ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬರನ ಸಮಾಧಿಗೆ 4 ಬಾರಿ ಭೇಟಿ ಕೊಟ್ಟಿದ್ದ ನೆಹರೂ ಕುಟುಂಬ: ಶ್ರೀರಾಮುಲು ಟೀಕೆ

Published 11 ಜನವರಿ 2024, 10:02 IST
Last Updated 11 ಜನವರಿ 2024, 10:02 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುವ ಕಾರ್ಯಕ್ರಮದ ಆಹ್ವಾನವನ್ನು ತಿರಸ್ಕರಿಸಿರುವ ಕಾಂಗ್ರೆಸ್ ತನ್ನ ನಿಜ ಬಣ್ಣವನ್ನು ಬಯಲುಗೊಳಿಸಿದೆ. ನೆಹರೂ ಕುಟುಂಬ ಬಾಬರನ ಸಮಾಧಿಗೆ ನಾಲ್ಕು ಬಾರಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದನ್ನು ಈ ದೇಶ ಮರೆತಿಲ್ಲ ಎಂದು ಬಿಜೆಪಿ ನಾಯಕ ಬಿ.ಶ್ರೀರಾಮುಲು ಹೇಳಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಹರಲಾಲ್ ನೆಹರೂ ಅವರು 1957ರ ಸೆಪ್ಟೆಂಬರ್‌ 19ರಂದು ಬಾಬರನ ಸಮಾಧಿಗೆ ಹೋಗಿ ಗೌರವ ಸಲ್ಲಿಸಿದ್ದರು, ಇಂದಿರಾ ಗಾಂಧಿ ಅವರು 1968 ಮತ್ತು 1976ರಲ್ಲಿ ಭೇಟಿ ನೀಡಿದ್ದರು. 2005ರಲ್ಲಿ ಮನಮೋಹನ ಸಿಂಗ್ ಮತ್ತು ರಾಹುಲ್ ಗಾಂಧಿ ಭೇಟಿ ನೀಡಿ ಗೌರವ ಸಲ್ಲಿಸಿದ್ದರು ಎಂಬುದನ್ನು ನೆನಪಿಸಿದರು.

‘ಸೋಮನಾಥ ದೇವಸ್ಥಾನದ ಉದ್ಘಾಟನೆಗೆ ನೆಹರೂ ಅವರನ್ನು ಕರೆದಾಗ ಆಹ್ವಾನ ತಿರಸ್ಕರಿಸಿದ್ದರು. ಇದೀಗ ಅಯೋಧ್ಯೆ ವಿಚಾರದಲ್ಲೂ ನೆಹರೂ ವಂಶಸ್ಥರು ಅದೇ ನಿರ್ಧಾರ ಕೈಗೊಂಡಿದ್ದಾರೆ. ಕಾಂಗ್ರೆಸ್‌ನ ಹಿಂದೂ ವಿರೋಧಿ ನಿಲುವನ್ನು ದೇಶದ ಜನ ಗಮನಿಸುತ್ತಿದ್ದಾರೆ’ ಎಂದರು.

ರೆಡ್ಡಿ ಅನ್ನ ಕೊಟ್ಟವರು: ‘ಶ್ರೀರಾಮುಲು ಅವರನ್ನು ಬೆಳೆಸಿದವರು ಜನಾರ್ದನ ರೆಡ್ಡಿ ಎಂದು ಹೇಳಬೇಡಿ, ನನಗೆ ಅನ್ನ ಕೊಟ್ಟವರೇ ಅವರು ಎಂದೇ ನಾನು ಯಾವತ್ತೂ ಭಾವಿಸುತ್ತೇನೆ’ ಎಂದು ಶ್ರೀರಾಮುಲು ಹೇಳಿದರು.

‘ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ ಬಂದರೆ ನನ್ನ ಆಕ್ಷೇಪವೇನೂ ಇಲ್ಲ. ನಾನು ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿಲ್ಲ. ಪಕ್ಷಕ್ಕೆ ಒಳಿತಾಗುತ್ತದೆ ಎಂದರೆ ರೆಡ್ಡಿ ಅವರನ್ನು ವಾಪಸ್ ಕರೆಸುವುದರಲ್ಲಿ ತಪ್ಪೇನೂ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT