕಟ್‌ ಮೈದಾನದಲ್ಲಿ 70 ಸಾವಿರ ಆಸನಗಳು ಭರ್ತಿಯಾಗಿ, ಸುತ್ತಮುತ್ತಲೂ ಜನರು ನಿಂತಿದ್ದರು.

ಹೆಜ್ಜೆ ಹಾಕಿದ ಲಕ್ಷಾಂತರ ಜನ

ರಾಯಚೂರು ನಗರದಲ್ಲಿ ಶನಿವಾರ ನಡೆದ ಪಾದಯಾತ್ರೆಯಲ್ಲಿ ಲಕ್ಷಾಂತರ ಜನರು ಹೆಜ್ಜೆ ಹಾಕಿದ್ದು, ಗಮನಾರ್ಹವಾಗಿತ್ತು. ಮಂತ್ರಾಲಯ ಮಾರ್ಗದ ಬೃಂದಾವನ ಹೋಟೆಲ್‌ನಿಂದ ಪಾದಯಾತ್ರೆ ಆರಂಭವಾಯಿತು.

ವಾಲ್ಕಟ್‌ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ 70 ಸಾವಿರ ಆಸನಗಳು ಭರ್ತಿಯಾಗಿ, ಸುತ್ತಮುತ್ತಲೂ ಜನರು ನಿಂತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT