ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಶಿಕ್ಷಕರು ನನ್ನ ಜತೆ ಗಟ್ಟಿಯಾಗಿ ನಿಂತಿದ್ದಾರೆ: ವೈ.ಎ. ನಾರಾಯಣಸ್ವಾಮಿ

ವೈ.ಎ.ನಾರಾಯಣಸ್ವಾಮಿ, ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ– ಪ್ರಜಾವಾಣಿ ಸಂದರ್ಶನ
Published 26 ಮೇ 2024, 0:37 IST
Last Updated 26 ಮೇ 2024, 2:06 IST
ಅಕ್ಷರ ಗಾತ್ರ

‘ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಆರೋಗ್ಯ ಕಾರ್ಡ್ ಕೊಡಿಸುವುದು, 2006ರ ಬಳಿಕ ನೇಮಕಗೊಂಡ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ಕೊಡಿಸುವುದೂ ಸೇರಿದಂತೆ ಶಿಕ್ಷಕರ ಸಮಸ್ಯೆಗಳ ಪರಿಹರಿಸಲು ನನ್ನದೇ ಆದ ಯೋಜನೆಗಳಿವೆ’ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಹೇಳಿದರು.

ಮೂರು ಬಾರಿ ಗೆದ್ದಿರುವ ಅವರು, ಮತ್ತೊಮ್ಮೆ ಚುನಾವಣೆ ಕಣದಲ್ಲಿದ್ದಾರೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಅವರು ಮಾತನಾಡಿದ್ದು ಇಲ್ಲಿದೆ.

* ಶಿಕ್ಷಕರು ನಿಮಗೆ ಯಾವ ಕಾರಣಕ್ಕೆ ಮತ ಹಾಕಬೇಕು?

ಮೂರು ಬಾರಿ ಇದೇ ಈ ಕ್ಷೇತ್ರದಿಂದ ಗೆದ್ದಿರುವ ನಾನು ನಾಲ್ಕನೇ ಬಾರಿ ಸ್ಪರ್ಧಿಸಿದ್ದೇನೆ. ಶಿಕ್ಷಕರ ಜತೆಗಿನ ಒಡನಾಟ, ನಿರಂತರ ಸಂಪರ್ಕ ಮತ್ತು ಕಾಲ ಕಾಲಕ್ಕೆ ಅವರ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಲ್ಪಿಸುತ್ತಿರುವುದರಿಂದ ಶಿಕ್ಷಕರು ಆಚೆ– ಈಚೆ ಕದಲದೇ ಗಟ್ಟಿಯಾಗಿ ನನ್ನ ಜತೆ ನಿಂತಿದ್ದಾರೆ. ಇನ್ನು ಮುಂದೆಯೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳಿಗೆ ಪರಿಹಾರ ಕಲ್ಪಿಸಲು ಕಟಿಬದ್ಧನಾಗಿದ್ದೇನೆ. ಶಿಕ್ಷಕರ ಆಪ್ತಬಂಧುವನಿಂತೆ ಕೆಲಸ ಮಾಡುತ್ತಿದ್ದು, ಈ ಬಾರಿ ಕ್ಷೇತ್ರದಲ್ಲಿ ನನ್ನ ಪರವಾದ ಅಲೆ ಇದೆ.

*ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳೇನು? ಅವುಗಳಿಗೆ ನಿಮ್ಮ ಬಳಿ ಇರುವ ಪರಿಹಾರಗಳೇನು?

ವಿಶೇಷವಾಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಶಿಕ್ಷಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ತಾತ್ಕಾಲಿಕ ಮತ್ತು ದೀರ್ಘಕಾಲೀನ ಸಮಸ್ಯೆಗಳಿವೆ. ಅನುದಾನ ರಹಿತ ಶಿಕ್ಷಕರಿಗೆ ಯಾವುದೇ ಸವಲತ್ತುಗಳೂ ಸಿಗುತ್ತಿಲ್ಲ. ಮುಖ್ಯವಾಗಿ ಆರೋಗ್ಯ ಕಾರ್ಡ್‌ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರಿ ನೌಕರರಿಗೆ ಆರೋಗ್ಯ ಸೌಲಭ್ಯವಿದೆ. ಅಂಗನವಾಡಿ ಕಾರ್ಯಕರ್ತೆಯರಿಗೂ ಆರೋಗ್ಯ ಕಾರ್ಡ್‌ ಸಿಗುತ್ತಿದೆ. ಆದರೆ, ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಇಂತಹ ಯಾವುದೇ ಕಾರ್ಡ್‌ಗಳು ಸಿಗುತ್ತಿಲ್ಲ. ಈ ಬಾರಿ ಗೆದ್ದರೆ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಉಚಿತ ಆರೋಗ್ಯ ಕಾರ್ಡ್‌ ಕೊಡಿಸುವ ಪ್ರಯತ್ನ ಮಾಡುತ್ತೇನೆ. ರಾಜ್ಯದಲ್ಲಿ ಅನುದಾನರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 15 ಲಕ್ಷ ಶಿಕ್ಷಕರಿದ್ದಾರೆ. ಅವರೆಲ್ಲರಿಗೂ ಇದರ ಪ್ರಯೋಜನ ಸಿಗಲಿದೆ.

* ಶಿಕ್ಷಕರಿಗೆ ಆಗಬೇಕಾಗಿರುವ ಅಗತ್ಯ ಕೆಲಸಗಳೇನು?

ಈಗಾಗಲೇ ಉಚಿತ ಆರೋಗ್ಯ ಕಾರ್ಡ್‌ ವಿತರಿಸುವ ವಿಚಾರ ಪ್ರಸ್ತಾಪಸಿದ್ದೇನೆ. ಮತ್ತೊಂದು ಮಹತ್ವದ ವಿಚಾರವೆಂದರೆ 2006 ಏಪ್ರಿಲ್ 1ರ ಬಳಿಕ ನೇಮಕಗೊಂಡ ಶಿಕ್ಷಕರಿಗೆ ಪಿಂಚಣಿ  ಸೌಲಭ್ಯ ಸಿಗುತ್ತಿಲ್ಲ. ಅದಕ್ಕೂ ಹಿಂದೆ ನೇಮಕಗೊಂಡವರು ಹಳೆ ಪಿಂಚಣಿ ಅಥವಾ ಹೊಸ ಪಿಂಚಣಿ ವ್ಯವಸ್ಥೆಗೆ ಒಳಪಟ್ಟಿದ್ದಾರೆ. 2006 ಏಪ್ರಿಲ್‌ 1ರ ಬಳಿಕ ಸೇರಿದವರನ್ನೂ ಪಿಂಚಣಿ ವ್ಯವಸ್ಥೆಗೆ ಒಳಪಡಿಸಬೇಕು. ಹಿಂದೆ ನಮ್ಮ ಸರ್ಕಾರ ಇದ್ದಾಗ ಶಿಕ್ಷಕರು ಸುದೀರ್ಘ ಹೋರಾಟ ನಡೆಸಿದ್ದರು. ನಾನು ಅಂದಿನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಬಳಿ ಹೋರಾಟಗಾರರನ್ನು ಕರೆದುಕೊಂಡು ಹೋಗಿದ್ದೆ. ಅದರ ಪರಿಣಾಮ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಇದಕ್ಕಾಗಿ ಸಮಿತಿ ರಚಿಸಲಾಯಿತು. ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಆ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದಕ್ಕಾಗಿ ಹೋರಾಟ ಮುಂದುವರೆಸುತ್ತೇನೆ.

ನಮ್ಮ ಸರ್ಕಾರದ ಅವಧಿಯಲ್ಲಿ 7 ನೇ ವೇತನ ಆಯೋಗದ ವರದಿಯನ್ನು ಆಧರಿಸಿ ಶೇ 17 ರಷ್ಟು ಮಧ್ಯಂತರ ಪರಿಹಾರ ನೀಡಲಾಗಿತ್ತು. ಅಂದರೆ ₹10,500 ಕೋಟಿ ಇದಕ್ಕಾಗಿ ನೀಡಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 7 ನೇ ವೇತನ ಆಯೋಗದ ವರದಿ ಜಾರಿ ಮಾಡುವ ಬಗ್ಗೆ ಮಾತನಾಡುತ್ತಿಲ್ಲ. ಮೌನವಾಗಿದೆ. ಜಾರಿ ಮಾಡುವುದಕ್ಕೆ ಸರ್ಕಾರದ ಬಳಿ ಹಣವೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT