ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ, ಬೊಮ್ಮಾಯಿ ರಾಜೀನಾಮೆ

Published 15 ಜೂನ್ 2024, 8:59 IST
Last Updated 15 ಜೂನ್ 2024, 8:59 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ಎಚ್‌.ಡಿ. ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಅವರು ಶನಿವಾರ ರಾಜೀನಾಮೆ ಸಲ್ಲಿಸಿದರು.

ವಿಧಾನಸೌಧದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರನ್ನು ಇಬ್ಬರೂ ಪ್ರತ್ಯೇಕವಾಗಿ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು.

ವಿಧಾನಸಭೆಗೆ ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಮತ್ತು ಶಿಗ್ಗಾವಿ  ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ರಾಜೀನಾಮೆ ಸಲ್ಲಿಕೆ ವೇಳೆ ಸಭಾಧ್ಯಕ್ಷರ ಜತೆಗೆ ಕುಮಾರಸ್ವಾಮಿ ಉಭಯ ಕುಶಲೋಪರಿ ನಡೆಸಿದರು. ಇದೇ ವೇಳೆ ಸಭಾಧ್ಯಕ್ಷರು ಕುದುರೆಮುಖ ವಿಚಾರ ಕೇಳಿದ್ದು, ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಕೆಲವು ಮಾಹಿತಿ ಹಂಚಿಕೊಂಡರು. ಅಲ್ಲದೆ, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನದ ಬಗ್ಗೆಯೂ ಮಾತುಕತೆ ನಡೆಸಿದರು.

ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ‘ಸಂಸತ್‌ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಎರಡರಲ್ಲಿ ‌ಒಂದು ಸ್ಥಾನ ಉಳಿಸಿಕೊಳ್ಳಬೇಕು. ಹೀಗಾಗಿ, ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಮುಂದೆ ಮಾತನಾಡೋಣ’ ಎಂದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ‘ನಿರಂತರವಾಗಿ ನಾಲ್ಕು ಬಾರಿ ಶಾಸಕನಾಗಿ ಆಯ್ಕೆ ಮಾಡಿ ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಟ್ಟ ಶಿಗ್ಗಾವಿ ಕ್ಷೇತ್ರದ ಜನರಿಗೆ ಹೇಳುತ್ತೇನೆ’ ಎಂದರು.

‘ಶಿಗ್ಗಾವಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಇನ್ನಷ್ಟು ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿ ಅವರ ಜೊತೆ ಈಗಾಗಲೇ ಮಾತನಾಡಿದ್ದೇನೆ. ಮುಖ್ಯಮಂತ್ರಿಯವರು ಬೆಂಗಳೂರಿಗೆ ಬಂದ ತಕ್ಷಣ ಅವರ ಬಳಿ ಚರ್ಚಿಸಿ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಚರ್ಚಿಸುತ್ತೇನೆ. ಹಾವೇರಿ ಲೋಕಸಭೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಕೆಲಸ ಮಾಡುವೆ. ಸಂಸತ್ತಿನಲ್ಲಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚಿನ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ’ ಎಂದರು.

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕೋಟ ರಾಜೀನಾಮೆ...

ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT