ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಬಿಜೆಪಿ ನಾಯಕರ ರಾಮನಾಮ ಜಪ

Published 22 ಜನವರಿ 2024, 16:05 IST
Last Updated 22 ಜನವರಿ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ತ ಬಿಜೆಪಿ ನಾಯಕರು ಬೆಂಗಳೂರು ಸೇರಿ ರಾಜ್ಯದ ಹಲವು ದೇವಸ್ಥಾನಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಭಕ್ತಿ ಭಾವ ಪ್ರದರ್ಶಿಸಿದರು. ಸಂಜೆ ಬಿಜೆಪಿ ಕಚೇರಿಯೂ ಸೇರಿದಂತೆ ಎಲ್ಲಡೆ ದೀಪಗಳನ್ನು ಬೆಳಗಿ ಸಂಭ್ರಮಿಸಿದರು.

ಬಿಜೆಪಿಯ ರಾಜ್ಯ ಘಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ‘ಕೋಟಿ, ಕೋಟಿ ರಾಮ ಭಕ್ತರ ಆಸೆ ಇಂದು ಈಡೇರಿದೆ. ಪ್ರತಿಯೊಬ್ಬ ಹಿಂದುವನ್ನೂ ಮಂದಿರ ಒಗ್ಗೂಡಿಸಲಿದೆ. ಅಯೋಧ್ಯೆ ಮತ್ತು ಕನ್ನಡಿಗರಿಗೂ ಅವಿನಾಭಾವ ಸಂಬಂಧವಿದೆ. ಶ್ರೀರಾಮನ ಪರಮ ಭಕ್ತ ಹನುಮಂತನ ಜನ್ಮಸ್ಥಳ ಕಿಷ್ಕಿಂಧೆ ಇರುವುದೂ ಕರ್ನಾಟಕದಲ್ಲಿ’ ಎಂದು ಹೇಳಿದರು.

‘ರಾಮನ ವಿಗ್ರಹಕ್ಕೆ ಶಿಲೆ ಕೂಡ ಕರ್ನಾಟಕದಿಂದ ಲಭಿಸಿದೆ. ಅದರ ಶಿಲ್ಪಿಗಳು ಕನ್ನಡ ನಾಡಿನವರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ನಡೆದಿರುವುದು ನಮ್ಮೆಲ್ಲರ ಭಾಗ್ಯ’ ಎಂದೂ ವಿಜಯೇಂದ್ರ ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿಯವರ ರಾಮರಾಜ್ಯದ ಕನಸು ಮುಂದಿನ ದಿನಗಳಲ್ಲಿ ನನಸಾಗಲಿದೆ. ದೇಶದ ಪ್ರತಿಯೊಂದು ರಾಜ್ಯವನ್ನೂ ಪ್ರಗತಿಪಥದಲ್ಲಿ ಒಯ್ಯುವ ಹಾಗೂ 2047 ನೇ ಇಸವಿಗೆ ಅಭಿವೃದ್ಧಿ ಹೊಂದಿದ ‘ವಿಕಸಿತ ಭಾರತ’ದ ನಿರ್ಮಾಣಕ್ಕೆ ಅವರು ಸಂಕಲ್ಪ ತೊಟ್ಟಿದ್ದಾರೆ. ಅದು ನನಸಾಗಲಿದೆ’ ಎಂದೂ ಹೇಳಿದರು.

ಕರ್ನಾಟಕದ ಪಾತ್ರ ದೊಡ್ಡದು:

‘ರಾಮ ಜನ್ಮಭೂಮಿ ಹೋರಾಟದಲ್ಲಿ ಕರ್ನಾಟಕ ಪಾತ್ರ ದೊಡ್ಡದು. ರಾಮನಿಗೂ ಕರ್ನಾಟಕಕ್ಕೂ ದೊಡ್ಡ ನಂಟಿದೆ. ಆಂಜನೇಯನ ಜನ್ಮಭೂಮಿ ಅಭಿವೃದ್ಧಿಪಡಿಸುವುದು ನಮ್ಮ ಮುಂದಿನ ಗುರಿ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಬಾಲಬ್ರೂಯಿ ಅತಿಥಿ ಗೃಹದ ಬಳಿ ಇರುವ ಮಾರುತಿ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ‘ರಾಮನ ಪ್ರಾಣಪ್ರತಿಷ್ಠೆಯ ದಿನವಾದ ಇಂದು ಐತಿಹಾಸಿಕ’ ದಿನ ಎಂದು ಹೇಳಿದರು.

‘ಆಂಜನೇಯ ಇದ್ದರೆ ರಾಮಪರಿಪೂರ್ಣ. ನಮ್ಮ ಮುಂದಿನ ಗುರಿ ಆಂಜನೇಯ ಜನ್ಮಭೂಮಿ ಅಭಿವೃದ್ಧಿ. ಇದಕ್ಕಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ. ಅಂತಿಮವಾಗಿ ರಾಮರಾಜ್ಯ ಸ್ಥಾಪನೆ ನಮ್ಮ ಗುರಿ. ಇಂತಹ ಪವಿತ್ರ ದಿನದಲ್ಲಿ ರಾಜಕೀಯ ಬೆರೆಸಿ ಮಾತನಾಡುವುದಿಲ್ಲ’ ಎಂದೂ ಬೊಮ್ಮಾಯಿ ಹೇಳಿದರು.

ಬಿಜೆಪಿ ಬೆಂಗಳೂರು ಮಹಾನಗರ ವತಿಯಿಂದ ಬಾಣಸವಾಡಿಯ ಆಂಜನೇಯ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಭಾಗವಹಿಸಿದ್ದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಭಕ್ತಿಯಲ್ಲಿ ತಲ್ಲೀನರಾಗಿರುವುದು. ವಿಧಾನಪರಿಷತ್‌ ಸದಸ್ಯೆ ಭಾರತಿಶೆಟ್ಟಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಇದ್ದರು.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಭಕ್ತಿಯಲ್ಲಿ ತಲ್ಲೀನರಾಗಿರುವುದು. ವಿಧಾನಪರಿಷತ್‌ ಸದಸ್ಯೆ ಭಾರತಿಶೆಟ್ಟಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಇದ್ದರು.

ರಾಮ ದ್ವೇಷಿಗಳಿಗೆ ತಕ್ಕ ಪಾಠ: ಆರ್‌.ಅಶೋಕ

‘ತ್ರೇತಾಯುಗದಲ್ಲಿ ರಾವಣನಿಗೆ ದ್ವಾಪರಯುಗದಲ್ಲಿ ದುರ್ಯೋಧನನಿಗೆ ಆದ ಗತಿಯೇ ಕಲಿಯುಗದ ರಾಮದ್ವೇಷಿಗಳಿಗೂ ಆಗಲಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಹೇಳಿದರು. ‘ಇಡೀ ಭಾರತ ದೇಶ ರಾಮಮಯವಾಗಿದೆ. ಜನರೆಲ್ಲರೂ ಸ್ವಯಂ ಪ್ರೇರಿತರಾಗಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಹಬ್ಬದ ವಾತಾವರಣವನ್ನು ಸಹಿಸದ ಕಾರಣ ಸರ್ಕಾರ ರಾಜ್ಯದಲ್ಲಿ ರಜೆ ಕೊಡಲಿಲ್ಲ’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು. ‘ಕೈಹಿಡಿದ ಮಡದಿ ಮಂಡೋದರಿ ಒಡ ಹುಟ್ಟಿದ ತಮ್ಮ ವಿಭೀಷಣನು ರಾಮದ್ವೇಷ ಬೇಡ ಎಂದು ಎಷ್ಟು ಹೇಳಿದರೂ ಕೇಳದ ರಾವಣನ ಗತಿ ಕಡೆಗೆ ಏನಾಯಿತು? ಅಧರ್ಮದ ಹಾದಿ ಹಿಡಿದು ಸ್ವಂತ ದಾಯಾದಿಗಳ ಮೇಲೆ ಯುದ್ಧ ಸಾರಿ ಕೃಷ್ಣನನ್ನು ಎದುರು ಹಾಕಿಕೊಂಡ ದುರ್ಯೋಧನನ ಕಥೆ ಕಡೆಗೆ ಏನಾಯಿತು’ ಎಂದು ಅಶೋಕ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT