ಬೆಂಗಳೂರು: ‘ಬಿಜೆಪಿ-ಜೆಡಿಎಸ್ ಪಾದಯಾತ್ರೆ ಶೋಕಿ ಯಾತ್ರೆ’ ಎಂದು ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ಗೇಲಿ ಮಾಡಿದರು.
‘ಈ ಯಾತ್ರೆಯಲ್ಲಿ ಮುಖಂಡರು ಜನರ ಯಾವುದೇ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸದೆ, ಪ್ರತಿಷ್ಠೆಯನ್ನು ಪಣವಾಗಿಟ್ಟುಕೊಂಡು ನಡೆಸುತ್ತಿರುವ ಅವರ ಈ ಪಾದಯಾತ್ರೆಗೆ ಯಾವುದೇ ಅರ್ಥವಿಲ್ಲ’ ಎಂದು ಕಿಡಿಕಾರಿದರು.
‘ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಯ ತಪ್ಪಿಲ್ಲ ಎನ್ನುವುದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಎಲ್ಲರಿಗೂ ಗೊತ್ತಿದೆ. ಆ ಕಾರಣಕ್ಕೆ ಅವರು ಈ ಪಾದಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದಿದ್ದರು. ಜೆಡಿಎಸ್-ಬಿಜೆಪಿ ನಾಯಕರ ಮಕ್ಕಳ ನಾಯಕತ್ವದ ನಡುವಿನ ಪೈಪೋಟಿಗೆ ಅವರ ಪಾದಯಾತ್ರೆ ವೇದಿಕೆಯಾಗಿದೆ’ ಎಂದು ಟೀಕಿಸಿದರು.
‘ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವರ್ಚಸ್ಸಿಗೆ ಮಸಿ ಬಳಿಯುವ ಕೆಲಸ ಮಾಡಿದರೆ ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ’ ಎಂದೂ ಅವರು ಎಚ್ಚರಿಕೆ ನೀಡಿದರು.