ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೈನಿಕ’ನ ನಡೆ ನಿಗೂಢ! ಶುಭ ಸುದ್ದಿಯ ನಿರೀಕ್ಷೆ ಈಡೇರದಿದ್ದರೆ ಮುಂದೇನೆಂಬ ಕುತೂಹಲ

Last Updated 8 ಆಗಸ್ಟ್ 2021, 12:00 IST
ಅಕ್ಷರ ಗಾತ್ರ

ರಾಮನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸುವಲ್ಲಿ ವಿಫಲ ಆಗಿರುವ ಚನ್ನಪಟ್ಟಣದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಮರಳಿ ಯತ್ನ ಮಾಡುತ್ತಿದ್ದು, ಆಷಾಢದ ನಂತರ ಶುಭ ಸುದ್ದಿ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ಎರಡನೇ ಬಾರಿಯೂ ‘ಫಲ’ ಸಿಗದೇ ಹೋದರೆ ಅವರ ನಡೆ ಏನು ಎಂಬುದೇ ಕುತೂಹಲ ಕೆರಳಿಸಿದೆ.

ಸಮ್ಮಿಶ್ರ ಸರ್ಕಾರ ಕೆಡವುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ಸ್ವತಃ ಹೇಳಿಕೊಂಡಿದ್ದ ಯೋಗೇಶ್ವರ್‌, ನಂತರ ತಮ್ಮದೇ ಪಕ್ಷದವರಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧವೂ ಹೈಕಮಾಂಡ್ ಎದುರು ‘ಪರೀಕ್ಷೆ’ ಬರೆದಿದ್ದರು. ಆದರೆ ಅದರಲ್ಲಿ ಪಾಸ್‌ ಆದರೂ ಸಚಿವ ಸ್ಥಾನ ಪಡೆಯುವಲ್ಲಿ ವಿಫಲ ಆಗಿದ್ದರು. ಮೂರ್ನಾಲ್ಕು ದಿನ ದೆಹಲಿಯಲ್ಲೇ ಠಿಕಾಣಿ ಹೂಡಿ ಪಕ್ಷದ ವರಿಷ್ಠರ ಗಮನ ಸೆಳೆಯಲು ಪ್ರಯತ್ನ ನಡೆಸಿದ್ದರು. ಆದರೆ ಆ ಪ್ರಯತ್ನ ಮಾತ್ರ ಫಲ ನೀಡಿಲ್ಲ.

ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವರಾಗಿಯೂ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಿದ್ದು ಸಿಪಿವೈಗೆ ಮುಳುವಾಗಿದೆ. ಇದೇ ಕಾರಣಕ್ಕೆ ಹೈಕಮಾಂಡ್ ಕೂಡ ಅವರಿಗೆ ಸದ್ಯಕ್ಕೆ ಸಚಿವ ಸ್ಥಾನ ನೀಡಲು ಒಪ್ಪಿಲ್ಲ. ಆದರೆ ಛಲ ಬಿಡದ
ಯೋಗೇಶ್ವರ್‌ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಸಂದರ್ಭದಲ್ಲಾದರೂ ಅವಕಾಶ ಗಿಟ್ಟಿಸುವ ಪ್ರಯತ್ನ ಮುಂದುವರಿಸಿದ್ದಾರೆ.

ನಿರೀಕ್ಷೆ ಏನು?: ಸಚಿವ ಸ್ಥಾನ ಕೈ ತಪ್ಪಿದ ನಂತರ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ಯೋಗೇಶ್ವರ್‌ ‘ಆಷಾಡದ ನಂತರ ಶುಭ ಸುದ್ದಿ ಬರಲಿದೆ. ಹುಟ್ಟುಹಬ್ಬದ ಒಳಗೆ (ಆ.29) ಸಚಿವನಾಗುತ್ತೇನೆ’ ಎಂದು ಕಾರ್ಯಕರ್ತರಲ್ಲಿ ಹೇಳಿಕೊಂಡಿದ್ದಾರೆ.

ಈ ಬಾರಿಯ ಸಂಪುಟದಲ್ಲಿ ಹಳೇ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ದೊರೆತಿಲ್ಲ. ಹೀಗಾಗಿ ಮುಂದಿನ ಸಂಪುಟ ವಿಸ್ತರಣೆ ವೇಳೆ ಅವಕಾಶ ಸಿಗಲಿದೆ. ಹೈಕಮಾಂಡ್‌ ಕೂಡ ಇದೇ ಭರವಸೆ ನೀಡಿದೆ ಎಂದು ಯೋಗೇಶ್ವರ್‌ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಹಾಗೊಂದು ವೇಳೆ ಅವಕಾಶ ಸಿಕ್ಕಲ್ಲಿ ಪ್ರಬಲ ಖಾತೆಗೆ ಸಹ ಬೇಡಿಕೆ ಇಡಲಿದ್ದಾರೆ.

ಈ ಕುರಿತು ಪ್ರತಿಕ್ರಿಯೆಗೆ ಯೋಗೇಶ್ವರ್ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಪಕ್ಷೇತರರಾಗಿ ಸ್ಪರ್ಧಿಸುತ್ತಾರ?

ಯೋಗೇಶ್ವರ್‌ಗೆ ಒಂದು ವೇಳೆ ಬಿಜೆಪಿಯಲ್ಲಿ ಸಚಿವ ಸ್ಥಾನ ದೊರೆಯದೇ ಹೋದಲ್ಲಿ ಅಲ್ಲಿಂದ ಹೊರ ಬಂದು ಮುಂದಿನ ವಿಧಾನಸಭೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಚನ್ನಪಟ್ಟಣದಲ್ಲಿ ಪಕ್ಷೇತರನಾಗಿ ನಿಂತು ಗೆಲ್ಲುವ ಮೂಲಕವೇ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ಯೋಗೇಶ್ವರ್‌ ನಂತರದಲ್ಲಿ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಕ್ಷಗಳನ್ನು ಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡು ನಂತರದಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ಮುಂದುವರಿದಿದ್ದಾರೆ.

ಸಿಪಿವೈ ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಿದರೂ ಪಕ್ಷ ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅನುಮತಿ ಬೇಕೇ ಬೇಕು. ಸದ್ಯ ಜಿಲ್ಲೆಯಲ್ಲಿ ಈ ಇಬ್ಬರೂ ರಾಜಕೀಯ ಬದ್ಧ ವೈರಿಗಳಾಂತಾಗಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆಶಿ, ಎಚ್‌ಡಿಕೆ ಅವರನ್ನು ಹಣಿಯಲು ಯೋಗೇಶ್ವರ್‌ರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲೂ ಮುಂದಾಗಬಹುದು. ರಾಜಕೀಯದಲ್ಲಿ ಏನು ಬೇಕಾದರೂ ಸಾಧ್ಯ ಎನ್ನುತ್ತಾರೆ ಜಿಲ್ಲೆಯ ರಾಜಕೀಯ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT