ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಕಣ್ಣೀರಲ್ಲಿ ಕೊಚ್ಚಿ ಹೋದ ಬಿಜೆಪಿ: ದಿಂಗಾಲೇಶ್ವರ ಸ್ವಾಮೀಜಿ

ಬಿಜೆಪಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಅಸಮಾಧಾನ
Published 16 ಮೇ 2023, 21:02 IST
Last Updated 16 ಮೇ 2023, 21:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿ.ಎಸ್. ಯಡಿಯೂರಪ್ಪ ಅವರ ಕಣ್ಣೀರಿನಲ್ಲಿ ಬಿಜೆಪಿ ಸರ್ಕಾರ ಕೊಚ್ಚಿ ಹೋಗುತ್ತೆ ಎಂದು ಹಿಂದೊಮ್ಮೆ ಹೇಳಿದ್ದೆ. ಅದೀಗ ನಿಜವಾಗಿದ್ದು, ಆ ಪಕ್ಷದ ನಾಯಕರಿಗೆ ಇಂದು ಅದರ ಅರಿವಾಗಿದೆ’ ಎಂದು ಶಿರಹಟ್ಟಿ ಫಕ್ಕಿರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನೂಲ್ವಿ ಕ್ರಾಸ್ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಧಿಕಾರದಲ್ಲಿದ್ದಾಗ ಪಕ್ಷದ ನಾಯಕರನ್ನು ನಿರ್ಲಕ್ಷ್ಯ ಮಾಡಿದರೆ ತಿನ್ನಬಾರದ ಪೆಟ್ಟು ತಿನ್ನುತ್ತಾರೆ. ಯಡಿಯೂರಪ್ಪ, ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಸೇರಿದಂತೆ ರಾಜ್ಯದ ಹಿರಿಯ ನಾಯಕರನ್ನು ಕಡೆಗಣಿಸಿದ್ದೆ ಬಿಜೆಪಿ‌ಯ ಇಂದಿನ ಸ್ಥಿತಿಗೆ ಕಾರಣ’ ಎಂದರು.

‘ಯಡಿಯೂರಪ್ಪ ಎಲ್ಲರಿಗೆ ಬೇಕಾದ ನಾಯಕ. ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಿ ಎಂದು ಎಲ್ಲಾ ಸಮುದಾಯಗಳ ನಾಯಕರು ಹೇಳಿದ್ದರು. ಯಾವುದೋ ಕೆಟ್ಟ ಉದ್ದೇಶ ಅಥವಾ ಸ್ವಾರ್ಥಕ್ಕೆ ತೆಗೆದುಕೊಂಡ ನಿರ್ಣಯ ಇಂದಿನ ಹೀನಾಯ ಪರಿಸ್ಥಿತಿಗೆ ಕಾರಣವಾಗಿದೆ’ ಎಂದು ಹೇಳಿದರು.

‘ಸ್ವಾಮೀಜಿಗಳು ಗಂಭೀರ ಹೇಳಿಕೆ ನೀಡಿದಾಗ, ಆ ಬಗ್ಗೆ ಚಿಂತನ‌– ಮಂಥನ ಮಾಡದೆ ಕಡೆಗಣಿಸಿದರು. ಪರ್ಸೆಂಟೇಜ್‌ ಆರೋಪ ಬಂದಾಗ ಅಹಂಕಾರದಿಂದ ವರ್ತಿಸಿದರು. ನಾಯಕರು ಬಾಯಿಗೆ ಬಂದಂತೆ ಮಾತನಾಡಿದರು’ ಎಂದು ಆರೋ‍ಪಿಸಿದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲಾ ಮಾಡಿದರು ಮತ್ತು ಅಧಿಕಾರದಿಂದ ಕೆಳಗಿಳಿಸುವಾಗ ಹೇಗೆ ನಡೆಸಿಕೊಂಡರು ಎಂಬುದು ರಾಜ್ಯಕ್ಕೆ ಗೊತ್ತಿದೆ. ಪಕ್ಷಕ್ಕೆ ಏನೂ ಕೊಡುಗೆ ನೀಡದವರು ತಾವು ಹೇಳಿದ ಹಾಗೆ ಸರ್ಕಾರ, ಪಕ್ಷ ಕೇಳಬೇಕು, ತಾನು ಸೂಚಿಸಿದವರಿಗೆ ಮಾತ್ರ ಟಿಕೆಟ್‌ ನೀಡಬೇಕು ಎಂಬಂತೆ ವರ್ತಿಸಿದ್ದು ಸರಿಯಲ್ಲ’ ಎಂದರು.

‘ರಾಜ್ಯವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ, ಅಭಿವೃದ್ಧಿಯ ದೂರದೃಷ್ಟಿ ಇರುವ ಸಮರ್ಥ, ಯೋಗ್ಯ ವ್ಯಕ್ತಿ ಮುಖ್ಯಮಂತ್ರಿ ಆಗಬೇಕು’ ಎಂದು ಅಭಿಪ್ರಾಯಪಟ್ಟರು.

ದಕ್ಷಿಣದ ಕುದುರೆಗಳನ್ನು ಕತ್ತೆ ಅಂದುಕೊಂಡರು: ‘ಬಿಜೆಪಿಯವರು ರಾಜ್ಯದ ನಾಯಕರನ್ನು ಬಹಳ‌ ಕೆಟ್ಟ ರೀತಿಯಲ್ಲಿ ‌ನೋಡಿದರು. ದಕ್ಷಿಣ ಭಾರತದ ಕುದುರೆಗಳನ್ನು ಕತ್ತೆ ಅಂದುಕೊಂಡಿದ್ದೇ ಇದಕ್ಕೆಲ್ಲ ಕಾರಣ. ಕರ್ನಾಟಕದ ನಾಯಕರನ್ನು ಬಿಟ್ಟು ಏನು ಬೇಕಾದರೂ ಮಾಡಬಲ್ಲೆವು ಅಂದುಕೊಂಡಿದ್ದರು. ರಾಜ್ಯದ ಮತದಾರರು ಆ ಪಕ್ಷದ ರಾಷ್ಟ್ರನಾಯಕರಿಗೆ ಸರಿಯಾದ ಪಾಠ ಕಲಿಸಿದ್ದಾರೆ’ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

‘ಬ್ರಾಹ್ಮಣರ ವಿಚಾರವಾಗಿ ನಾನು ಆರು ತಿಂಗಳ ನಂತರ ಸುದ್ದಿಗೋಷ್ಠಿ ಮಾಡುತ್ತೇನೆ. ರಾಜ್ಯದಲ್ಲಿ ಏನಾಗಿದೆ ಎಂಬ ಬಗ್ಗೆ ದಾಖಲೆಗಳಿವೆ. ಬ್ರಾಹ್ಮಣರ ಬಗ್ಗೆ ಮಾತನಾಡುವುದಕ್ಕೆ ಭಯವಿಲ್ಲ. ಯಾರ ಅಂಕುಶವೂ ನನಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT